ಹೆರಿಗೆ ವಾರ್ಡಿನ ಆ ಕೊನೆ ಹಾಸಿಗೆಯಲ್ಲಿ
ಚೊಚ್ಚಲ ಬಾಣಂತಿ, ಇನ್ನೂ ಬಾಲೆ
ಅಲ್ಲೆ ಗೋಡೆಯ ಮೇಲೆ ಹೂಬಿಟ್ಟಿದೆ ಬಳ್ಳಿ,
ಗೊತ್ತೇ ಆಗೋದಿಲ್ಲ, ಅದು ಅರಳಿದ್ದು ಕ್ಯಾಲೆಂಡರಿನಲ್ಲಿ!

ಉಳಿದ ಬಾಣಂತಿಯರಿಗೆಷ್ಟೊಂದು ಕರುಳಿನ ಬಳ್ಳಿ;
ಕುಲು ಕುಲು ನಗುವ, ಕೈ ತುಂಬಾ ಕಾಣಿಕೆ ತರುವ
ಬಂಧುಬಾಂಧವ ಮಂದಿ, ಬಾಯ್ತುಂಬ ಬೂಂದಿ.

ಈಕೆಯ ಬಳಿಗ್ಯಾರೂ ಬರೋದಿಲ್ಲ, ನಗೋದಿಲ್ಲ, ಕ್ಷೇಮ ಕೇಳೋದಿಲ್ಲ.
ಗಂಡನೋ ಮಿಂಡನೋ ಈ ಪಿಂಡದ ಕಾರಣಿಕನ
ಸುಳಿವಿಲ್ಲ, ದಾಖಲೆಯಲ್ಲಿ ಅವನ ಹೆಸರೂ ಇಲ್ಲ.
ಹೋಗಲೆಂದರೆ ಈಕೆ ಮೇರಿಯೂ ಅಲ್ಲ; ಹುಟ್ಟಿದ್ದು ಏಸುವಲ್ಲ.

ಇವಳ ಬಳಿ ಸುಳಿವವಳು ನರ್ಸೊಬ್ಬಳೇ,
ಅವಳ ತುಟಿಯಂಚಿಗೂ ವಂಕಿ ನಗೆಯೇ.

ಬರುತ್ತಾರಲ್ಲ, ಬಂಧುಬಾಂಧವ ಮಂದಿ, ಬಂದವರು
ಬಂದು, ಕೊಡುವಷ್ಟು ಕೊಟ್ಟು ನೋಡುವಷ್ಟು ನೋಡಿ
ನೋಡಿದ ಮೇಲೆ, ಎಲ್ಲರ ವಕ್ರ ದೃಷ್ಟಿ ಇವಳ ಕಡೆಗೇ.
ಅವರೆಲ್ಲ ಹಿಂಡು ಕಣ್ಣೊಳಗೆ ಪುಂಡುಪೋಕರಿ ಕಥೆಯ
ಹೆಣೆಯುವವರೆ:

ಇವಳ ತೋಳಿಗೆರಡು ಕಥೆ, ಮುಖಕ್ಕೆ ಮೂರು ಕಥೆ
ಕಣ್ಣಿನೊಳಗಿನ್ನೇಸು ಕಥೆಗಳಿವೆಯೋ!

ಇದ್ಯಾವುದರೆಗ್ಗಿಲ್ಲದ ತಾಯಿ
ಮೈಮರೆತು ಮಾಯಿ
ಹಿಗ್ಗಿ ಹಸಿರಾಗಿ, ಉಬ್ಬಿ ಮೊಗ್ಗಾಗಿ, ಬಿರಿದು ಹೂವಾಗಿ
ಬಗೆ ಬಗೆಯ ಧಗೆಯಿಂದ ಮಗುವನ್ನು ಕುಲುಕಿ
ಪಲುಕುತ್ತ ಲಕಲಕಿಸುತ್ತಾಳೆ ಮಳೆಯೊಳಗಿನ ಮಲೆನಾಡಿನಂತೆ!

ಅಥವಾ,
ನಾವು, ಎಷ್ಟೊಂದು ಕ್ಯಾಲೆಂಡರಿನಲ್ಲಿ ನಿಸರ್ಗವನ್ನಿಟ್ಟು
ಮೊಳೆಹೊಡೆದು ಗೋಡೆಗೆ ನೇತು ಹಾಕುವ ಮಂದಿ,
ಈ ಸರಳ ಮಾತು ನಮಗೆ ತಿಳಿದೀತು ಹ್ಯಾಗೆ?