ಧಗೆ ಉರಿವ ಹಗಲಿನಲಿ ಹಸಿರು ಹುರಿದಾಡಿತ್ತು
ಉಸಿರಿಲ್ಲ ತಂಗಾಳಿಗೆ |

ಬಿಳಿಯ ಹಾಳೆಯ ಮೇಲೆ ಮಸಿಯ ಚಲ್ಲಿದ ಹಾಗೆ
ಒಂಟಿ ಮರ ಇಡಿ ಕಾಡಿಗೆ ||

ಎಲೆ ಇರದ ಮರದಲ್ಲಿ ಒಂದೇ ಹೂವರಳಿತ್ತು
ಅನುಮಾನ ಕಣ್ಣಿನಲ್ಲಿ |

ಆ ಹೂವ ಪಕ್ಕದಲಿ ಮೂರುವರ್ಣದ ಹಕ್ಕಿ
ಬಲವಿಲ್ಲ ರೆಕ್ಕೆಯಲ್ಲಿ ||

ಬಿರಿದ ಮೋಡದ ಒಳಗೆ ಕೆಂಡಗಣ್ಣಿನ ಹದ್ದು
ಹೊಂಚಿತ್ತು ಎರಗಲಿಕ್ಕೆ |

ಒಲೆಯ ಮ್ಯಾಲಿನ ಸುಡುವ ಹಂಚುನೆಲ ಕಾದಿತ್ತು
ಜೀವಿಗಳ ಹುರಿಯಲಿಕ್ಕೆ ||

ಕನಸು ಒಣಗಿದ ಕ್ಷಿತಿಜ ಕಲ್ಲಾಗಿ ಕೂತಿತ್ತು
ಹಿಡಿದು ಜೀವಾ ಕಣ್ಣಿನಲ್ಲಿ

ಭಾರರೆಪ್ಪೆಯ ಮೇಲೆ ಶಪಿತ ಬದುಕಿನ ಭಾರ
ಎಲ್ಲಿ ಇದೆ ಕೊನೆಯ ಆಸೆ?

(ಅವಸ್ಥೆಚಿತ್ರ)