ಅಗಲಿ ಇರಲಾರನೋ
ಮರೆತು ಇರಲಾರೆನೋ ನಿನ್ನನ್ನಾ ||
ಒಲಿದವನೆ ನಲಿದವನೆ
ಹೃದಯವನೆ ಗೆಲಿದವನೆ
ಘಾಸಿಯಾಗುವೆನೊ ನಾನಾ | ಮದನಾ
ಮರೆತಿರಲಾರೆ ನಿನ್ನಾ ||

ಸ್ಮರನ ಹೂವಿನ ಬಾಣ
ಹೊಕ್ಕಾವೊ ಹೃದಯವನಾ
ಅಬಲೆ ನಾ ಮಾಡಲೇನಾ?
ತರುಣಿಯ ವಿರಹವ
ಮರೆಯಬೇಡೆಲೊ ಚೆಲುವ
ಶರಣಾಗಿ ಬಂದೆನೋ ನಾ
ಹೂವಿನ ಹಾಸಿಗೆ | ಸುಡುಸುಡುವ ಬೇಸಿಗೆ
ಘಾಸಿಯಾಗುವೆನೊ ನಾನಾ | ಮದನಾ
ಮರೆತಿರಲಾರೆ ನಿನ್ನಾ ||

ಸಂಗಡಿಸಿದಾಗೊಮ್ಮೆ
ವಿಂಗಡವ ನುಡಿಯುವಿರಿ
ಪಂಗಡವೆ ಮನದೊಳಗೆ?
ಏನೆ ಹೇಳಿದರೂನು
ಕಣ್ನ ಕುಡುಗೋಲನ್ನು
ಇರಿಯುವಿರಿ ಒಡಲೊಳಗೆ
ನಂಬಿ ಬಂದೆನೊ ಸ್ವಾಮಿ | ನಾಚಿಕೆಗೊಳಿಸಿದರೆ
ಘಾಸಿಯಾಗುವೆನೊ ನಾನಾ | ಮದನಾ
ಮರೆತಿರಲಾರೆ ನಿನ್ನಾ ||

ಮ್ಯಾಲೆ ಸೂರ್ಯನು ಉಂಟು
ನೀಲಿಯೇರಿದೆ ಬಾನು
ಹುಚ್ಚು ಆಡರಿದೆ ಕಾಡಿಗೆ
ಹಕ್ಕಿ ಹಾರ್ಯಾಡ್ಯಾವು
ಹಾಡುತ ಏನಂತ
ನಾವು ಹಂಗಿಗರೊ ಮೈಗೆ
ಒಡಲಿನ ಕೊಡುಕೊಳೆ | ಮರೆತು ಕುಂತಿರಿ ಸ್ವಾಮಿ
ಘಾಸಿಯಾಗುವೆನೊ ನಾನಾ | ಮದನಾ
ಮರೆತಿರಲಾರೆ ನಿನ್ನಾ ||

(ಸಾಂಬಶಿವ ಪ್ರಹಸನ)