ಗೋರಿಯಿಂದೀಗಷ್ಟೆ ಎದು ಬಂದ,
ಬೆಳಕು ಆರಿದದೀಪ ಕಣ್ಣಲ್ಲಿ ಮಣ್ಣಿತ್ತು
ಈಜಿ ಸತ್ತಂಗಿತ್ತು, ತೆರೆಹೊಡೆದ ಗುರುತಿತ್ತು ಎದೆಯ ಮ್ಯಾಲೆ.
ಕೂದಲಿಲ್ಲದ ಬುರುಡೆ ಹೊಳಪು ಬೇರೆ.
ತುಟಿಗಳಿಲ್ಲದ್ದಕ್ಕೆ ಹಲ್ಲು ದವಡೆಯನಲುಗಿ
ಎಷ್ಟು ತಪ್ಪಿದೆಯೆಂದು ಪಟ್ಟಿ ಒಪ್ಪಿಸಿದ.

ಇದರ ಬದಲದು ಇದ್ದು ಅದರ ಬದಲಿದು ಇದ್ದ-
ರೆಷ್ಟೊಂದು ಸೊಗವಿತ್ತು, ಹೌದು? ಎಂದ.
ಗೊತ್ತಿರದ ಉತ್ತರವ ನಾನು ಹೇಳುವ ಮೊದಲೆ
ಒಪ್ಪಿಕೋ ತಪ್ಪು ಎಂದ.

ನಾನು ಕಾಣದ್ದನ್ನ ಕಂಡಿರುವೆನೆಂದ
ಮಾಡಲಾರದ್ದನ್ನ ಮಾಡಿರುವೆನೆಂದ
ನಾನು ಇರದಲ್ಲಿಂದ ಇದ್ದು ಬಂದಿದ್ದೇನೆ
ಬೇರೆಯೇ ಗೇಟಿಂದ ನುಗ್ಗಿರುವೆನೆಂದ.

ಇದ್ದಕಿದ್ದಂತೆಯೇ ಕುಸಿದು ಕೂತ,
ತನ್ನ ಮಣ್ಣಿನ ಕಣ್ಣು ಒದ್ದೆಯಾಗಿಸಿದ.
“ತಗೋ ನಿನ್ನ ವಂಶಜರ ಆಸೆ, ಆಶೀರ್ವಾದ”
ಕೂದಲುಂಡೆಯನೊಂದ ಮುಂದೆ ಹಿಡಿದ.

ಇದರಿಂದ ಬಲೆಯೊಂದ ಹೆಣೆಯೊ ಅಂದ –
ನೀರಲೀಜುವ ಬೆಳ್ಳಿಮೀನು ಹೊಳೆಯುವ ಚಂದ್ರ
ಬಲೆಬೀಸಿ ಅವನನ್ನು ಹಿಡಿಯೊ ಅಂದ,
ಹಿಡಿಯದಿದ್ದರೆ ಬದುಕು ವ್ಯರ್ಥವೆಂದ.

ಕೂದಲೆಳೆ ಬಿಟ್ಟಿಯೋ ಸಿಕ್ಕಲಾರದು ಮತ್ತೆ
ಹಿಡಿದುಕೋ ಭದ್ರ ಅಂದ.

ಆದರೆಚ್ಚರ,
ಕೂದಲುಂಡೆ ಕೈಜಾರಿ ನೆಲಕ್ಕೆ
ಬೀಳದ ಹಾಗೆ ನೋಡಿಕೊ ಅಂದ.
ಬಿದ್ದಿತೇ?
ಕೂದಲು ಮಣ್ಣಾಗಿ, ಹುಲುಸು ಹುಲ್ಲಾಗಿ ಬೆಳೆದು
ಕೈಕಾಲಿಗೆ ಸುತ್ತಿ ತೊಡರದ ಹಾಗೆ,
ಮೈಮರೆಸಿ ನಿನ್ನನ್ನೂ ಮಣ್ಣು ಮಾಡದ ಹಾಗೆ
ನೋಡಿಕೋ ಜೋಕೆ ಎಂದ.

ಬಲೆಯ ಹೆಣೆಯುವಾಗ,
ಹಸಿರಿನ ಕಣ್ಣಲ್ಲಿ ಬೆಳಕಾಡಿತೇ?
ಹೂವಿನ ತುಟಿಯಲ್ಲಿ ಜಿನುಗಿತೆ ಹಾಡು?

ಈಗ ಅವಸರ ಮಾಡಿ ಬಲೆಯ ಪೂರ್ತಿ ಮಾಡು
ಕುಕ್ಕರಗಾಲಲ್ಲೆ ಕೂತ ತಾಯಿ ಕಂಡಳೆ? ನೋಡು:
ಅಂದ ಶಬ್ದಗಳನ್ನ ಹೊಳೆವ ವಸ್ತುಗಳಾಗಿಸಿ ಲಕಲಕಿಸುವಾಕೆ,
ತನ್ನ ತೊಡೆಯೊಳಗಿಂದ ಹರಿದು ಬರುವ ಜೀವನದಿಯಲ್ಲಿ
ಸದರಿ ವಸ್ತುಗಳನ್ನು ತೇಲಿಸುವಾಕೆ, ಆ ಜೀವನದಿ ಕಂಡಿತೇ?

ನದಿಯಲ್ಲಿ ಕಂಡೀತೇ ಹೊಳೆವ ತಾರಾಲೋಕ?
ಮೀನಾಗಿ ಈಜುವನು ಬೆಳ್ಳಿಚಂದ್ರ!
ಇದೆ ಸಮಯ ಸಮನೋಡಿ ಬಲೆಬೀಸು. ಸಿಕ್ಕಿತೇ?
ಎಲ್ಲ ಪೂರ್ವಜರನ್ನ ಜ್ಞಾಪಿಸಿಕೊ ಅಂದ.
ಸಿಕ್ಕದಿದ್ದರೆ ನೆಪ್ಪಿರಲಯ್ಯಾ, ಸಾಯುವ ಮುನ್ನ
ಹರಡಿದ ಬಲೆಯ ಕೂಡಿಸಿ ಒಟ್ಟಿ
ನಿನ್ನ ಕೂದಲನ್ನೂ ಅದಕ್ಕೆ ಸೇರಿಸಿ, ಉಂಡೆಯ ಮಾಡಿ
ಎದೆಯ ಮ್ಯಾಲಿಟ್ಟುಕೋ ಅಂದ.
ಅಂದು ಅನ್ನುತ್ತಲೇ ಗೋರಿಯೊಳಗಡೆ
ಪುನಃ ಮಾಯವಾದ.