ಉದ್ಧರಿಸು ಉಘೆಎನ್ನಿರೋ
ಉದ್ದಂಡ | ದಿಂಡುರುಳಿ ಶರಣೆನ್ನಿರೋ
ಸುತ್ತೇಳು ಬಳಗsಕ ಸುದ್ದಿಕೊಡಿರೊ
ಮಾತಾಯಿ ಮಹಾಮಾಯಿ ಜಗದಂಬಿ ಬರತಾಳ
ಸಾವಿರದ ಶರಣೆನ್ನಿರೋ ||

ಕೇರಿ ಹಿರಿಯರು ಬನ್ನಿರೋ
ಊರೀನ | ಕಿರಿಯರೆಲ್ಲಾ ಬನ್ನಿರೋ
ಬಲ್ಲೀದ | ಬಡವರೆಲ್ಲಾ ಬನ್ನಿರೋ
ಬೆನ್ನಿಗಂಟಿದ ಹೊಟ್ಟೆ ಅತ್ಮವಾದವರೆಲ್ಲ |
ಕ್ಯೂ ಇಲ್ಲ ಗಡ ಬನ್ನಿರೋ ||

ತಳಿರು ತೋರಣ ಕಟ್ಟಿರೋ
ಎಳೆಯರ | ಕರುಳುಗಳ ತೂಗುಬಿಡಿರೋ
ಮಡದೇರ | ಮೈ ಹಡದಿ ಹಾಸಿರಯ್ಯೋ
ಕಣ್ಣು ಕನ್ನಡಿ, ಕಳಸ ಕನ್ಯೆಯರ ಮಾನಗಳು |
ನಿನ ಪಾಲಿಗುಧೋ ಎನ್ನಿರೋ ||

ಇದ್ದ ವಾದ್ಯಗಳೂದಿರೋ
ಇಲದಿರಕ | ದನಿಯೆತ್ತಿ ಚೀರ್ಯಾಡಿರೋ
ಇಲದಿರಕ | ಬೊಬ್ಬೆಯಾದರೂ ಹೊಡೆಯಿರೋ
ಎಷ್ಟೆಷ್ಟು ಕಿರುಚಿದರ ಅಷ್ಟಷ್ಟು ಖುಷಿಗೊಂಬ |
ತಾಯೀಗೆ ಶರಣೆನ್ನಿರೋ |

ಕೈಯೂರಿ ಕುಣಿದಾಡಿರೋ
ಇಲದಿರಕ | ಕಾಲೆತ್ತಿ ಹಾರ್ಯಾಡಿರೋ
ಬೇಜಾನು | ಬೊಂಬಾಟು ಜಿಗಿದಾಡಿರೋ
ಕುಣಿಯದಿದ್ದರು ನಿಮ್ಮ ಕುಣಿಸುವಂಥಾಕಿಗೆ |
ಮೈಬಗ್ಗಿ ಶರಣೆನ್ನಿರೋ ||

ಬೆನ್ನಲ್ಲಿ ಏನಿರುವುದೋ
ತಾಯೀಗೆ | ಇನ್ನೆಲ್ಲಿ ಮುಖವಿರುವುದೋ
ಕೈಕಾಲು | ಎಲ್ಲೆಲ್ಲಿ ಚಾಚಿರುವವೋ
ಮುಚ್ಚುಮರೆಗಳ ಒಳಗೆ ಮುಖ ಹುಗಿದ ತಾಯಿಗೆ |
ಸುಮ್ಮನೆ ಶರಣೆನ್ನಿರೋ ||

ಕುರಿಕೋಣ ಬಲಿ ತನ್ನಿರೋ
ಇಲದಿರಕ | ನೀವೇನೆ ಬಲಿಯಾಗಿರೋ
ತಾಯಿಗೆ | ತೃಪ್ತೀಯ ಹಾರೈಸಿರೋ
ಒಂಚೂರು ಬಿಡದೇನೆ ಇಂಚಿಂಚು ನುಂಗುವ |
ತಾಯೀಗೆ ಶರಣೆನ್ನಿರೋ ||

(ತುಕ್ರನ ಕನಸು)