ಅದ್ಯಾಕಪ್ಪ ಇಂತಪ್ಪ ದುಃಖ ಭೂಲೋಕದೊಳಗೆ? ಅಂದರೆ –
ಹರಿದಾಸರು ಹೇಳುವ ಪುರಾಣ ಕಥೆಯೇ ಬೇರೆ; ಅದೆಂತೆಂದರೆ:

ಶಿವದೇವರ ಕತ್ತಿನ ವಿಷ ಕೊಳೆತು ಹುಣ್ಣಾಯಿತಂತೆ.
ಹುಣ್ಣಿನ ನೋವನ್ನು ಸರಿಕರಿಗೆ ಅರುಹದೆ ಒಳಗೊಳಗೇ ಅನುಭವಿಸುತ್ತ
ಸಾಯಲಾರೆ ಶಿವನೆ ಬದುಕಲಾರೆ ಅಂತ ಚಡಪಡಿಸುತ್ತ
ಶಿವರಾತ್ರಿಯ ಸಮಯ ಸಂದರ್ಭಗಳ ಸಮನೋಡಿ
ಅಕ್ಕಪಕ್ಕ ಯಾರಿಲ್ಲದಿರಲು, ನಮ್ಮ ಶಿವದೇವರು
ಪಳಕ್ಕನೆ ಹುಣ್ಣುಕಳಚಿ ಕೆಳಕ್ಕೆಸೆದು
ಅಪರಾಧವೆನಗಿಲ್ಲ ಎಂದು ಗೀತಮಂ ಪಾಡುತ್ತ
ಕೈಲಾಸದಲ್ಲಿ ಸುಖವಿರ್ದರು

ಸದರಿ ಹುಣ್ಣು ಮಣ್ಣಾಗಿ, ಮಣ್ಣಿನ ಉಂಡೆ ಭೂಲೋಕವಾಯಿತಯ್ಯಾ!
ಹುಣ್ಣೊಳಗಿನ ಸಣ್ಣಹುಳು ಜೀವರಾಶಿಗಳಾಗಿ,
ಬುದ್ಧಿಬೆಳೆದು ಮಾನವರಾಗಿ
ತಿನ್ನುವುದಕ್ಕೆ ಶಿವನ ಕತ್ತು ಎಲ್ಲಿದೆಯೆಂದು ಪರದಾಡತೊಡಗಿದರಯ್ಯಾ.

ಇಂತಿವರ ಹಸಿವು ಹಂಬಲವಾಗಿ
ಹಂಬಲವೆ ಮಂದಾರ ಮರವಾಗಿ
ಆಕಾಶದ ಸ್ಪೇಶಿನಾಚೆಯ ಕೈಲಾಸಕ್ಕೂ ಬೆಳೆದ ಮರ
ಭೂ – ಕೈಲಾಸಗಳನ್ನು ಏಕ ಮಾಡುವ ಏಕೈಕ ಮರ
ಅಲ್ಲಿ ಕೈಲಾಸದಲ್ಲಿ ಘಮಘಮಘಮ ಹೂ ಬಿಟ್ಟಿತಯ್ಯಾ.

ಶಿವದೇವರು ಬೀಸಿದ ಪರಿಮಳದ ಪವನಗಳ ಮೂಸಿ
“ಏನಿದು ಮಣ್ಣಿನ ವಾಸನೆ?
ಕೊಳೆತ ಗಾಯದ ಮೇಲೆ ಸುರಿದ ಮದ್ದಿನ ವಾಸನೆ;
ನನಗಿಷ್ಟವಿಲ್ಲ” ವೆಂದು ನಿಸ್ಸಂಶಯ ಹೇಳಿಬಿಟ್ಟರೇ!

ಏನು ಹಾಗೆಂದರೆ? ದೇವರಿಗೆ ದೇವರ ಜವಾಬ್ದಾರಿ
ಬೇಡವೆ? ಮಂದಾರ ಮರ ಮಣ್ಣಲ್ಲಿ ಬೆಳೆದದ್ದು
ನಿಜ, ಮಣ್ಣಿನ ಮೂಲದ ಹುಣ್ಣಿನ ವಾಸನೆ ಹೂಗಳಿಗೆ
ಬಂದರೆ ಅದೂ ಸಹಜ, ಮೂಸುವಾತ ದೇವನಾದರೂ.

