ರೆಕ್ಕೆಯ ಹುಳುವೊಂದು ಗಕ್ಕನೆ ನಿಂತಿತು
ಎದುರಿಗೊಂದು ಸೊಡರ
ಕಂಡಿತು | ಬಂಗಾರದ ಸದರ |
ಉರಿಧಾಂಗ | ಸುಖಗಳ ತುದಿಶಿಖರ ||
ದಳದಳ ಅರಳಿದೆ ಬೆಂಕಿಯ ಹೂವಾ
ತಿರುಗಲಿಲ್ಲ ನದರಾ
ಹಾರಿತು | ಹುಳುವಿನ ಮೈಖಬರಾ ||

ಏನ ಮಾದಕಾ ಬೆಳಕಿನೀ ಸುಖ
ಕೆರಳತಾವ ಕನಸ
ಕುದ್ದಾವ | ಹುಳುವಿನ ಮೈಮನಸ |
ಹೆಂಗರೆ | ಮರೆತೆನಿಷ್ಟು ದಿವಸ ||
ಸೂರೆಹೋದವೋ ಮಿರಿಮಿರಿ ಬೆಳಕಿನ
ಸಿರಿಗೆ ನಮ್ಮ ಚಿತ್ತಾ
ವಿರಹಕ | ಎದಿಹೊತ್ತಿತು ತುರತಾ ||

ಈ ಬೆಳಕಿನಾಳ ಅದು ಎಸೆವ ಗಾಳ
ಮೈಸೆಳೆವ ಸೂಜಿಗಲ್ಲಾ
ಬೆನ್ನಿನ | ಹುರಿ ಬಿಗಿದವಲ್ಲಾ |
ತೊಡೆಯಲಿ | ಮಿಂಚು ಹರಿದವಲ್ಲಾ ||
ಅಂತರಂಗದಾ ಶಾಂತಸಾಗರ
ಕಲಕಿ ಹೋದವಲ್ಲಾ
ಹೊಸ ಧಗೆ | ಬಾಯಿ ಬಿಡುವುದಲ್ಲಾ ||

ಹೊಟ್ಟೆಯೊಳಗ ಹೊಸ ಲೋಕವಿಟ್ಟು ಹೊಳೆ –
ದೀರಿ ಕ್ಷಿತಿಜಧಾಂಗ
ಕೈ ಮಾಡಿ | ಕರೆಯತೀರಿ ನಮಗ |
ಜೀರ್ಣೀಸ | ಲಾರೆವಿಂಥ ಬೆರಗ ||
ಮುಳುಗಿ ಮುಳುಗಿ ನಾ ಏಳಬೇಕು ನಿಮ

ಬೆಳಕಿನಾಗ ಮೊದಲ
ಇಲ್ಲವೆ | ನುಂಗಬೇಕು ನಿಮಗ ||

ಹಾರಿ ಹಾರಿ ಹೌಹಾರಿ ಏರಿ
ಸರಿಮಿಂಚತಾವ ಸೊಡರ
ಸೊಡರಿನ | ಮ್ಯಾಲ ಹುಳದ ನದರ
ಅಡರುವ ಮುನ್ನವೆ ರೆಕ್ಕೆ ಸುಟ್ಟವೋ
ಹುಳಾ ಬಿತ್ತು ಕಳಚಿ
ಒಳಗಿನ | ದೀಪ ಬಂತು ಬೆಳಗಿ.

(ನಾಟಕ)