ಈಸುರನ ಮಗ ಮಾದೇಸುರ
ಮಾದೇಸುರನ ಮನೆ ಗಲ್ಲಿಗಟಾರ.
ಆ ಗಲ್ಲಿಗೆ ಇವನೊಬ್ಬನೇ ಕನಸುಗಾರ.

ಈ ದಿನವು ಕನಸಾಯಿತು ಇದೇ ಬೇರೆ ತಂದೆ,
ಆಹಾ ಏನೆಂಬೆ:

“ಈ ನಗರದ ಗಗನಚುಂಬಿ ಕಟ್ಟಡಗಳ ಅಂಚಿಗೆ
ಬೇರೆ ತರದ ಕ್ಷಿತಿಜ ಕಂಡೆ
ಚಿನ್ನದ ಗೆರೆ ಮೇಲೆ!
ಕೆಂಪಗಿತ್ತು ಕೆಳಗೆ
ಕೆಂಪು ಹಳದಿ ಬಣ್ಣದೊಂದು ನದಿಯು ಹರಿದ ಹಾಗೆ.”

“ಕೆಂಪಿಗೇನು ಹಳದಿಗೇನು, ವ್ಯರ್ಥಗಳಿಗೆ ಅರ್ಥವುಂಟೆ
ಸುಮ್ಮನಿರೋ ಪೋಕರಿ.
ಚಿನ್ನದ ಗೆರೆ ಕನಸಬೇಡ ನೀ ಗಟಾರವಾಸಿ.”

“ಕೇಳು ತಂದೆ ಕೆಂಪಿನೊಳಗೆ ಒಂದು ಸಣ್ಣ ಜೀವ
ಸೊಳ್ಳೆ ಅಥವ ಸೊಳ್ಳೆಯಂಥ ಹುಳು ಅಥವಾ ಮಾನವ
ಮುಳುಗುತಿತ್ತು, ಏಳುತಿತ್ತು ಒದ್ದಾಡುತಲಿತ್ತು!
ನೋಡುವವರು ನೂರು ಮಂದಿ
ಅದರ ಏಳು ಬೀಳುಗಳಿಗೆ
ಬೆಟ್ಟು ಕಟ್ಟಿ ಕೈಯ ತಟ್ಟಿ ನಲಿದಾಡುತ್ತಿದ್ದರು.”

“ಸೊಳ್ಳೆಯೆಂದೆಯಲ್ಲ ಮಗ, ಫ್ಯಾನಿಗಂಜಲಿಲ್ಲವೆ?
ಕೈ ಕೈ ಕೈ ಚಪ್ಪಾಳೆಗೆ ಸಿಕ್ಕು ಸಾಯಲಿಲ್ಲವೆ?”

“ಇಲ್ಲ ತಂದೆ ತೆವಳಿಕೊಂಡು
ದಡಕೆ ಬಂದು ನಿಂತು
ನದಿಯ ತಳದ ದೊಡ್ಡದೊಂದು ಮೂಳೆ ಎತ್ತಿಕೊಂಡು
ಗದೆಯ ಹಾಗೆ ಹಿಡಿದುಕೊಂಡು
ನಿಂತು ಎಲ್ಲರೆದುರಿಗೇ
ಬೆಳೆಯಿತಕೋ ತಂದೆಯೇ!

ನೆಲ ಮುಗಿಲಿನ ಬಡ್ಡಿ ಬೇರು
ಗಟ್ಟಿ ಹಿಡಿದು ಮೆಟ್ಟಿ ನಿಂತು ಝಾಲಾಡಿಸಲಾಗಿ
ಸೂರ್ಯಚಂದ್ರರಿಬ್ಬರೂ
ನಡುಗಿ ನದಿಯ ಕೆಂಪು ತಳಕೆ
ತೊಟ್ಟು ಕಳಚಿ ಬಿದ್ದರು.
ತಂಪಗಿದ್ದ ಕೆಂಪುನದಿಯ ತಳಬುಡಗಳು ಕುದಿದುವಣ್ಣ
ಮ್ಯಾಲೆ ಇದ್ದ ಚಿನ್ನದ ಗೆರೆ ಕರಗತೊಡಗಿತಣ್ಣ.”

“ಸೊಳ್ಳೆ ಜೀವ ಬೆಳೆಯಿತಲ್ಲ, ಮುಂದೇನಾಯಿತಣ್ಣ?”

“ತೆರದುಕ್ಕಿನ ಕಣ್ಣ,
ನೋಡುತ್ತಿದೆ ನನ್ನ
ಬಾರೊ ನನ್ನ ಜೊತೆಗೆ
ಬೊಗಸೆ ತುಂಬ ಬದುಕ ಕೊಡುವೆ
ಸೂರ್ಯ ಬೇಕೆ ನಿನಗೆ ಎಂದು ಕರೆಯುತ್ತಿದೆ ತಂದೆ
ಮಾಡಲೇನು ಮುಂದೆ?”

“ಹೌದೋ ಏನೋ ಈತ ನಮ್ಮ ಕುಲದ ಸ್ವಾಮಿ ದೇವರು
ಹೋಗಿ ಅವನ ಬಂಟನಾಗಿ ಸೇವೆ ಮಾಡಿಕೊಂಡಿರು
ಕೇಳಿದ ಬಲಿ ಕೊಡು ಇದೆಲ್ಲ ಯಜ್ಞ ಬೇಗ ಮುಗಿದು
ತಿಳಿಯಾಗಲಿ ನದಿ ಮೀನಿಗೆ, ಜೀವಕಾದಿಯಾಗಲಿ.”