ನವಿಲೇ ನವಿಲೇ ಚೆಂದೊಳ್ಳೆ ನವಿಲೇ
ನಾದಗಳು ನುಡಿಯಾಗಲೇ!
ಹಾಡಾದ ನುಡಿಯೊಳಗೆ ಬೆಳಕಾಡಿ ಹಾಡಿನ
ಆಚೆ ಸೀಮೆಯ ತೋರಲೇ ||ಪ|

ಶಿವದೇವನಾಯ್ಕರು ಶಿವಪೂರಕೊಡೆಯರು
ವಾರಿಗೆಯ ಮಡದಿ ಮಾದೇವಿ |
ಬಳ್ಳಿಯಂಥವಳಲ್ಲಿ ಸರುವ ಸದ್ಗುಣಗಳು
ಅರಳಿವೆ ಚಂದ ಹೂವಾಗಿ|
ಸತಿಪತಿಯರ ಪ್ರೀತಿ ಹಿತವಾದರೂ ಶಿವಗೆ
ನೀರಿಲ್ಲ ಶಿವಪೂರಿಗೆ ||೧||

ಮಳೆಗಾಲ ಬಂದರೂ ಮಳೆಯಿಲ್ಲ ಶಿವಪುರಿಗೆ
ತೊಟ್ಟು ನೀರಿಲ್ಲ ಕುಡಿವುದಕೆ |
ಮಳೆ ಬರೈ ಶಿವಲಿಂಗ ಸಾವಳಗಿ ಮಠತನಕ
ಒದ್ದೆಯಲಿ ಕೈಮುಗಿದು ಬರುವೆ |
ಸಿಹಿನೀರ ತರುವುದಕೆ ಮಾದೇವಿ ಹೊರಟಾಳು
ದೂರ ಬೆಂಗಾಡಿನ ಕೆರೆಗೆ ||೨||

ಕಾಡಿನಂಗಳದಲ್ಲಿ ಕನ್ಯೆ ಕಾಲಿಟ್ಟಾಗ
ಸಣ್ಣಾನ ದನಿದೋರಿದಾವ |
ದನಿಯಿಲ್ಲದಲ್ಲಿಂದ ದನಿ ಹೆಂಗ ಬಂದಾವು?
ಹೊನ್ನೆಮರ ಕತ್ತೆತ್ತಿದಾವ |
ಹೊನ್ನೀಯ ಮರದಾಗ ಬಣ್ಣ ಬಣ್ಣದ ಹಕ್ಕಿ
ಅವ್ ನೋಡ ನವಿಲು ನಿಂತಾವ ||೩||

ಹವ್ವಲ್ಲೆ ಅಂದಾಗ ನವಿಲು ನಲಿದಾಡಿತ್ತು
ಮುಚ್ಚು ಮರೆಗಳನೆಲ್ಲ ಬಿಚ್ಚಿ |
ನೆತ್ತಿಯ ಮ್ಯಾಗಿನ ತೂಗೊತುರಾಯಿಂದ
ಮುಗಿಲಿನ ಸೀಮೆಯ ಚುಚ್ಚಿ |
ಹೆಂಗೆಂಗ ನೋಡಿದರ ಹಾಂಗಾಂಗ ನಲಿದಾವ
ಎಲ್ಲಿ ನೋಡಿದರಲ್ಲಿ ಅರಳಿ ||೪||

ಕಲ್ಲಾದ ಬೆರಗಿನ ಕಣ್ಣಿಗಿಳಿದವು ಜೀವ
ಉಕ್ಕಿದವು ಮೂಕಾದ ಭಾವ |
ನಗಿಯೆಂಬ ಮಲ್ಲಿಗೆ ಸುರಿದಾಳು ಮಾದೇವಿ
ಬೆಳಸ್ಯಾಳು ಪದುಮದ ಪಾದಾ |
ವಾರಿಗೆ ರಾಯರು ಕಾದಿರಬಹುದೆಂದು
ಅರಮನೆಗೆ ಬಂದಾಳು ಸೀದಾ ||೫||

“ಎಂದಿರದ ಮಾದೇವಿ ಇಂದ್ಯಾಕೆ ತಡಮಾಡಿ
ಬರಿಯ ಬಿಂದಿಗೆಯ ತಂದೆ?”
“ಹಾ ನನ್ನ ದೊರೆ ಕಂಡೆ ಬಣ್ಣದ ನವಿಲೊಂದ
ಕಣ್ಣು ಹಬ್ಬಾದವು ಸಿರಿಗೆ ||
ಹಗಲುಗನಸುಗಳಲ್ಲಿ ಹಣ್ಣಾದ ಕೆರೆಯಲಿ
ಸೆರೆಮುಕ್ಕ ನೀರಿಲ್ಲ ದೊರೆಯೆ” ||೬||

