ಕಣ್ಣ ಬಣ್ಣಿಸು ಕವಿಯೆ
ಅಂತ ಹೇಳಿದೆಯಲ್ಲ ಪ್ರಿಯೆ,
ಅತಿರೇಕದ ಹಿತಕಾರಿ ಮಾತು ಸುಲಿದು
ನಿಜ ಹೇಳುತ್ತೇನೆ, ಕೇಳು:

ಕಾಡಿನೊಳಗಿನ ಎರಡು ತಿಳಿಗೊಳಗಳು
ನಿನ್ನೆರಡು ಕಾಡೀಗಿಗಣ್ಣುಗಳು
ಏಳು ಹೊರಸಿನ ನುಲಿಗು ನಿಲುಕಲಾರದ ಆಳ
ಭಾರೀ ನಿರಾಳ;

ರೆಪ್ಪೆಗಳ ಸಾಲುಮರ, ಅದರ ಹಿಂದಿನ ಕಾಡು
ಮತ್ತು ನಮ್ಮೀ ನಾಡು ಹ್ಯಾಗೆ ಮೂಡಿವೆ ನೋಡು – ತಲೆಕೆಳಗಾಗಿ,
ಮುಟ್ಟಿದರೆ ಮುಟ್ಟಿದ್ದನ್ನ ಒಳಗವಚಿ ಹೀರಿ ಹುಟ್ಟಿಲ್ಲೆನಿಸಿ
ಚಿಗುರುವ ಬಳ್ಳಿ,
ಮ್ಯಾಲೆ ಹಾ ಅರಳ್ಯಾವು ಕಮಲ ನೀಲಿ!

ಕ್ಷಣಕೊಂದು ಚಂದಗಳ ಮೆರೆದು
ಮಳೆಬಿಲ್ಲುಗಳ ಕೊರೆದು,
ಮೂಡುವುದುಂಟು ಇಲ್ಲಿ ಮುಗಿಲು.
ಸೂರ್ಯಚಂದಿರ ಚಿಕ್ಕಿ, ಅಕಾ ಹಾರುವ ಹಕ್ಕಿ
ಖುಶಿಯುಕ್ಕಿ ಇಂಬಾಗಿ ಬಿಂಬಿಸುವ ದಿಗಿಲು.
ಮೊನ್ನೆ ಅಂಬಿಗರ ಹುಡುಗ ಈ ಕೊಳದೊಳಕ್ಕೆ
ಬಲೆಬೀಸಿ ಎಳೆದಾಗ ಬಲೆತುಂಬ ಸಿಕ್ಕಿದ್ದು – ನಿನಗೂ ಗೊತ್ತಲ್ಲ ?
ಚಿಳಿಮಿಳಿ ಮೀನಲ್ಲ –
ಈಜು ಬಾರದೆ ಜಾರಿ ಬಿದ್ದವರ ಹೃದಯಗಳು –
ಇದು ಹಳೆಯ ವರದಿ ಬಿಡು.

ಬಲ್ಲೆಯಾ ಚಿನ್ನಾ,
ನಿನ್ನ ಕಣ್ಣಲ್ಲಿ ಮೂಡುವ ಸೂರ್ಯನ ಹಾದರಕ್ಕೆ
ಹರಿಕಥೆ ಹುಟ್ಟುತ್ತವೆ:
ಸೂರ್ಯನ್ನ ಕುಡಿದು ಸಚರಾಚರದ ಹೊಕ್ಕಳ ಬಳ್ಳಿ
ಫಕ್ಕನೆ ಅರಳುತ್ತದೆ.
ಕೊಳೆತ ಬೇರಿನ ಮೇಲೆ ಚಿಗುರಿನ ಪವಾಡ
ನಡೆಯುತ್ತದೆ.

ಆದರೆ ಗೊತ್ತ ಪ್ರಿಯೆ,
ಈ ಪ್ರಕೃತಿಗೆ ಬೇಕು ನಿನ್ನ ದಯೆ.

ಮೂಡಿರುವ ಸೂರ್ಯನ್ನ ನಡುಗಿಸಲೇನು ಬೇಕು ?
ಈ ಕೊಳದ ಮರಿ ಮೀನೊಂದು ಸಾಕು.
ಅದು ತುಳುಕಿದರೆ ಅನಾಯಾಸ
ಮೂಡಿರುವ ಸೂರ್ಯ ಮುಗಿಲು ಸಮೇತ
ಗಡಗಡ ನಡುಗಿ ಆಕಾಶದಾಧಾರ ಧಸಕ್ಕನೆ
ಕುಸಿಯುತ್ತದೆ.
ಹೋಗಲಿ, ಈ ಶೀತೋಷ್ಣವಲಯದ
ಅಸ್ತಿತ್ವ ಎಲ್ಲಿಯತನಕ ?
ನೀನು ರೆಪ್ಪೆಯ ಹೊಡೆಯುವ ತನಕ.
ಹೊಡೆದೆಯೋ ಖೇಲ್ ಖಲಾಸ್
ಮೂಡಿದ್ದೆಲ್ಲ ಅದೃಶ್ಯ
ಕಣ್ಣು ತೆರೆದಾಗ ಇನ್ನೊಂದು ದೃಶ್ಯ !

ಆದರೂ ಹುಸಿಯೂದಿ ಉಬ್ಬಿಸಿದ ಹೌಸಿಯ ಬಲೂನಿಗೆ
ರೆಪ್ಪೆಯ ಸೂಜಿಮನೆ ತಗುಲಿಸದಂತೆ
ನೋಡಿಕೊಂಬ ಜಾಣೆ ನೀನು.

ಈ ಒಪ್ಪಂದ ಇಂದು ನಿನ್ನಿನದಲ್ಲ
ನಾನು ಸುಳ್ಳು ಹೇಳುತ್ತಿಲ್ಲ, ಯಾಕೆ ಗೊತ್ತಲ್ಲ ?
ಸಟೆದಿಟದ ಮಧ್ಯೆ ಸೇತುವೆಯಾದ
ನಮ್ಮ ಪ್ರೀತಿಗೆ ಬೇರೆ ದಾಖಲೆಯಿಲ್ಲ!