ನೀರನಳೆಯುವುದಕ್ಕೆ ನನ್ನಲ್ಲಿ
ಮಾನದಂಡಗಳಿಲ್ಲ.
ಅಳೆಯುವ ಪಾತ್ರೆಯ ಆಕಾರವಾಗುವ ನೀರು
ಬಿಟ್ಟರೆ ಹರಿದು, ಇಂಗಿದರೆ ಪಾತಾಳಗಂಗೆ –
ಒಣಗಿದರೆ – ಉಗಿಯಾಗಿ, ಹಾರಿ ಸ್ಪೇಸಾಗಿ,
ಸ್ಪೇಸು ಮಡುಗೊಂಡು ತೇಲಾಡುವ
ಮೋಡವಾಗಿ
ಹರಿವ ನದಿ ಹಾವನ್ನ ಹಾರೈಸುವ ಹದ್ದಾಗಿ.

ಜಡೆಯೇರಿದ ಗಂಗೆ
ತೊಡೆಯ ಮಡುವಾಗಿ
ಸುರಿದು ಸೂರ್ಯನಾರಾಯಣನ ವಿರ್ಯವಾಗಿ
ಹಾಡಿ ಹಸಿರಾಗಿ
ಮಿಡಿವ ಕಣ್ಣೀರಾಗಿ
ನಾನಾಗಿ ನೀನಾಗಿ
ಎರಡೊಂದಾಗಿ
ಹಲವಾಗಿ ಅಂದರೆ –

ಅದೇ ಹೇಳಿದೆನಲ್ಲ,
ನೀರನಳೆಯುವುದಕ್ಕೆ ನನ್ನಲ್ಲಿ ಮಾನ
ದಂಡಗಳಿಲ್ಲ.
ಪಾತ್ರೆಯೂ ಇಲ್ಲ.