* * *

“ಅತ್ಯಂತ ಉತ್ತಮಳೆ ಇಂದ್ಯಾಕ ತಡಮಾಡಿ
ಬರಿಯ ಬಿಂದಿಗೆಯ ತಂದೆ?”
“ಹರುಷವಾಯಿತು ಸ್ವಾಮಿ ನವಿಲ ಸರಸವ ನೋಡಿ
ಈ ದಿನವು ಬಂತೆಮ್ಮ ಬಳಿಗೆ |
ಕಳ್ಳ ಹೆಜ್ಜೆಯನಿಡುತ ಬಳಿಯೆ ಸುಳಿದಾಡಿದರೆ
ನೀರ ಸುಳಿ ಸಿಗಲಿಲ್ಲ ಖುಶಿಗೆ” ||೭||

* * *

“ಭಾಗ್ಯ ಪಡೆದವರಂತೆ ಹಿಗ್ಗಿರುವಿ ಮಾದೇವಿ
ಇಂದ್ಯಾಕೆ ಬರಿಗೈಲಿ ಬಂದೆ?
ಮೈ ಒದ್ದೆಯಾಗಿರುವಿ – ಏನು ಕಾರಣ ಹೇಳು – ”
“ಮುಚ್ಚುಮರೆ ಏನಿಲ್ಲ ದೊರೆಯೆ |
ಈ ದಿನವು ಬಂದಿತ್ತು ಚೆಲುವ ಚನ್ನಿಗ ನವಿಲು
ನೀಲಿ ನಿಧಿ ಎದ್ದು ಬಂದಂತೆ ||೮||

‘ಹೊಸಪರಿಯ ಆನಂದ ಕರುಣಿಸುವ ಸಿರಿನವಿಲೆ
ಮಳೆಯಿಲ್ಲ ಶಿವಪೂರಿಗೆ |
ಹೊರಗಾಗಿ ನಾರುವೆನು ಮೀಯಲಾರದೆ ನವಿಲೆ
ಕರುಳಿಲ್ಲ ಶಿವರಾಯಗೆ |
ಏನಾದರೂ ಮಾಡಿ ನೀನಾರೆ ಮಳೆ ತಾರೊ
ಸೂರ್ಯನ ಥರ ಹೊಳೆವ ನವಿಲೇ’ ||೯||

ಮನದಿಚ್ಚೆಗಳ ಬಿಚ್ಚಿ ಹೇಳಿದರೆ ನಕ್ಕಿsತು
ಆಕಾಶ ನೀಲಿಯ ನವಿಲು |
ಶಿವದೇವರಾಯನ ಕೆದರೀದ ಜಡೆಯಂತೆ
ನೆತ್ತೀ ತೂರಾಯಿ ನಿಮಿರಿದವು |
ಸೊಕ್ಕುಗಳು ಉಕ್ಕಿದವು ಗರಿಗೊಂಡು ಹರಡಿದವು
ಮೈತುಂಬ ಅರಳ್ಯಾವು ಕಣ್ಣು ||೧೦||

ಕಾಡೆದ್ದು ಕುಣಿದಂತೆ ಹೆಜ್ಜೆ ಹಾಕಿತು ನವಿಲು
ದಿಕ್ಕು ಬಿರಿಯುವ ಕೇಕೆ ಹಾಕಿ |
ಅಂಬರದ ತುಂಬೆಲ್ಲ ತುಂಬ್ಯಾವ ದನಿ ನವಿಲ
ರಂಭೇರ ಕೊಡಗಳು ತುಳಕಿ |
ಬೆದರಿದ್ದ ಮುಗಿಲಿನ ಮದ್ದಾನಿ ಹಿಂಡುಗಳು
ಸುರಿದಾವು ಮದಜಲ ಸೊಂಡೀಲಿ ||೧೧||

ಹೆಂಗ ಕುಣಿದರ ನವಿಲು ಹಾಂಗ ಮಳಿ ಸುರಿದಾವು
ಚಿಕ್ಕೀಯ ಬಲೆಯ ಹೆಣೆಧಾಂಗ |
ಸೂರ್ಯನಾರಾಯಣನ ವೀರ್ಯ ಸುರಿದಾವೇನ
ಶ್ರಾವಣದ ಸರುವು ಜಡಿಧಾಂಗ |
ಅಂತರಾಳದ ಒಳಗ ಅಲಕಾವತಿಯ ತೆರೆದು
ಜೀವರಸ ಭರ್ತಿ ಸುರಿಧಾಂಗ ||೧೨||

