ನಶ್ಯದಲ್ಲಿ ನಾನಾ ನಮೂನೆಗಳಿವೆ.
ಬಣ್ಣ, ದರ, ತರತಮ ಘಮಘಮ
ಸಣ್ಣ, ನುಣ್ಣಗೆ, ದಪ್ಪ, ಇನ್ನೂ ಅನೇಕ ತರ –
ಮದ್ರಾಸಿನಾರ್ಮುಗಂ ನಶ್ಯ,
ಬೆಂಗ್ಳೂರು ಮಂಗಳಗೌರೀ ನಶ್ಯ,
ಹಳ್ಳಿಹಳ್ಳಿಯ ದೇಶೀ ನಶ್ಯ, ಕೆಲವರಿಗಂತು
ಪ್ಯಾರಿಸ್, ಕೊನೇಪಕ್ಷ ಲಂಡನ್
ಪಿಸ್ತೂಲ ಛಾಪಿನ ನಶ್ಯವಾದರೂ ಅವಶ್ಯ.

ಅವರವರ ಕಸಬು ಅಂತಸ್ತು
ಸ್ಟೇಟಸ್ಸಿಗನುಗುಣವಾಗಿ ಅವರವರ ಬ್ರ್ಯಾಂಡು.
ಅದಕ್ಕೆ ತಕ್ಕ ಹಸಿ, ಬಿಸಿ,
ತನಿ, ಬೆಚ್ಚ , ಉಗುರು ಬೆಚ್ಚಗಿನ ಸುಖ
ಶೀತೋಷ್ಣ ಪರಿಣಾಮಗಳು.

ಒಂದೊಂದು ಬ್ರ್ಯಾಂಡಿನವರಿಗೆ ಒಂದೊಂದು
ಕುಲಗೋತ್ರ ಜಾತಿವರ್ಣ ಮತಗಳುಂಟು,
ನಶ್ಯದ ನಡಾವಳಿಯಲ್ಲಿ ಭೇದಗಳುಂಟು.
ನಿಮಗಿಷ್ಟು ತಿಳಿದಿರಲಿ ಸಾಕು:
ಒಂದು ಬ್ರ್ಯಾಂಡಿಗೂ ಇನ್ನೊಂದಕ್ಕೂ ನೀರಿನ ಬಳಕೆಯಿಲ್ಲ,
ಹೆಣ್ಣುಗಂಡಿನ ಸಂಬಂಧವಂತು ಖಂಡಿತಾ ಇಲ್ಲ.

ಕೆಲವರು ಸೇದುತ್ತಾರೆ; ಕೆಲವರು ಹಾಕಿಕೊಳ್ಳುತ್ತಾರೆ.
ಕೆಲವರು ಮುದ್ದಾಂ ಭರ್ತಿಮಾಡಿಕೊಂಬರು,
ಸರಿಗಮದ ಸಿಂಫನಿಯೊಳೇರಿಸಿಕೊಂಬವರು ಕೆಲವರು.

ಅದೊಂದು ಬಗೆಯ ನಶ್ಯಕ್ಕೆ
(ಹೆಸರು ನೆನಪಿಲ್ಲ)
ಕೆಲ ಮುದುಕರು ಪಂಚೇಂದ್ರಿಯ ಬೆಚ್ಚಗಾಗಿ
ಹನುಮಾನ್ ಚೆಡ್ಡಿ ಹಾಕಿ ಫುಟ್ ಬಾಲ್ ಆಡಿದಂತೆ,
ಸರಿಕ ಮುದುಕಿಯರು ಷೋಢಶಿಯರಾಗಿ
ಹಸ್ತಾಕ್ಷರಕ್ಕೆ ಸುತ್ತುವರಿದಂತೆ
ಕನಸಾಗುವುದಂತೆ!
ಈ ನಶ್ಯದ ವ್ಯವಹಾರ ರಹಸ್ಯವಂತೆ!

ಇನ್ನು ಕೆಲ ಭಯಂಕರರಿದ್ದಾರೆ:
ಆ ಮಾತು ಈ ಮಾತು, ಮಾತು ಮಾತಿನ ಮಧ್ಯೆ
ಸುತ್ತ ಕೂತವರಿಗೆ ಗೊತ್ತಾಗದಂತೆ
ಡಬ್ಬಿಯ ತೂತಿಗೆ ಬೆರಳು ಸೇರಿಸಿ
ನಿಧನಿಧಾನ ನಿಮ್ಮೆ ದುರಿಗೊಂದು ಸವಾಲೆಸೆದು,
ನೀವು ಕೈಮೇಲೆ ತಲೆಹೇರಿ ಕೂತಿರೋ
ಎಳೆಯುತ್ತಾರೆ ಜುರುಕಿ;
ಆಹ! ಬಯಲಾಯಿತೋ ಪರಮಸತ್ಯದ
ಬುರುಕಿ!
ದೇಶೀ ಅರುಂಧತಿಯರೆಲ್ಲ ನಗ್ನರಾಗಿ
ಕಾಕಟೇಲ್ ಸುರಕೊಂಡು ಲಂಡನ್ ಹೋಟಲಲಿ
ಕ್ಯಾಬರಿಸುವರು!
ಇದು ಸ್ವಲ್ಪ ತುಟ್ಟೀ ನಶ್ಯ.

ಕೆಲವರು,
ಮಿದ್ದಿ, ಹದಮಾಡಿ ಬೆವರಲ್ಲದ್ದಿ ಮೂಗಿನಲ್ಲಿ
ಮೊಗಮ್ಮಾಗಿ ಗಮ್ಮಂತ ತುಂಬಿ
ಚಿಟಕೆ ಹೊಡೆದರೋ
ಹಠಯೋಗದಲ್ಲಿ ಸಟ್ಟಂತ ಉಸಿರೇರಿಸಿ,
ಬ್ರಹ್ಮರಂಧ್ರದ ಪಟಲ ಚಟ್ಟಂತ ಸಿಡಿದು
ಕುಂಡಲಿನಿಯ ಬುಡಬೆದರಿ
ಷಟ್ ಚಕ್ರದ ಸಹಸ್ರಾರು ದಳದ
ಹೃದಯಾರವಿಂದವರಳಿ
ನಶ್ಯದ ಡಬ್ಬಿಯಷ್ಟು ಸ್ಪಷ್ಟವಾಗಿ
ಜೀವಾತ್ಮ ಪರಮಾತ್ಮ ನಡುವಿನಾತ್ಮಕ ಟೊಂಕದಾತ್ಮಗಳೆಲ್ಲ
ಕಾಣಿಸುತ್ತವಂತೆ!
ಇದೇ ಶಾಶ್ವತ ಸತ್ಯ
ಇದಕ್ಕೆ ಸ್ಪೆಷಲ್ ನಶ್ಯ ಅಗತ್ಯ.
ನನಗೆ ಮಾತ್ರ
ನಶ್ಯ ಏರಿಸಿದಾಗ ಟಸಟಸ ಹತ್ತೆಂಟು
ಸೀ ಸೀ ಸೀ ಸೀನು ಬಂದು
ಮುಖ ಒದ್ದೆಯಾಗಿ
ಕಣ್ಣಲ್ಲಿ ನೀರು ಬರುತ್ತದೆ!