ನಾವೆಲ್ಲ ಇರಲಿ, ಹ್ಯಾಗೇ ಇರಲಿ ತಕ್ಷಣವೆ
ಹಸಿರು ಕನಸಿನದೊಂದು ಬ್ರಿಜ್ಜು ಮಾಡಿ
ಆಚೆ ಎಜ್ಜಿನ ನಮ್ಮ ಸೆಳೆದು ದಾರಿ ಸರಾಗ
ಸರಬರಾಜಿಗೆ ಸುಗಮಗೊಳಿಸುವಾಕೆ.

ಋತುಮಾನವಾಗಿ ಹಗಲಾಗಿ ಹೊಂಬಿಸಿಲಾಗಿ
ಚಿಗುರಿನಂಚಿಗೆ ಮಿಂಚು ಹೊಳೆಸುವಾಕೆ,
ಇರುಳ ಹೆರಳಿನ ತುಂಬ ಮುಡಿದು ಚಂದಿರ ಚಿಕ್ಕೆ
ಸುಖದ ಬೆಳ್ದಿಂಗಳಲಿ ಬೀಗುವಾಕೆ.

ಹುಚ್ಚೆಬ್ಬಿಸುವ ಮೈಯ ಅಕ್ಷಿ ತುಂಬಾ ಸೆಕ್ಸು
ರೇಪು ಮಾಡೋ ಇಲ್ಲ ಮಾಡಿಸಿಕೊ,
ಕೊನೆಗೊಮ್ಮೆ ತಂತಾನೆ ಮಾಡಿಕೊಂಬಳು ರೇಪು
ಹದಿಹರೆಯದೆದೆಗಳಿಗೆ ನೋವ ಕೊಟ್ಟು.

ಹೊಸಹೊಸದಾಗುವಳು ಹೊಳೆದಾಗಲೊಮ್ಮೊಮ್ಮೆ
ಹೊಸಜನ್ಮ ಕೊಡುವಾಕೆ ಪಡೆಯುವಾಕೆ.
ಮಲಗಿ ಎದ್ದಾಗೊಮ್ಮೆ ಮರುಜನ್ಮ ಕೊಡುವಾಕೆ
ಕಣ್ಣು ತೆರೆದಾಗೊಮ್ಮೆ ಹೊಸಲೋಕವೆ.

ನೆಲೆ ಇರದ ನದಿಯಾಗಿ ಬೆಟ್ಟಗಳ ಎದೆ ಸೀಳಿ
ನೆಲದ ತಳದೊಳಗಾಡಿ ಹರಿಯುವಾಕೆ.
ಗುಡ್ಡದಾಳದ ಒರತೆ ಗುಂಭದೊಳಗಡೆ ಒಡೆದು
ಲಿಂಗದೇವರಿಗಾಗಿ ಕಾಯುವಾಕೆ.

ಹರಿವ ಹಾವನ್ನೆಳೆದು ಮೈಯ ತುಂಬಾ ಸುತ್ತಿ
ಮಜಬೂತು ಮಜಮಾಡಿ ಎಸೆಯುವಾಕೆ,
ಹಾವಲ್ಲ ಅದು ಹಗ್ಗ ಎನ್ನುವರು ಕೆಲಮಂದಿ
ಹಗ್ಗದಲ್ಲೂ ಹರ್ಷ ಚಿಮ್ಮುವಾಕೆ.

ಹಸಿರೆಲಿ ಉದುರಿಸಿ ಬರಿ ಬತ್ತಲಾಗಿಸಿ
ಮೈಪರಚಿಕೊಂಬಳು ಬೇಸಿಗೆಗೆ.
ಮತ್ತೆ ಚೈತ್ರದ ಚಿಗುರು ಹಸಿರೇರಿ ಹೂವಾಗಿ
ಮೈನೆರೆದು ಹೂಕಂಪು ಗಿಡಕೆ ಮರಕೆ.

ನೆತ್ತರಲ್ಲಿವಳಂತೆ ಸುಖವ ಪಟ್ಟವರಿಲ್ಲ
ಯುಗಯುಗಾಂತರ ಪುಳಕ ಮೈಯ ತುಂಬ.
ನಾವು ಬರಿ ಮಾನವರು ಬಲಿಯ ಪಶುಗಳು, ರಕ್ತ
ಕಾರುವೆವು ಈ ಮಾಯೆ ದಾಹಕಾಗಿ.