ಅಜ್ಜ ಅಜ್ಜಿಗೆ ಬೇಜಾರು
ನೆನಪೂ ಬೋರು.
ಮಗ ಸೊಸೆ ಆಫೀಸಿಗೆ ಹೋದರೆ,
ಇವರು ಆಡುತ್ತಾರೆ
ಸ್ಕೂಲಿಗೆ ಹೋದ ಮೊಮ್ಮಗನ
ಆಟಿಗೆಯ ಜೊತೆಗೆ;
ರಬ್ಬರಿನ ಹಾವನ್ನ ದೂರ ಎಸೆಯುತ್ತಾರೆ,
ಕಣ್ಣು ಕಟ್ಟಿಕೊಂಡು
ಕೈಯೂರಿ ಪ್ರಾಣಿಗಳಾಗಿ ಹುಡುಕುತ್ತಾರೆ:
ಸಿಕ್ಕರೆ ಶಿಕಾರಿ
ಸಿಗದಿದ್ದರೆ ಭಿಕಾರಿ.
ನೋಡಿದಿರಾ ಈ ದಿನವೂ
ಅಜ್ಜಿಗೇ ಸಿಕ್ಕಿತು ಹಾವು.
ಹಾವು ಕಂಡರೆ ಮುದುಕಿಗೆ ಸಿಟ್ಟು,
ಹಾವಿನ ಗಾಜಿನ ಕಣ್ಣು ಕಿತ್ತು
ಕುಟ್ಟಿ ಪುಡಿ ಪುಡಿ ಮಾಡಿ ಎಸೆದರೆ –
ಈ ಕಡೆ ಕುರುಡ ಮುದುಕ ಕೈಯಾಡಿಸಿ
ಹುಡುಕುತ್ತಾನೆ:
ಎಲ್ಲಿದ್ದೀಯೆ ಮುದುಕಿ?
ಎಲ್ಲಿದ್ದೀಯೆ?
Leave A Comment