ಎಲ್ಲರಂಥವಳಲ್ಲ ನಮ್ಮಾಕಿ|
ಸಲ್ಲು ಸಲ್ಲಿಗೆ ತುರುಬಕಟ್ಟಾಕಿ ||ಪ||

ಹಲ್ಲು ಕಿರಿಯೋದನ್ನ ಕಲಿಸಿ
ಜುಟ್ಟು ಹಿಡಿದು ನಡೆಸುವಾಕೆ |
ಹಸಿವು ಬಾಯಾರಿಕೆಯ ಹುಟ್ಟಿಸಿ
ಬಿಸಿಲು ಕುದುರೆಯ ಮ್ಯಾಲೆ ಹತ್ತಿಸಿ |
ಕೂಳು ನೀರಿಗೆ ಬದಲು ಬೈಗಳ
ಮಳೆಯ ಸುರಿವಾಕಿ ||

ಉರಿವ ಬೆಂಕಿಯ ಮುಂದೆ ನಿಂತು
ಬೆಳಕಿನಲ್ಲಿ ತಲೆಯ ಕೆದರಿ |
ಹಿಂದೆ ಬೆಳಗುವ ಪ್ರಭಾವಳಿಗಳ
ತೋರಿ ತಾ ಜಗದಂಬೆಯೆನ್ನುತ
ಸೆಡ್ಡು ಹೊಡೆವಾಕಿ ||

(ಭೋಳೇಶಂಕರ)