ಈ ಕಾಡು ನದಿ ಮಣ್ಣು ದೇವರ ಕಾಯಾ
ಏನಂತ ಹಾಡಲಿ ದೇವರ ಮಾಯಾ ||

ಗುಡ್ಡದಂಚಿಗೆ ಬೆಳ್ಳಿ ಚೆಲ್ಲುವ ಚಂದಿರಗೆ
ಬಾನಲ್ಲಿ ಕಣ್ಣು ಹೊಡೆಯುವ ಚಿಕ್ಕೆಗೆ
ಹೊಳೆಯ ನೀರಿನ ಹೊಳೆವ ತೆರೆಗಳ ನಗಿಸುವ
ಕಿರಣಿಸುವ ಸೂರ್ಯನಿಗೆ ಶರಣೆನ್ನುವೆ ||

ಬೆದೆಕುದಿವ ಬೆನ್ನೀನ ಹುರಿ ಬಿಗಿದ ಮಣಕಿಗೆ
ನಡೆಯುವ ನಡೆಯೆಲ್ಲ ಥೈ ಕುಣಿತವೆ
ಹಳೆಯ ದೇವರನೆಲ್ಲ ಪಳಗಿಸಿ ನಗುವಂಥ
ಕೂಸಿನ ಕಣ್ಣೊಳಗೆ ಕಮಲಗಳೆ ||

ಚಿಮ್ಮುವ ಹೂವಿನ ಘಮ್ಮಾನ ವಾಸನೆ
ಸುಮ್ಮಾನ ಸಡಗರಕೇನೆನ್ನಲೇ
ಸುಡುಗಾಡದೊಳಗಡೆ ಹೂಬಿಡುವ ಮುಳ್ಳಿಗೆ
ಏನೆಂಬ ಹೆಸರಿಂದ ಕರೆಯುವೆನೆ ||

ಒಣನೆಲದ ಬಿರುಕಿನಲಿ ಉದ್ಗಾರದುಸಿರೇನ
ಉಸಿರೆಲ್ಲ ಹಸಿರೀರಿ ಲಕಲಕಿಸಿವೆ
ನೆಲದಾಳ ಅಕ್ಕರೆಗೆ ರೆಕ್ಕೆ ಮೂಡಿವೆಯೇನ
ಚಿಟ್ಟೆಗಳು ಚಿಮ್ಮಿವೆ ಹೂ ಹೂವಿಗೆ ||

ಬದುಕಿನ ಈ ಖುಷಿಗೆ ಕುರುಡಾದ ಮಂದಿಗೆ
ಕಿಲುಬಿದ ಮನಸಿಗೆ ಏನೆನ್ನಲೇ ||
ಸೈತಾನನ ಒಕ್ಕಲಾಗಿ ಕೆಟ್ಟಾಸೆಗಳ ಬಿತ್ತಿ
ನರಕಗಳ ಬೆಳೆವವರಿಗೇನೆನ್ನಲೇ ||

ಕಷ್ಟ ಸಾವಿರವಿರಲಿ ದುಃಖ ಸಾವಿರವಿರಲಿ
ಈ ಬದುಕು ನನಗಿರಲಿ ಶಿವದೇವನೇ
ಸಾವಿರ ಮುಳ್ಳಿರಲಿ ಆದರು ಅದರಲ್ಲಿ
ಒಂದಾರೆ ಅರಳಿದ ಹೂವಿರಲಿ ಶಿವನೇ ||

(ಫಣಿಯಮ್ಮ – ಚಿತ್ರ ಮತ್ತು ಭೋಳೆಶಂಕರ)