ಹಸಿರನ್ನಲ್ಲ,
ಈ ಸಿಟಿಯಲ್ಲಿ ಬಿತ್ತಿ ಬೆಳೆಯುತ್ತಾರೆ
ಮಣ್ಣಿನಿಟ್ಟಿಗೆಯನ್ನ.
ಇಟ್ಟಿಗೆ ಬೆಳೆಯುತ್ತದೆ,
ಕಟ್ಟಡವಾಗುತ್ತದೆ.
ಕಟ್ಟಡ ಆಕಾಶದವಕಾಶವನ್ನ
ಚುಚ್ಚಿ ಬಿಸಿ ಮಾಡುತ್ತದೆ.
ಸೂರ್ಯನ ಬಿಸಿಲಿಗೆ ದೀಪದ ಬೆಳಕಿಗೆ
ಕಿಸಕ್ಕಂತ ಹಲ್ಲು ಕಿರಿದು ಹಳದಿಯ ನಗುತ್ತದೆ.

ಕಟ್ಟಡದ ಇಕ್ಕಟ್ಟು ಸಡಿಲಿ, ಬಿರುಕಿನಲ್ಲಿ
ಹಸಿರು ಇಣುಕಿದರೆ,
ಇಟ್ಟಿಗೆ ಅದರ ಕತ್ತು ಹಿಸುಕಿ ಕೊಲ್ಲುತ್ತದೆ.
ಪಾಪಾತ್ಮ ಹಸಿರು ಹುತಾತ್ಮನಾಗದೆ
ಸಾಯುತ್ತದೆ.

ಗೊತ್ತ ನಿಮಗೆ? – ಈ ಸಿಟಿಯೊಳಗೆ
ಆತ್ಮದ ಮಾರ್ಕೆಟ್ಟಿದೆ.
ತಲೆಯ ಕೊಯ್ದು, ತೊಗಲ ಸುಲಿದು
ತಿಪ್ಪರಲಾಗ ತೂಗು ಹಾಕಿದರೆ ತಗೊ, ಹಲೊ
ಕಾಸಿಗೊಂದು ಕಿಲೊ ಕೊಸರಿಗೊಂದೂ ಕಿಲೊ.
ತಲೆ ತಿಂಬವರಿಗೆ ಸೂಚನೆ:
ಅದು ಹಲ್ಕಿರಿದು ಅಣಕಿಸಿದರೆ
ಹೆದರಬೇಡಿರಿ.