ನೀರಿಗಂತ ನಾನು ಬಂದೆ
ಕೇರಿಗಂತ ಹುಡುಗ ಬಂದ
ನೋಡಿದವನೆ ಹೌಹಾರಿ
ದಾರಿಗಡ್ಡ ನಿಂತುಕೊಂಡ
ಸೆರಗ ಹಿಡಿದ ಎಳೆದಾನವ್ವಾ |
ಏ ಪೋರಿ ಬಾರೆ | ಬಾಬಾ ಅಂತ ಕರೆದಾನವ್ವ ||

ಮಾತನಾಡುತ ಬಂದ
ಮೈಮ್ಯಾಲ ಕೈ ತಂದ
ಗಂಧ ಸೂಸುವ ಹೂವೆ ಎಂದ | ನನಗ
ಜಾತ ಮಲ್ಲಿಗಿ ಹೂವ
ಜಗ್ಗಿ ಕೊಯ್ಯುವರೇನೊ
ಮಗ್ಗಿ ಉದುರ್ಯಾವೊ ಚೆದುರಾ |

ಹೂಗಾರನಾಗಿ ಬಂದ ಕೊಯ್ದಾ |
ಹೂಕೊಯ್ದಾ | ಹೂಮಗ್ಗಿ ಕೊಯ್ದಾನ ||

ಸರಸದ ಮಳಿಗಳ
ಮೈಮ್ಯಾಲ ಸುರಿದಾನ
ಹರಿದಾವು ಹರುಷದ ನೀರಾ |
ಎಳಿಮೀನು ತೇಲೇನ
ಸುಳಿವೀಗಿ ಸಿಕ್ಕೇನ
ತಿಳಿಯದಾಯಿತು ನೀರಿನಾಳ | ಆಳ

ಒಳಗೊಳಗ ಗಾಳಾ ಹಾಕಿ ಎಳೆದಾ
ಹಾ ಎಳೆದಾ | ಹಾ ಬಳಿಗೆ ಎಳೆದುಕೊಂಡಾ ||

ಬಂಡುಕೋರನು ಹಿಡಿದ
ಪುಂಡು ಪೋಕರಿ ಹಿಡಿದ
ಮುಚ್ಚಿದ್ದ ಕದಗಳ ಮುರಿದಾ | ಒದ್ದಾ
ಜಡಿಮಳಿ ಜಡಿದಾನ
ಅಣೆಕಟ್ಟು ಒಡೆದಾನ
ಹಾಳಾಗಿ ಹೋದಾವು ಸದರಾ |

ಮೂಡ್ಯಾವು ಬಿರುಕಿನೊಳಗ ಹಸಿರಾ |
ಹಾ ಹಸಿರಾ | ಹಾ ಹಸಿರು ಚಿಗುರ್ಯಾವ ||

(ನಾಟಕ)