ಮಳೆಸುರಿದ ಜೋರಿಗೆ ಸೀಮೆ ಸರಿದವು ಸ್ವಾಮಿ
ಒಡೆದು ಚೂರಾದವು ಪಾತ್ರೆ |
ಹರಕೆ ಪೂರೈಕೆಗೆ ಹೋಗಿ ಬರುವೆನು ದೊರೆಯ
ಸ್ವಾಮಿಯ ಮಠಕ್ಕೆ ಒದ್ದೆಯಲೆ” |
ಹೀಗೆ ಹೇಳಿದ ಗರತಿ ಹಾಗೆ ಹೋದಳು ಮಠಕ್ಕೆ
ಕತ್ತಲಿಳಿಯಿತು ಪತಿಯ ಕಣ್ಗೆ ||೧೩||

* * *

ನೀರಿಲ್ಲದಲ್ಲೆಲ್ಲ ನೀರ್ಯಾಕೆ ನಿಂತಾವು
ಹೆಚ್ಚೀನ ಪತಿವರತಿ ಮಿಂದ ನೀರು |
ಮಾದೇವಿ ಮಿಂದಂಥ ನೀರುಗಳು ಹರಿದಾಡಿ
ಹಸಿರು ವಾಲಾಡಿ ಬೆಳೆದಾವು ||೧೪||

ಕೆಸರಿಲ್ಲದಲ್ಲೆಲ್ಲ ಕೆಸರ್ಯಾಕೆ ನಿಂತಾವು
ತಾವರೆಯ ಮುಖದವಳು ಮಿಂದ ನೀರು |
ಮಾದೇವಿ ಮಿಂದಂಥ ನೀರುಗಳು ಹರಿದಾಡಿ
ತಾವು ತಾವಿನ ಹೂವು ಅರಳಿದಾವು ||೧೫||

ಅಡಿಗಡಿಗೆ ಭಾವಗಳು ಆಡರ್ಯಾವು ಮಡದೀಗೆ
ಮನೆಗೆ ಬರುವಾಗ ಒದ್ದೆಯಲೆ |
ಚಂದಿರ ನಂದ್ಯಾವು ತಾರೆಗಳು ಆರಿದವು
ಇದ್ದಿಲು ಬಿದ್ದಾವು ಮ್ಯಾಲೆ ||೧೬||

ಶಿವದೇವನಾಯ್ಕರು ಮಡದಿಯ ಕರೆದಾರು
“ಒದ್ದೆಯ ತೆಗೆಯೆ ಮಾದೇವಿ |
ಹೊದ್ದಿರುವ ಒದ್ದೆಯ ತೆಗೆದು ಹೊಸ ಸೀರೆಯ
ಉಡುಬಾರೆ ತಂದಿರುವೆ ನೆಯ್ಸಿ” ||೧೭||

ನವಿಲಿನ ರೆಕ್ಕೆಯ ಸಿಕ್ಕಿಸಿ ಹೆಣೆದಂಥ
ಚಿಕ್ಕೆ ಚಂದಿರಕಾಳಿ ಸೀರಿ |
ನವಿಲಿನ ಕಣ್ಣುಗಳ ಕೀಲಿಸಿ ಬರೆದಂಥ
ಬಣ್ಣದ ಬಾರ್ಡರಿನ ಸೀರಿ |
ಅಯ್ಯೊ ದುರ್ದೈವಿಯ ತಲೆಯ ತುರಾಯಿಯ
ಚಿತ್ತಾರ ಬಿಡಿಸಿದ ಸೀರಿ |
ನವಿಲಿನ ನೆತ್ತರ ಚಿಮುಕಿಸಿ ನೆಯ್ದಂಥ
ಇಳಕಲ್ಲ ಸೆರಗಿನ ಸೀರಿ ||೧೮||

ಮಡದಿಯ ಬಾಯಿಂದ ನುಡಿಗಳು ಬರಲಿಲ್ಲ
ಕುಡುಗೋಲಿನಂತೊಮ್ಮೆ ಬಾಗಿ |
ಪತಿಯ ಕಡೆ ನೋಡಿದಳು ಸೀರೆ ಕಸಿದಳು, ಕಸಿದು
ಕಸಿದ ಸೀರೆಯ ಹಡದಿ ಹಾಸಿ |
ನಡೆದು ಹೋದಳು ಮಡದಿ ಹೊರಗೆ ಕಾಡಿನ ಕಡೆಗೆ
ಕರಗಿಹೋದಳು ಕತ್ತಲಲಿ ||೧೯||

ನವಿಲೇ ನವಿಲೇ ಚೆಂದೊಳ್ಳೆ ನವಿಲೇ
ನಾದಗಳು ನುಡಿಯಾಗಲೇ |
ಹಾಡಾದ ನುಡಿಯೊಳಗೆ ಬೆಳಕಾಡಿ ಹಾಡಿನ
ಆಚೆ ಸೀಮೆಯ ತೋರಲೇ ||೨೦||