ನದಿಯಾಚೆ ದಡದ ತಿಳಿನೀರಿನಲಿ ಚಂದಿರನೆ
ಬೆಳ್ಳಿಮೀನಾಗಿ ಈಜುವನು ಎಂದು
ಬಲೆಹಾಕಿ ಅವನನೀಗಲೆ ಹಿಡಿಯಬೇಕೆಂದು
ಅಂಬಿಗರ ಹುಡುಗ ಹೊರಟಾನು.

“ಗಗನದ ತುಂಬೆಲ್ಲ ಘನಘನ ಘನವೆಂದು
ಗುಡುಗ್ಯಾಡತಾವಲ್ಲ ಮೋಡ
ಪ್ರಳಯದ ನೀರು ನೀರೇ ಎಲ್ಲ ಕಡೆಗೂನು
ಹೋಗಬ್ಯಾಡೆಲೊ ಎಳೆಯ ಹುಡುಗ.”

“ನುಡಿಯಾಚೆಗಿನದೇನೋ ಕೈಮಾಡಿ ಕರೆಯುತಿದೆ,
ಇಗೊ ಹತ್ತು ಬಾ ಸುಖದ ಶಿಖರ.
ಲಗ್ಗೆ ಹಾಕಲೆಬೇಕು ಆ ಬೆಳಕಿನರಮನೆಗೆ
ಈಗ ಸಿಕ್ಕಲೆಬೇಕು ಚಂದ್ರ.”


ನೀಲಿಗಿಂತಾ ಹೆಚ್ಚು ನೀಲಿಯಾಗಿದೆಯಲ್ಲ
ಇಂದ್ಯಾಕೆ ಆಕಾಶ ಹೀಗೆಂದವು.
ಹಲ್ಲುಗಿಂಜುವ ಕ್ಷಿತಿಜ ಹೌಹಾರಿ ಸರಿದಾವು
ಇಂದ್ಯಾಕೆ ದಿಕ್ಕುಗಳು ಹೀಗೆಂದೆವು.

ಹೊಳೆವ ತಾರೆಗಳೆಲ್ಲೊ ಇದ್ದಿಲಾದನುಭವ
ಸುಟ್ಟ ಕನಸಿನ ಸೀದ ವಾಸನೆಗಳು.

ಅಗಬಾರದ್ದಾಗಿ ಹೋಗಿತ್ತು ಅಗಲೇ
ಅದೆನೀರು ಅದೆಗಾಳಿ ಕೈಕೊಟ್ಟು ನಿನ್ನನ್ನ
ನೀರಿನಾಳದ ತಳಕೆ ಎಳೆದಿದ್ದವು.

ತಂಪಾಗಿದ್ದವು ಕಂಚಿನ ದೇವರ
ಆಶೀರ್ವದಿಸುವ ಹಸ್ತಗಳು.


ಅಂಬಿಗರಣ್ಣಾ,
ಕನಸು ತುಂಬಿದ್ದ ನಾವೆಯ ರಭಸಕ್ಕೆ
ಆಳದಲ್ಲಿ ಮುಳುಗಿದ್ದ ವೈಭವಗಳೆಲ್ಲ ಮ್ಯಾಲೆದ್ದು
ತೇಲುವ ಹಾಗೆ ಮಾಡಿದಣ್ಣಾ.
ಚಿಳಿಮಿಳಿ ಮೀನಾಡುವ ಹಾಡುಗಳ ಹೇಳಿ
ನೀರಿನ ನೀರವತೆಯನ್ನು ಭರ್ತಿಮಾಡಿದ ಕವಿಗಾರಣ್ಣಾ,
ಹೊಳೆವ ಆಯುಧದಂತೆ ಝಳಪಿಸುವ ತೆರೆಗಳಲ್ಲಿ
ನಾವೆ ಹೊಗುವಾಗ ಮಳೆಬಿಲ್ಲಿಂದ ಬಿರುಗಾಳಿಯ ಬೆನ್ನಟ್ಟಿ
ಬೇಟೆಯಾಡಿದ ಬೇಟೆಗಾರಣ್ಣಾ –

