ಅಪರೂಪಕ್ಕೆ ಹಳೆಗೆಳತಿ ಸಿಕ್ಕಾಗ
ಎದೆ ಭಗ್ಗೆನಲಿಲ್ಲ, ಕೆನ್ನೆ ಕಣ್ಣುಗಳಲ್ಲಿ
ಬೆಳಕಾಡಲಿಲ್ಲ. ಸುತ್ತ ಯಾರಿರಲಿಲ್ಲ
ವಾದರೂ ಮೈಸವರಲಿಲ್ಲ. ತೋಳು ಹೆಣೆಯಲಿಲ್ಲ
ಮುದ್ದಿನಲ್ಲಿ ಮಾತಾಡಲಿಲ್ಲ.

ರೆಕ್ಕೆಯಳಗಿನ ಹಕ್ಕಿಯ ಥರ
ನಮ್ಮ ನೆರಳುಗಳನ್ನೆ ಮೈಗು ಮನಸಿಗು ಸುತ್ತಿಕೊಂಡು
ಉರಿವ ಬೆಂಕಿಯ ಬಳಿ ಕೂತೆವು.

ಅವಳ ಮೈ ತೀಡಿದ ಗಾಳಿ
ನನ್ನ ಕಡೆ ಸುಳಿಯಲಿಲ್ಲ
ಎದೆಮಿಡಿತ ತಿಳಿಸಲಿಲ್ಲ.

ತುಕ್ಕು ಹಿಡಿದ ಚಿಕ್ಕೆ ಚಂದಿರ ಸೂರ್ಯ
ಅವಳ ಕಣ್ಣೊಳಗೆ ಹಾದು ಹೋದರೂ
ಯಾವುದೂ ನಿಲ್ಲಿಲಿಲ್ಲ
ನಾನು ಮೂಡಲೇ ಇಲ್ಲ.

ನೆನಪಿನ ಹಾಳುಗಳಲ್ಲಿ ಅಲೆದಾಡಿದಳು ಗೆಳತಿ
ಜೊತೆಯಲ್ಲಿ ನಾನಿರಲಿಲ್ಲ.
ಅವಳ ತುಟಿಗಂಟಿದ ಹೆಸರು ಅಳಿಸಿ ಹೋಗಿದ್ದವು,
ನನ್ನದು ಕೂಡ.

ಕೋಶದಲ್ಲಿ ಶಬ್ದಾರ್ಥ ಹುಡುಕುವರಂತೆ
ಕಣ್ಣತ್ತ ನೋಡುತ್ತಾ ಕೂತೆ,
ಅವಳು ಕೂಡ.

ಮನುಷ್ಯನಿಗೆ ಸ್ವಾತಂತ್ರವೇ ಇಲ್ಲ.
ಗೊತ್ತ ಇವಳ್ಯಾರೆಂದು, ಗುರುತು ಹಿಡಿಯೆಂದು
ನಮ್ಮಿಬ್ಬರ ಹಳೆಯ ಫೋಟೊ ತೋರಿಸಿದೆ.
ಹೋ ಉರಿದ ಸಂಭ್ರಮ ಹಾ ಕಳೆದ ಹಂಗಾಮ
“ಗೆಳೆಯಾ, ನಾವೀಗ ಬೇರೆ ದೇಶದಲ್ಲಿದ್ದಂತೆ
ಅನ್ನಿಸೋದಿಲ್ಲವೆ?”

ಅದೂ ನಿಜವೆ. ಫೋಟೋದೊಳಗಿನ ಅವಳ
ಉಡುಪನ್ನು ಬದಲಿಸಿ ರಂಭೆಯ ಮಾಡುವುದು
ಎಷ್ಟೊಂದು ಸುಲಭವಿತ್ತು!
ಆಗ ಇಬ್ಬರಿಗೂ ಅವಸರ, ಹೊತ್ತಿಸಿ ಪರಸ್ಪರ
ನಿಂತಲ್ಲಿ ನಿಲ್ಲದೆ ಕೂತಲ್ಲಿ ಕೂರದೇ
ಏನೋ ಮಹಾ ಒಗಟು ಬಿಡಿಸುವರಂತೆ
ಸೂರ್ಯನ್ನ ತರುವವರಂತೆ
ಸರಸರ ಧುಮುಕಿದೆವು. ಅಲ್ಲ
ಧುಮುಕಲ್ಪಟ್ಟೆವು.

ಮೈ ಸ್ವಯಂ ಬೆಂಕಿಯಾಗಿದ್ದಾಗ ನೆರಳಿನ ಭಯವಿರಲಿಲ್ಲ.
ನೋಡೀಗ ಆರಿದ ಮೈಗೆ ಮೂಡಿದ ನೆರಳು
ಬೆಂಕಿಯ ಕೇಕೆಗೆ ಥೈ ಥೈ ಕುಣಿಯುತ್ತವೆ.

ಅಂದಿನ ರಂಭೆ ಇಂದಿನ ಒಣಮರದ ರೆಂಬೆಯಾದಳು
ಹೆಂಗೆ? ಇನ್ನು ನಾ ಹೆಂಗಿರುವೆ?

“ಹೇಳು ಗೆಳತೀ ಒಳಗಿದ್ದ ಧಗಧಗ ಬೆಂಕಿ
ಹೊರಬಂತು ಯಾವಾಗ? ಹ್ಯಾಗೆ ಹ್ಯಾಗೆ?”

“ನಿಜ ಗೆಳೆಯಾ ನಮಗೆ ಸ್ವಾತಂತ್ರ್ಯವೇ ಇಲ್ಲ”.