ಯಾರೋ ಯಾರೋ ಮೈಬಂಗಾರದ ಜಂಗಮರಿವರ್ಯಾರೋ
ಸೈ ನನ ಸದ್ಗುರು ಸಂಗಮ ದೇವರು ಬಾ ಶಿವನೇ ಬಾರೋ!

ಗಾಳಿ ಬಿಸಿಲು ಮಳೆ ನೆರಳಿನ ಜೊತೆ ಕೈಕೂಡಿಸಿ ನಡೆದವರು
ಹಸಿಯ ಮಣ್ಣು ಹುಸಿಯಲ್ಲವೆಂದು ಹಸಿರಿಗೆ ಖುಶಿಯಾದವರು
ಆದರು ಹೂವೂ ಹಸಿರೂ ಕಣ್ಣಿನ ಕೊಡುಗೆಗಳೆಂದವರು
ಇರುವು – ತೋರಿಕೆಯ ಮಧ್ಯೆ ಇರುವ ನಿಜವರಿಯಲು ಹೋದವರು ||

ಅಧೋಲೋಕಗಳ ಕದಾ ತೆರೆದು ಕರಿರಾತ್ರಿಯ ಕರೆದವರು
ಎದುರು ಬದುರಿನಲಿ ಕುಳಿತು ಕತ್ತಲೆಯ ಗುಟ್ಟ ನುಡಿಸಿದವರು.
ಕಪ್ಪು ಗುಟ್ಟುಗಳ ಹೆಪ್ಪು ಹಾಕಿ ಕಡೆಕಡೆದು ನೋಡಿದವರು
ತೇಲಿಬಂದ ಬಿಳಿಕುದುರೆಯೇರಿ ಆಕಾಶಕೆ ನೆಗೆದವರು ||

ಹದ್ದಿನ ಕಣ್ಣಿನ ಸರಹದ್ದಿನ ಸಾಮ್ರಾಜ್ಯವಾಳಿದವರು
ಸೊನ್ನೆಯ ಸೂರ್ಯನ ಕರಗಿಸಿ ನೆತ್ತಿಯ ಕಣ್ಣಲಿ ಕುಡಿದವರು
ನಂಬಿದ ಮಣ್ಣಿನ ನೆನಪಾದರೆ ಹೊಂಬೆಳಗುತ ಇಳಿದವರು
ಸರಳ ಸತ್ಯಗಳ ಪ್ರತಿಮೆ ಉಪಮೆಗಳ ಉಡಿಯಲಿ ತಂದವರು ||

ನಾವೊ ಪ್ರತಿಮೆಗಳ ಅರಿಯದೆ ಕೋಶದ ಶಬ್ದಗಳೆಂದವರು
ಪಶುವಿನ ಮಾಂಸವ ಹಾಡಿ ಹೊಗಳಿ ವೈಭವಿಸುವ ಲೌಕಿಕರು
ನಮಗೆ ಉಂಟು ರಕ್ಕಸರು ನಮ್ಮ ಜತೆ ಕೂಡಿ ಬದುಕಲಿಕ್ಕೆ
ನಮ್ಮ ಭವಿಷ್ಯಕೆ ಕಾದಿರುವರು ಬಿಡಿ; ಅದೇ ಬೇರೆಯ ಕಥೆ ||