ಕಾಣದ ವೈರಿಯ ಜೊತೆಗೆ ಕೊನೆಯ ಕಾಳಗವಾದುವಂತೆ
ಹುಟ್ಟು ಹಾಕುತ್ತಿದ್ದ ನಿನ್ನ ಹಟ ಎಲ್ಲಿದೆ ಈಗ?
ನೀರ ಪಳಗಿಸಿದಣ್ಣಾ
ನೀರಲ್ಲಿ ಕನಸುಗಳ ಬಿತ್ತಿ ಹೋದಣ್ಣಾ,
ಅಂಬಿಗರಣ್ಣಾ,
ನೀನು ಮುಳುಗುವಿ ಅಂತ ಅನ್ನಿಸಿರಲೇ ಇಲ್ಲ.
ದೇವರೂ ನಮ್ಮ ಪರ ಇರಲಿಲ್ಲ.
ನೀರಿಗೆ ತಾ ಮಾಡಿದ್ದರ ಅರಿವಿರಲಿಲ್ಲ.

ಅನಂತವನ್ನ ಅನುಕರಿಸಿದ ನಟುವಾನ
ಪೂರ್ಣತೆಯನಣಗಿಸಲಿಕ್ಕೆ ಹೋಗಿ ತಪ್ಪುಮಾಡಿ
ನಗುವಂತಿತ್ತು ನಿನ್ನ ಭಂಗಿ.

ಗುಡ್ಡದಿಕ್ಕಟ್ಟಿನ ದಾರಿಯ ಕತ್ತುಹಿಸುಕುತ್ತ
ಹರಿಯುತ್ತಲೇ ಇದೆ ನದಿ ನಿರಾತಂಕ.


ಸಾವಲ್ಲ ಇದು ದಾಹ.
ಮಿಂಚಾಗಿ ಹರಿದು ಕಾಲನೆದೆಯಲೊಂದು
ಮರೆಯಬಾರದ ಗೆರೆ ಗೀರಿ ಮೆರೆದು
ಮರೆಯಾಗುವ ದಾಹ.
ಸಾವಲ್ಲ ಅಮರ
ಕಸುಗಳೆಂದು ತೋರಿಸುವ ದಾಹ.


ಹುಡುಕಿ ಹೋದದ್ದು ಸಿಕ್ಕಲಿ ಬಿಡಲಿ
ನೀರಲ್ಲಿ ತೊಳೆದ ಹುಣಸೆ ಹಣ್ಣಲ್ಲ ನಿನ್ನ ಕ್ಯಾತಿ –
ಕಿಲುಬಿದ ದೇವರಿಗೆ ಬೆಳಕಾಡುವ ಕಣ್ಣುಕೊಟ್ಟೆ,
ನಿನ್ನ ಲಾವಣಿ ಕೇಳುವ ಕಿವಿಕೊಟ್ಟೆ,
ಮತ್ಸರಿಸುವ ಎದೆಕೊಟ್ಟೆ.
ಖುಷಿಕೊಟ್ಟೆ ಜಲದೇವತೆಗೆ
ನೀರಿಗೆ ಕೊಟ್ಟೆ ಮಹಾಕಾವ್ಯದ ಗೌರವ ರಕ್ಷೆ.

ಮುಳುಗಿದ ನಾವೆಗೆ
ತೇಲುವ ಹುಟ್ಟಿಗೆ
ತಳಹಿಡಿದ ಮೂಳೆಗೆ
ಬೀಳುವ ಸ್ವಾತಿಗೆ
ಸಿಂಪೆಯ ಮುತ್ತಿಗೆ
ನಿಟ್ಟುಸಿರಿನ ಹಬೆಯಾಗುವ ಮೋಡಗಳಿಗೆ
ಮಹಾಕಾವ್ಯದ ಗೌರವ ಕೊಟ್ಟೆ.

ನದಿ ಹರಿಯುತ್ತಲೇ ಇದೆ ನಿರಾತಂಕ.
ಬೆಳೆದ ಕನಸು ತೇಲಿಬರುತ್ತಿವೆ
ವಿಶ್ರಾಂತಿ ತಗೊ ನಾವಿಕ.