ಹೇಳದೆ ಕೇಳದೆ ಮೈಲಾರಲಿಂಗನ
ಗುಡ್ಡರ ಹಿಂಡೊಂದು ನುಗ್ಗಿ
ಹುಡು ಹುಡು ಹುಡು ಅಂತ ಹುಡದಿಯ ಹಾಕಿದರು
ಮನೆಮಠ ಎರಡೊಂದು ಮಾಡಿ.

ಕುಡಿದ ಕರಡಿಯ ಹಾಗೆ ಹಾರ್ಯಾಡಿ ಕುಣಿದರು
ಬಂಡೆಗಳ ದಿಂಡುರುಳಿದಂತೆ.
ನಾಯಾಗಿ ಕೂಗಿದರು ಹದ್ದಾಗಿ ಎರಗಿದರು
ನಾನವರ ಬೇಟೆ ಎಂಬಂತೆ.

ಕೆಂಡಗಣ್ಣಿನ ಮಂದಿ ಹುಲಿಗಣ್ಣು ಹುರಿ ಮೀಸೆ
ಹೊತ್ತಿಕೊಂಡುರಿಯುವ ಹುಬ್ಬು
ಕಿಡಿಗಳ ಸೂಸುವ ಚಕಮಕಿ ಹಲ್ಲೆದುರು
ಎಲ್ಲೀಗೆ ಓಡಲಿ ಹೇಳು.

ಡಮರು ಪಿಳ್ಳಂಗೋವಿ ಗರಗರ ಗಗ್ಗರ
ರಭಸದ ನಾದಗಳು ಕೆರಳಿ
ಆಗಸದ ಗಂಟೆಗಳು ಡಣಲೆಂದು ಹೊಡೆದವು
ಕಾರ್ಮೊಡ ಘನಘನ ಗುಡುಗಿ.

ಓಡುವ ನನ್ನನ್ನ ಹಿಡಿದು ಹಿಂಗೈ ಕಟ್ಟಿ
ಬಲಿಯ ಪೀಠದಮ್ಯಾಲೆ ಚೆಲ್ಲಿ.
ಹೊಳೆಯೋ ತ್ರಿಶೂಲಗಳ ಝಳಪಿಸಿ ಸಿಡಿಲಂತೆ
ಹೊಡೆದರು ನೆತ್ತಿಯ ಮ್ಯಾಲೆ.

ಚಿತ್ತ ಸಮುದ್ರಗಳು ಪ್ರಕ್ಷುಬ್ಧವಾದವು
ಆಕಾಶ ಗಾಸಿಯಾದಾವು!
ಹುಗಿದಿದ್ದ ಭಾವಗಳ ಇಡಿ ಅಧೋಲೋಕವೆ
ಕಿಡಿ ತಾಗಿ ಸ್ಫೋಟಗೊಂಡಾವು!

ಮೂಡಣ ಬೆಟ್ಟದ ಚಿತ್ತಾರದರಮನೆಯ
ಬೀಗ ಮುದ್ರೆಗಳು ಒಡೆದಾವು
ಚಿಲ್ಲಂತ ಚಿನ್ನದ ಸಿರಿಬೆಳಕು ಸಿಡಿದಾವು
ನೆಲ ಮುಗಿಲು ರಸದಲ್ಲಿ ಮಿಂದು.

ಅರಳಿದವು ಕಣ್ಣುಗಳು ಅಂತೆಯೇ ಹೃದಯಗಳು
ಹುಣ್ಣಿಮೆಯ ಕಡಲಾಗಿ ಉಕ್ಕಿ
ಪರಿಮಳದ ಪವನಗಳು ಎಲ್ಲಿಂದ ಬೀಸಿದವು?
ಇವಳ್ಯಾರು ಆಕಾಶದಲ್ಲಿ?

ದಳದಳ ಅರಳಿದ ಮುಂಜಾನೆ ಮೋಡದಲಿ
ಲಂಬಾಣಿ ಹುಡುಗಿಯೊಬ್ಬಾಕಿ
ನಗೆಯಿಂದ ಯೌವನ ಸಿಂಗರಿಸಿಕೊಂಡಾಕಿ
ಹಂಬಲದ ಹೂವ ಮುಡಿದಾಕಿ.

ಹಿಂಡು ಗುಡ್ಡರನೆಲ್ಲ ಹೈ ಅಂತ ಹಯಮಾಡಿ
ಬೆಳಕಿನ ತೇರಿಗೆ ಹೂಡಿ
ಹೊರಟಳು ಹತ್ತಲು ನನಗೆ ಸನ್ನೆಯ ಮಾಡಿ
ಎಚ್ಚೆತ್ತೆ; ಮೈತುಂಬ ಬೆವರು!