ಈ ನಾಡು ಆ ಕಾಡು – ಈ ಎರಡರ ನಡುವೆ
ಜೇಡರ ಬಲೆ ಹೆಣೆದು ಎಷ್ಟೊಂದು ದಾರಿ
ಹರಿದಾಡಿವೆ ನೋಡಿ:
ನಡೆವ ದಾರಿ, ತೆವಳುವ ದಾರಿ, ಸಂಚಿನ
ಒಳಸಂಚಿನ ದಾರಿ, ಗುರಿತಪ್ಪಿಸುವ, ತಲುಪಿಸುವ
ದಾರಿ, ಒಟ್ಟಾರೆ ನಿಮಗಿಷ್ಟು ತಿಳಿದಿರಲಿ
ಇದು ಬದುಕುವ ದಾರಿ.

ಉದಾಹರಣೆಗೆ ನೋಡಿ:
ಕಾಡು ನಾಡಿನ ಮಧ್ಯೆ
ಹಾವಾಗಿ ಹರಿದ ನದಿ, ಅದರ ಬದಿ ದೊಡ್ಡ ಮರ,
ಅದರಡಿಯ ಮನೆಯಲ್ಲಿ ಮಾನವರು ಅವರ ದನಕರು, –
ಇಲ್ಲಿ ಗೋಮುಖ, ಅಲ್ಲಿ ವ್ಯಾಘ್ರನಖ
ಆಹಾಹಾ ಬೇಟೆಯ ರಂಗೇರಿದ ಮೃಗನರನಾಟಕ.
ಇರಿವಕೊಂಬು, ಮಸೆದ ಕೋರೆಹಲ್ಲು,
ಪರಸ್ಪರ ಕಬಳಿಸುವ, ಹೊಂಚುವ ಚೌರ್ಯಾಂಸಿ
ಲಕ್ಷಜೀವರಾಶಿಗಳ ವಾರಾಶಿ ರಾಶಿ ರಾಶಿ!

ಒಬ್ಬೊಬ್ಬರೂ ಘಾಟಿ,
ಇನ್ನೊಬ್ಬರ ಮೈಮರೆಸಿ ಮುಗಿಸಿ
ತಾ ಮೀಸೆ ತೀಡುತ್ತ ಜೀವಿಸುವ ಛಾತಿ.
ಆದರೂ ನೆಪ್ಪಿರಲಿ, –
ಇವರ್ಯಾರೂ ಎಲ್ಲ ಕೊಲ್ಲುವುದಿಲ್ಲ, ಕೊಲ್ಲುವಷ್ಟೇ ಕೊಂದು
ತಿನ್ನುವಷ್ಟೇ ತಿಂದು, ಅದೆಷ್ಟೆಂಬ ಮಿತಿಯನುಸರಿಸಿ
ಉಳಿಸುವಷ್ಟೇ ಉಳಿಸಿ, ಬದುಕುವ ನಿಯತ್ತಿನ ರೀತಿ
ಇವರ ಬದುಕಿನ ನೀತಿ.


ಇಲ್ಲಿ ಇನ್ನೇನೇನು ಇಲ್ಲವೆನ್ನ ಬೇಡಿ; ದೃಶ್ಯ ಬದಲಾದರೆ
ಹಸಿರು ಹಗಲುಗಳಲ್ಲಿ ಹೊಂಬಣ್ಣದ ಸಂಜೆ ಮುಂಜಾವಿನ
ಅಡ್ಡದಾರಿಗಳಲ್ಲಿ ಅಲೆದಾಡುವ ಖುಶಿಗಳಿವೆ.
ಬೆರಗಿನಲ್ಲಿ ಕಣ್ಣು ತೆರೆದರೆ ಮನೆ,
ಮರವು ಪರಿಪರಿಯಾಗಿ ಅರಳಿ, ಹಕ್ಕಿಗಳ ಕಂಠದಲ್ಲಿ
ಸರಿಗಮದ ಸಂಭ್ರಮ ಉಕ್ಕಿಸೋದಿದೆ.
ನದಿ ದಂಡೆಯ ತಬ್ಬಿ ತೆರೆನೊರೆಯ
ಮುತ್ತುರತ್ನಗಳ ಹೇರಳ ರಾಶಿ ಚೆಲ್ಲುವಲ್ಲಿ
ನರನು ಬಾಲಕನಾಗಿ ಹುಳುವಂಟಿಸಿದ ಗಾಳ ಹಾಕಿ
ಬಣ್ಣದ ಮೀನು ಹಿಡಿಯೋದಿದೆ.

