ಮೊದಮೊದಲು ಹೀಗಿರಲಿಲ್ಲ ಈ ಕರಿಹೈದ
ತುಂಬ ಸಂಕೋಚದವ. ನೋಡಿದರೆ ಬಾಡಿ
ಮೂಲೆಯಲ್ಲಿ ಮುದುಡುತ್ತಿದ್ದ. ಮಾತಿಗೊಮ್ಮೆ
ತಪ್ಪಿತಸ್ಥರ ಹಾಗೆ ಹಸ್ತ ಹೊಸೆಯುತ್ತಿದ್ದ.

ಯಾರೋ ನೆಂಟರ ಪೈಕಿ;
ಕೈತುಂಬ ಕೆಲಸದ, ತಲೆತುಂಬ ಯೋಚನೆಯ ನನಗೆ
ಇನ್ನಿವನ ಹೆಸರು ಕೇಳೋದಕ್ಕೆ ಸಮಯವೆಲ್ಲಿ?
ಮನೆಗೆಲಸ ಮಾಡಿಕೊಂಡಿರಲಿ ಎಂದೆ. ವರ
ಪಡೆದಂತೆ ಖುಷಿಗೊಂಡ ಹೈದನ ಕಣ್ಣಿನ ಬಲ್ಬು
ಫಕ್ಕನೆ ಹೊತ್ತಿ ಕರಿಬೆಳಕು ಮನೆತುಂಬಾಡಿದಾಗ
ಗಾಬರಿಯಾಗಿ ನನ್ನ ಇಡಿಮೈ ನಡುಗಿದ್ದು ನಿಜ.
ಕೆಲವರ ಕಣ್ಣು ಹೀಗೂ ಇರಬಹುದಲ್ಲ!

ಆಮೇಲೂ ಅಷ್ಟೆ; ಒಂದು ತಕರಾರಿಲ್ಲ. ಅನಗತ್ಯ
ಮಾತಿಲ್ಲ. ಎಷ್ಟೆಂದರಷ್ಟೆ; ಲೆಖ್ಖ ಹಾಕಿದ ಹಾಗೆ.
ಹೊಸಬರ್ಯಾರಾದರೂ ಮನೆಗೆ ಬಂದರೆ ಮೈಮ್ಯಾಲೆ ಬಿದ್ದು
ಪರಿಚಯಿಸಿಕೊಳ್ಳೋದಿಲ್ಲ, ಹಲ್ಲುಗಿಂಜೋದಿಲ್ಲ.

ಬಂದವರು ಹೋದ ಮ್ಯಾಲಾದರೂ ಅಯ್ಯಾ
ಅವರ್ಯಾರೆಂದು, ಕುಲಗೋತ್ರ ಏನೆಂದು
ಕೇಳಿದವನಲ್ಲ. ಬಂದವರು ಬಂದೇ ಇರಲಿಲ್ಲ
ವೆಂಬಂತೆ ನಿರುಮ್ಮಳಾಗಿ ಮುಂಚಿನ ಕೆಲಸ
ಮುಂದುವರಿಸುತ್ತಿದ್ದ.


ನಾನವನ ಸಮ ನೋಡಿರಲಿಲ್ಲ, ಇಲ್ಲೀತನಕ.
ಕಣ್ಣಿಗೆ ಚಾಳೀಸು ಬಂದಾದ ಮೇಲೆ ನೋಡುತ್ತೇನೆ:
ನೆರಳು ಇಲ್ಲವೆ ಕತ್ತಲೆ ಹೆಪ್ಪುಗಟ್ಟಿದಂಥ ಕರಿಮೈ
ಕೊಬ್ಬಿ ಕಟುಕನ ಹಾಗೆ ಬೆಳೆದಿದ್ದಾನೆ!
ಹದಿಹರೆಯದಲ್ಲಿ ಅದೊಂದು ಥರ –
ಕಾಲಡಿ ಮುದುಡಿ ಕಾಣದ ಹಾಗೆ ಅವಿತಿದ್ದ ನೆರಳು
ಈಗ ಸಂಜೆಯ ಹೊತ್ತು ಇದ್ದಕಿದ್ದಂತೆ ಉದ್ದೋ ಉದ್ದ
ಎದುರಿಗೆದ್ದರೆ ಹ್ಯಾಗೋ ಹಾಗೆ!
ಗಾಬರಿಯಾದೆನೆ?

