ದಿಲ್ಲಿಯ ನೋಡಿರೇ,
ಬಾರಿನ ಏರಿಯ ಮೇಲೆ ಹಾರಿಹಾರಿ ಕುಣಿವ
ದಿಲ್ಲಿಯೆಂಬ ಕ್ಯಾಬರಿಯ ನೋಡಿರೇ,
ಭಾರತ ಭಾಗ್ಯವಿಧಾತನ
ಸೌಭಾಗ್ಯವತಿಯ ನೋಡಿರೇ!

ವಿದೇಶದ ದೀಬೆಸ್ಟಿನಿಂದ ಮೈಮುದಿ
ಮುಚ್ಚಿಕೊಂಡು, ಹದಿ ಹರೆಯದ
ಬೆದೆ ಅಭಿನಯಿಸುವ ಗೋಲಮಾಲಿಯ ನೋಡಿರೇ,

ಬೆಲೆಯುಳ್ಳ ನಕಲಿ ನಗೆಯನ್ನ
ವಿದೇಶಿ ವಿನಿಮಯದ ಸರಬರಾಜಿನಲ್ಲಿ
ಹರಾಜು ಮಾಡುವ
ಗಾಂಧೀ ಬಜಾರಿಯ ನೋಡಿರೇ,

ಜಗತ್ತಿನೆಲ್ಲ ಕೆಮೆರಾಗಳಿಗೆ
ಮೋಜಿನ ಪೋಜು ಕೊಟ್ಟು
ಪೋಲಿಕಥೆ ಪಾರ್ಟಿ ಜೋಕಿನಲ್ಲಿ
ತಾಜಾಬಿಸಿ ಮಾರುವ ಹೊಯ್ಮಾಲಿಯ ನೋಡಿರೇ,

ಗಾಯದಂಥ ಬಾಯಿ ತೆಗೆದು
ಹಾಯೆಂದು ಹಾಡುತ್ತ
ಹ್ಯಾಗೆಂದರೆ ಹಾಗೆ ತತ್ವ ಜಡಿಯುತ್ತ
ನಾಲಗೆಯ ರೀಲು ಬಿಡುತ್ತ
ಅತ್ತ ಸ್ಲಮ್ಮಿಗರಿಗೂ ಇತ್ತ ಬಿರ್ಲಾರಿಗೂ
ಕೈತಟ್ಟಿ ಅಂಗೈಯೊಳಗೆ,
ಒಬೊಬ್ಬರಿಗೊಂದೊಂದು ಕೈಲಾಸ ತೋರುವ
ಬಾಜಾ ಬಜಂತ್ರಿಯ ನೋಡಿರೇ,

ನಕ್ಕರೆ ನಗುತ್ತ ಇಲ್ಲವೆ ಕುಣಿಯುತ್ತ
ಹಾಗಾದರೊಂದು ಪರಿ ಹೀಗಾದರೊಂದು ಪರಿ
ತುರಿಸಿ ಕೆರೆದದ್ದನ್ನ, ಲಾಗ ಹಾಕದ್ದನ್ನ
ಚರಿತ್ರೆ ಮಾಡುತ್ತ ಮೊಗಲಾಯಿ ದರ್ಬಾರು
ಮೆರೆವ ಮಾರಾಣಿಯ ನೋಡಿರೇ,

ಹೀಗೆಯೇ ಕುಣಿಯುತ್ತ ಕುಣಿಯುತ್ತ
ಪಿಟ್ಟೆನ್ನಿಸಿ ಕಟ್ಟಿದ ಕಾಚದ
ಸೊಂಟದ ಸೊನ್ನೆಯನೆತ್ತಿ
v ಆಕಾರದಲ್ಲಿ ಕಾಲೆತ್ತೆ
“ಋಷಿಗಳ ಪಂಪು ಮಾಡುತ್ತೇನೆ ಬಾ ರಾಜಾ
ಕಿಡಿ ತಾಗಿಸಿ ನೋಡು ಸಿಡಿಯುವ ಮಜಾ”
ಎಂದು ಕೂತವರ ಕರೆದರೆ, ಅರೆ ಅರೇ
ಎಲ್ಲರೂ ಸುಮ್ಮನಾಗಿದಾಗೊಬ್ಬ ಒರಟು ಆಸಾಮಿ
ಬಂದು ಉರಿವ ಸಿಗರೇಟನ್ನ ಹೊಕ್ಕುಳಲ್ಲೂರಿದರೆ,
ಹೊಟ್ಟೆ ಧಡಾರನೆ ಸಿಡಿದು, ಕರುಳು ಹೊರಬಂದು
ಒದ್ದಾಡುತ್ತಿದ್ದರೆ ಕೂತವರ್ಯಾರೂ ಸಮೀಪ ಬರದೆ
ಉಧೋ ಉಧೋ ತಾಯಿ ಭಾರತಾಂಬಿಯ
ಗತಿ ಏನಾಯ್ತು ನೋಡಿರೇ. . . . .