ಇದೆಲ್ಲ ಎಲ್ಲಿಯತನಕ? ಕತ್ತಲಾದರೆ ಆಯ್ತು:
ಹರಿದಾರಿಗಳ ಗೀರಿಲ್ಲ, ಕಾಡುನಾಡುಗಳ ಎರಡಿಲ್ಲ
ಒಂದೊಂದೂ ಅಲ್ಲಲ್ಲೇ ಇದ್ದಲ್ಲೇ ಬಿದ್ದು
ಕಟ್ಟಿಸಿದ ಕೊಂಬು, ಕೋರೆಹಲ್ಲಿನ ಸೆಟ್ಟು ತೆಗೆದಿಟ್ಟು
ಕಲರಿನ ಮುಖವಾಡ ಕಳಚಿಟ್ಟು, ಬೆರಳು ಸೀಪುತ್ತ
ಕರಿಮಸಿಯಲ್ಲಿ ಕರಗುತ್ತವೆ.

ಆಕಾಶನೀಲಿಯ ಚಿಕ್ಕೆಗಣ್ಣಿಗೆ ಈಗ ಎಷ್ಟಣ್ಣ ಕಂಡೀತು?
ನದಿಯ ಎದೆಯಲ್ಲಿ ಮೂಡಿರುವ
ಅದರ ನಡುಗುವ ಬಿಂಬವಷ್ಟೆ.


ಆಟ ಕಳೆಗಟ್ಟೋದು ಚಂದ್ರ ಮೂಡಿದಾಗ.
ಮೋಡದ ಮುಸುಕು ಸರಿಸಿ ಹೊರಬಂದ ಚಂದ್ರ
ತಿಂಗಳ ಮಾಯೆಯಲ್ಲದ್ದಿ ತೆಗೆದಾಗ ಚರಾಚರದೀ ಜಗ
ಭಗ್ಗನೆ ಕನಸಿನಲ್ಲಿ ಎಚ್ಚರಗೊಳ್ಳುತ್ತದೆ.
ಬೆಚ್ಚನೆಯ ಕನಸು ಒಂದೆ ಹೊಕ್ಕಳ ಬಳ್ಳಿಗೆ
ಎಲ್ಲರನ್ನು ಎಳೆತಂದು ಬಿಗಿಯುತ್ತದೆ.
ಈಗ ನೋಡಿ ಮಜ:

ನಾಡಿಗೆ ಕಾಡಿನ ಕನಸು, ಕಾಡಿಗೆ ಮರದ ಕನಸು,
ಮರಕ್ಕೆ ಹಕ್ಕಿಯ ಕನಸು, ಹಕ್ಕಿಗೆ ಮೋಡದ ಗೊಂಚಲಿಗೆ
ಬಿಟ್ಟ ಅರಳುಮಲ್ಲಿಗೆ ಚಿಕ್ಕೆಯ ಕನಸು
ಚಿಕ್ಕೆಗೆ ನೀಲಿಕೈಲಾಸದಲಿ ಲೀಲಾಜಾಲ
ತೇಲುವ ಚಂದ್ರನ ಕನಸು
ಚಂದ್ರನಿಗೆ ನದಿಯಾಳದಲ್ಲಿ ಬೆಳ್ಳಿಮೀನಾಗಿ
ಈಜುವ ಕನಸು!

ಅಕಾ ನದಿಯ ದಂಡೆಯ ಮೇಲೆ ಕೂತ
ನರಬಾಲಕನ ಕಂಡಿರಾ?
ಈತನಿಗೆ ಹುಳುವಂಟಿಸಿದ ಗಾಳಹಾಕಿ
ಈಜಾಡುವ ಬೆಳ್ಳಿ ಮೀನನ್ನ
ಹಿಡಿವ ಕನಸು!