ನೀನು ರಾಕ್‌ ಹಕ್ಕಿಯೆಂದು ನನಗೆ ಗೊತ್ತಾಗಿತ್ತು.
ನಮ್ಮನ್ನು ಕೊಂಡೊಯ್ದು ಇತಿಹಾಸದ ಕುಹುಕದೃಷ್ಟಿ
ಬೀಳದಲ್ಲಿ ಜೋಪಾನ ಬಚ್ಚಿಟ್ಟು
ಬಲಿತು ನಡೆವನಕ ಕಾಪಿಟ್ಟು
ಕ್ಷಿತಿಜದ ಖಜಾನೆಗಳ ಯಜಮಾನರಾಗಿ ಹೊರಬರುವ
ಪವಾಡ ಮಾಡುವಿಯೆಂದು ತಿಳಿದಿತ್ತು.
ಹಳೆಜಿಡ್ಡು ಕಳೆದು ಹೊಸ ಕಾಲಿಗಂಟುವುದಕ್ಕೆ
ನನಗೊಂದಿಷ್ಟು ಸಮಯ ಬೇಕಿತ್ತು. ಅದಕ್ಕೇ
ಹಾರುವ ನಿನ್ನ ತಡೆಯುವುದಕ್ಕೆ
ರೆಕ್ಕೆಗೆ ಗುರಿ ಹಿಡಿದರೆ ತಪ್ಪಿ
ಎದೆಗೇಟು ಬಿತ್ತು. ಅದಕ್ಕೂ ನೀನು

ರಕ್ತವಿದೆಕೋ ಮಾಂಸವಿದೆಕೊ ಅಂತ ಹಲುಬಿದಾಗ
ಹಸುವಿನ ರಕ್ಷಣೆಗೆ ವೈಕುಂಠ ಅವತರಿಸಲಿಲ್ಲ.
ರಾಮನ ಮುಖವಾಡ ನಿನ್ನ ಕಾಪಾಡಲಿಲ್ಲ.
ನೀ ಬಿದ್ದ ಭಂಗಿ ನಡುಗುವ ನನ್ನ ನೋಡಿ
ಕನಿಕರಿಸಿದಂತಿತ್ತು.
ನೆಲದ ಮೇಲಿನ ನೆರಳು ನೆತ್ತರಲ್ಲದ್ದಿ
ಒದ್ದೆಯಾಗಿತ್ತು.
ಕಥೆಯ ನಾಯಕನಂತೆ ಹೇಳವರ ಬಾಯಲ್ಲಿ ಸತ್ತದ್ದೇ
ನಿನಗೆ ಸದ್ಗತಿಯಾಯ್ತು.

ನಮಗೇನು ಸುಖವೇ? ನೋಡು ಏನೇನಾಗಿದೆ:
ನಿನ್ನ ನೆತ್ತರು ಬಿರುಗಾಳಿಗಳನ್ನ ಎಚ್ಚರಿಸಿ
ಅವು ಬೀಸಿ, ಕೂತವರ ಕಣ್ಣಿಗೆ ಮಣ್ಣೆರಚಿ
ಹಸಿರು ಹುರುಪಳಿಸಿದೆ.
ದೇಶದ ನಕಾಶೆಗಂಟಿದ ಹಸಿರಕ್ತದ ಕಲೆಯಿನ್ನೂ
ಹಾಗೇ ಇದೆ.

ನೀನೇನೋ ವಿದೇಶಿಗೆ ಪರ್ಯಾಯ
ಪರಿಧಿಯ ತೋರಿ
ಕೋಲೂರಿದಿ ಕಾಲದ ಪರಿವೆಯಿಲ್ಲದೆ.
ನಿನ್ನ ಹೆಜ್ಜೆಗಳಲ್ಲಿ ಹೆಜ್ಜೆಯಿಟ್ಟು ನಡೆಯೋಣವೆಂದರೆ
ಹೆಜ್ಜೆ ಮೂಡಿದಲ್ಲೆಲ್ಲ ರಾಡಿ ರೊಚ್ಚು.
ನೀನು ಸಾಯುವಾಗ ಹೇ ರಾಮಾ ಅಂದಿದ್ದಕ್ಕೆ
ನಾನೂ ರಾಮಾ ರಾಮಾ ಅಂದರೆ
ಎಷ್ಟೆಲ್ಲ ರಾದ್ಧಾಂತವಾಯ್ತು ದೇಶದ ತುಂಬ!
ಮುದಿಯನ ಸೆಲ್‌ ವೀಕಾಗಿದೆ ಬನ್ನಿರೋ
ಅಡ್ಡ ಬಂದರೆ ಮುರಿಯಿರೋ
ಉದ್ದ ಬೆಳೆದರೆ ತರಿಯಿರೋ
ಎಂದು ಕಿಡಿ ತಾಗಿಸಿದರೆ
ಬೃಹದಾರಣ್ಯಕ ಭಸ್ಮ.

ನಮಗೊಂದೆ ಭರವಸೆ ಈಗಲೂ
ಕೈಕಾಲು ಕಿತ್ತರೂ
ನಗುವ ಗೊಂಬೆ ನೀನು!