ಮಂದಿನ ಕತೆ ಕೇಳಿರಿ:
ಮಂದಾರ ಹೂವು ಕಾಯಾಗಿ ಹಣ್ಣಾಯಿತಂತೆ.
ಒಂದು ದಿನ ಪಾರ್ವತಿ ಲೀಲೆಯಲಿ ಮೈಮರೆತು
ಮಂದಾರ ಹಣ್ಣು ಹರಿದು ತಿಂದರೆ ಶಿವದೇವರು
ಹಣ್ಣು ತಿಂದೆಯೋ ಮಣ್ಣು ತಿಂದೆಯೋ ಅಂತ –
ಕೈ ತಟ್ಟಿ ಪಕಪಕ ನಗೋದೇ!

ಪಾರ್ವತಿಯ ಮೈಯಲ್ಲಿ ಭೂಲೋಕದ ಮಣ್ಣು!
ದೇವರದ್ದೇ ಬೇರೆ ಬಿಡಿ; ಮೈಯ ಮಣ್ಣಲ್ಲಿ
ಮೂರ್ತಿಯ ಮಾಡಿ ಆಟವಾಡುವ ರೀತಿ.
ಇಲ್ಲಿ ನಮ್ಮ ಗತಿ?

ಮುಂದಿನ ಕತೆ ಎಂತಿಪ್ಪುದು ಕೇಳಿರಯ್ಯಾ:
ಪಾರ್ವತಿ ಹಣ್ಣು ತಿಂದದ್ದೇ
ದೇವಲೋಕಕ್ಕೂ ಬಂತು ಹಸಿವಿನ ಬಾಧೆ.
ಈಗ ತಗೊಳ್ಳಿ – ಭೂಮಿಯ ಮೇಲೆ ಬೆಳೆದದ್ದಕ್ಕೆಲ್ಲ
ಆಕಾಶವೇ ಗುರಿ;
ಕೈಲಾಸದ ಕಡಗೇ ಮುಖ.
ನಮಗೆ ಗಾಳಿಯಿದ್ದ ಹಾಗೆ ಅವರಿಗೆ ನಮ್ಮ
ಭಯ ಭಕ್ತಿಯ ಧಗೆ. ಹೆಚ್ಚೇನು, ನಮ್ಮ ಯಾಗದ ಹೊಗೆ
ಹೋಗೋತನಕ ದೇವಲೋಕ ನಿರ್ಗತಿಕ. ಇಷ್ಟಾಗಿ
ಕೃಪೆದೋರುವ ನಾಟಕದ ಬಗೆ ಬೇರೆ. ಹ್ಯಾಗಿದೆ ನೋಡಿ!

ಈಗಲೂ ಶಿವದೇವರು, ಶಿವರಾತ್ರಿಯ ಸಮಯ,
ಅಂದರೆ ಮಾನವರಿಗೆ ಮೂಲಹುಣ್ಣಿನ ನೆನಪಾಗುವ ದಿನ
ಅಕ್ಕಪಕ್ಕ ಸರಿಕ ದೇವತೆಗಳಿಲ್ಲದಾಗ ಕೆಳಗಿಣಿಕಿ
ನೋಡುವರಂತೆ.

ಮಾನವರ ಹಾಹಾಕಾರ ಕೇಳಿ ಮಮ್ಮಲ ಮರುಗಿ
ಮಂದಾರದ ತುಂಬ ಹೂಕಾಯಿ ಹಣ್ಣ ಬಿಡಿಸಿ
ಮನರಂಜನೆ ನೀಡುವರಂತೆ ಉಚಿತ.

ಅಥವಾ ಹೀಗೂ ಇರಬಹುದು:
ಮಂದಾರಮರ ಏರಿ ಯಾರೂ ಬಾರದ ಹಾಗೆ
ಬಿಗಿದ ಬೇಲಿ ಬಿಡಿಸಿದ ಎಲೆ ಹೂ ಕಾಯಿ,

ಶಿವರಾತ್ರಿಯ ಈ ಫಜೀತಿ,
ಈ ಕಥೆಯ ನೀತಿ.