ಏನು ಜನ! ಎಷ್ಟೊಂದು ಮಂದಿ, ಮಜ!
ಇಡೀ ಕಲಾಕ್ಷೇತ್ರ ಇಡಿಕಿರಿದು ತುಂಬಿ
ಕೂತ ಜನ ತುಂಬಿ, ನಿಂತಜನ ತುಂಬಿ,
ಕೆಳಗೂ ತುಂಬಿ, ಮ್ಯಾಲ ತುಂಬಿ
ಹೌಸ್ ಫುಲ್ಲಿನ ಬೋರ್ಡು ಒದ್ದೆಸೆದು ನುಗ್ಗುವ
ಆತುರದ ಜನ ತುಂಬಿ ತುಂಬಿ…
ಏನಕ್ಕೆ?
ನನ್ನ ನಾಟಕ ನೋಡುವುದಕ್ಕೆ!

ನಾಟಕವನ್ನ ಅಭಿನಯಿಸಿ, ಅಲಂಕರಿಸಿ
ಕುಣಿದು ಕುಪ್ಪಳಿಸಿ
ಪಾತ್ರಗಳ ಎದೆ, ಸ್ಥಾಯಿಗಳ ಬೆದೆ
ಸಂಚಾರಿಗಳ ಹದವರಿತು ಹಾರಿಸಿ
ಬೆರಸಿ ತೋರಿಸಿದರೆ, ಅರರೇ ಖರೆ ಹೇಳುತ್ತೇನೆ:

ನಿರ್ದೇಶಕನ ಅಹಂಕಾರಕ್ಕೆ ಚಪ್ಪಾಳೆ ಹಾರ ತುರಾಯಿಗಳರ್ಪಿಸಿ
ನಟನ ಭ್ರಮೆ ಬಲೂನಿಗೆ ಇನ್ನಷ್ಟು ಹೊಗಳಿಕೆ ಊದಿ
ಪ್ರೇಕ್ಷಕರ ಮೈಮರೆವಿಗೊಂದಿಷ್ಟು – ಇನ್ನೊಂದಿಷ್ಟು
ಮತ್ತಿನ ಮದ್ದು ಲೇಪಿಸಿ
ಭರತವಾಕ್ಯ ಹೇಳಿ, ತೆರೆಬಿದ್ದಾಗ
ರಂಗಭೂಮಿ ಖಾಲಿ ಖಾಲಿ.

ಈಗ ಎಲ್ಲ ಮಲಗಿದ್ದಾರೆ –
ನಟರು ಅವರ ಭ್ರಮೆಗಳು,
ನೇಪಥ್ಯದ ಕೆಲಸಗಾರರು ಅವರ ಹೆಂಡಿರು ಮಕ್ಕಳು
ನಿರ್ದೇಶಕ ಮತ್ತವನ ಅಹಂಕಾರ,
ಪ್ರೇಕ್ಷಕ ಮತ್ತವನ ಜಾರುದಾರಿಗಳು,
ವಾಚ್ ಮನ್ ಮತ್ತವನ ಸುಖಸಂಸಾರ,

ನಾವಿಬ್ಬರೇ ಈಗ ಎಚ್ಚರಿದ್ದವರು:
ರಂಗಭೂಮಿ ಮತ್ತು ನಾನು.
ನೆತ್ತರೊಡೆವ ಕಣ್ಣಿನಂಥ ಎರಡೆ ದೀಪ ತೆರೆದುಕೊಂಡು
ಎದುರೆದುರೇ ಕೂತಿದ್ದೇವೆ!

ನೆನಪು ನೆರಳುಗಳಾಗಿ, ನೆರಳು ಚಿತ್ರಗಳಾಗಿ
ರಂಗದ ಮೇಲೆ ಗಂಭೀರ ನಡೆದಾಡುತ್ತವೆ.
ವಿಂಗಿನ ಕಡೆ, ಖಾಲಿ ಖುರ್ಚಿಯ ಕಡೆ ಪ್ರಶ್ನೆಗಳನ್ನ
ಅಗಿದುಗಿದು ಎಸೆದು ರಾಚಿ ಉತ್ತರಕ್ಕಾಗಿ ಹಾರೈಸುತ್ತ
ಹರಿದಾಡುತ್ತವೆ.

ಈ ನಡುವೆ ನಾವಿದ್ದೇವೆ – ಅದೇ ರಂಗಭೂಮಿ ಮತ್ತು ನಾನು
ಆಪಾದಿಸುತ್ತ
ಸಮರ್ಥಿಸಿಕೊಳ್ಳುತ್ತ
ಪರಸ್ಪರ ನೋವಿನಲ್ಲಿ ಬೆರಳಾಡಿಸುತ್ತ.