ಈಗೀಗಂತು ಆತನ ಸಲಿಗೆ ಇದ್ದದ್ದೂ ಜಾಸ್ತಿ.
ಭಾರಿ ಪರಿಚಿತರಂತೆ ಹೇಳಕೇಳದೆ ಎಲ್ಲೆಂದರಲ್ಲಿ
ಮನೆತುಂಬ ಅಲೆದಾಡುತ್ತಾನೆ. ಎಳೆತನದ ಕಿಲಾಡಿತನಗಳ
ಹೇಳಿ ನಗಾಡುತ್ತಾನೆ. ಬೆಡ್ ರೂಮಿಗೂ ನುಗ್ಗಿ ಈ ನಡುವಿನ
ಬೆತ್ತಲೆ ಮಜಗಳನ್ನ ಭುಜ ಕುಣಿಸಿ ಹೇಳುತ್ತಾನೆ.
ಹೊರಬೀಳೊ ಎಂದರೆ ಹಲ್ಲು ಕಿರಿದು ಹೆದರಿಸುತ್ತಾನೆ!

ಮೊನ್ನೆ, ರಾತ್ರಿ ಅಚಾನಕ ಎಚ್ಚತ್ತು ನೋಡಿದರೆ ನನ್ನ ದಿಂಬಿನ ಬಳಿ ಕೂತು
ಲೆಕ್ಕ ಬರೆಯುತ್ತಿದ್ದ. ಹೆದರಿ ಹೆಂಡತಿಯನ್ನೆಬ್ಬಿಸಿದರೆ
ಪೆನ್ನು ಕಾಗದ ಚೆಲ್ಲಿ ಕಣ್ಣ ರೆಪ್ಪೆಗಳನ್ನ ಕೋನವಾಗಿಸಿದ.
ಕೋಪದಲ್ಲಿ ಕುದಿದು ದಪ್ಪ ತುಟಿ ಬಿರುಕಿಂದ
ಮುಕ್ಕುಳಿಸಿ ಉಗುಳಿದ ಹಾಗೆ ದ್ರೋಹಿ ಎಂದ.
ಸಾಲ ವಸೂಲಿಗಿದು ಕಾಲವಲ್ಲವೆಂಬಂತೆ
ಬಿರಬಿರನೆ ಹೊರಗಡೆ ಹೋದ!
ಬೆಳಿಗ್ಗೆ ಇದು ಸರಿಯಲ್ಲವೆಂದು ಹೇಳಬೇಕೆಂದಾಗ
ಯಾಕೆಂದು ಗೊತ್ತಿಲ್ಲ, ನನ್ನ ಬಾಯಿಂದ ಮಾತೇ
ಬರಲಿಲ್ಲ. ಸೋಲುತ್ತಿರುವೆನೆ?


ಸೋತೆನೆ?
ನಿನ್ನೆ ಯಾರಿಲ್ಲದಾಗ ಅವ ಬಂದು, ಎದುರಿಗೆ ನಿಂತು,
ಪಿಳುಕಿಸದ ಕಣ್ಣ ಕರಿಬೆಳಕಿನ ಶಲಾಕೆಗಳನ್ನ
ಎದೆಗೆಸೆದು, ನೆತ್ತಿಯ ಮೇಲೆ ಕಾಲಿಡಬಂದ
ಜಂಗಮನಂತೆ ಚಡಪಡಿಸಿದಾಗ –
ನನ್ನೊಳಗವಿತಿದ್ದ ಅವಕಾಶ, ಬುದಿಂಗನೆ ಎದ್ದು
ಹೊರಗಿನಾಕಾಶದ ಜೊತೆ ಮಾತಾಡಲು ಬಾಯ್ದೆರೆದದ್ದೇ
ತಡ, ಗಾಬರಿಯಾಗಿ ನಡುಗಿ ಓಡೋಡಿ
ದೇವರ ಕೋಣೆಗೆ ನುಗ್ಗಿ ಬಾಗಿಲಿಕ್ಕಿಕೊಂಡೆ.
ಗಡಿಬಡಿಸಿ ಕತ್ತಲೆಯಲ್ಲಿ ಇದ್ದಬಿದ್ದ ದೇವರ
ವಿಗ್ರಹಗಳನ್ನ ಚಕಮಕಿ ತಿಕ್ಕಿದೆ.
ಚಿನ್ನದ ಕಿಡಿ ಸಿಡಿಯಲೇ ಇಲ್ಲ!