ಗೋದೂ ತಾಯಿ, ಸ್ವಲ್ಪ ವಿಸ್ತಾರ ಬಾಯಿ, ಸದಾ
ಹರಿರಾಮಾ, ಅಯ್ಯಮ್ಮಾ ಐವತ್ತರ ಈಯಮ್ಮ
ನ ಬಲಗೈ ಸವರಿದರೆ ರಾಮಾಯಣವ
ದೇಹದ ಎಲ್ಲೆಲ್ಲೆಲ್ಲೋ ರೋಮಾಂಚನದನುಭವ!

ಈಕೆಯ ಎದುರಿಗಿರಲೇಬೇಕು ರಾಮಾಯಣ, ಬತ್ತಿ
ಹೊಸೆವಾಗಲೂ, ಮಗನ ಬೈವಾಗಲೂ, ತರಕಾರಿಯ
ಪೈಪೈಸೆ ಚೌಕಾಶಿಗೂ, ತರಾಟೆಗೆ ತಗೊಂಡು ಸೊಸೆಯ
ಮಾಡಿ ತರಲೆಯ ‘ಮದುವೆಯಾಗಿ ಮಗನ
ಹೆರುವ ತನಕ ನೋಡಿರಲಿಲ್ಲವೇ ನಾನವರ ಮುಸುಡಿಯ’
ಎಂದು ಹೇಳುವಾಗಲೂ, ಅಥವಾ ಯಾವಾಗಲೂ.

ಕಸಗುಡಿಸುತ್ತ ಸೊಸೆ ಮುಟ್ಟಿದರೆ, ಶರ್ಟು ಕಳಚುತ್ತ
ಮಗ ಕಣ್ಣಾಡಿದರೆ, ಪಕ್ಕದ ಮನೆಯ ಸೊಕ್ಕಿನ ಹುಡುಗರು
ಆಟದ ಗತ್ತಿನಲ್ಲಿ ತಟ್ಟಿದರೆ – ಏನು? ರಾಮಾಯಣವ, –
ಗೊತ್ತಲ್ಲ ಗೋದೂ ತಾಯಿಗೆ ಸ್ವಲ್ಪ ವಿಸ್ತಾರ ಬಾಯಂತ,
ತೆರೆಬಾಯಿಂದ ಬೈಗುಳದ ಹೂಹೂಹೂ ಪೇರಿಸಿ,
ಸ್ವರ್ಗ ನರಕ ತಿಥಿಗತಿ ಪಿಂಡ, ಸತ್ತ ಗಂಡ
ಕಾಶಿ ಹರಿದ್ವಾರದ ಹೆಸರಿನಿಂದ ಹೆದರಿಸಿಯಾಳು.

ಇಲ್ಲಾ ಒಮ್ಮೊಮ್ಮೆ ಯಾರಿಲ್ಲದಾಗ ತಂತಾನೆ ಬೆರಳೆಣಿಸಿ
ತೂರಿ ರಾಮಾಯಣದಲ್ಲಿ ಮಾತಾಡಿಕೊಳ್ಳುತ್ತಾಳೆ ವಟವಟ.
ವಾದಿಸಿ ಜಗಳಾಡಿ ಅಳುತ್ತಾಳೆ ಸಹ! ಬಹುಶಃ
ವ್ಯರ್ಥಗಳ ಸಮರ್ಥಿಸಿಕೊಳ್ಳುತ್ತ, ಅಪಾರ್ಥದಲ್ಲಿ
ಅರ್ಥಗಳ ಸೃಷ್ಟಿಸುತ್ತ, ಇಲ್ಲಾ
ರಾಮಾಯಣದ ಮಹಿಮೆ ಜಪಿಸುತ್ತ.

ಈಗೆಲ್ಲಿಯಾದರೂ ಅಪ್ಪಿತಪ್ಪಿ ಸೊಸೆಯ ನೆರಳು
ಗೋಚರಿಸಲಿ – ಗೊತ್ತಲ್ಲ ಗೋದೂ ತಾಯಿಗೆ
ಸ್ವಲ್ಪ ವಿಸ್ತಾರ ಬಾಯಂತ –
‘ಲೇ ಹಾದರಗಿತ್ತಿ, ನೋಡು ರಾಮಾಯಣದ ಸೀತೆ
ನಿನ್ನಂತಲ್ಲ, ಅತ್ತೆಯ ಉಗುಳು ದಾಟಿದವಳಲ್ಲ
ಗರತಿ, ಪತಿವರತಿ’. . . . . ಇತ್ಯಾದಿ.

ಹಾಗಂತ ರಾಕ್ಷಸಿಯಲ್ಲ, ಮಗ ಸ್ನಾನಕ್ಕಿಳಿಯಲಿ
ಬೆನ್ನಿಗೆ ಸೋಪುಜ್ಜುತ್ತ, ಊಟಕ್ಕೆ ಕೂರಲಿ
ತೆರೆದೆದೆ ಗಮನಿಸದೆ ಸೀರೆ ಸೆರಗಿಂದ
ಗಾಳಿ ಬೀಸುತ್ತ ಹೇಳುತ್ತಾಳೆ: ಮಗಾ ಕಂಡೆಯಾ
ನಿನ್ನ ಹೆಂಡತಿಯ ಮೊಂಡು ಮೋಟು ಜಡೆಯ?
ಸೊಟ್ಟ ಸೌಟೆದೆಯಾ; ಆಗಿನಕಾಲ; ಈಗೆಲ್ಲಿದೆ ಎಲ್ಲಾ:

ಚಿಕ್ಕಂದಿನಲ್ಲಿ, ಯಾಕೆ, ದೊಡ್ಡವನಾದರು ಈಗ –
ಮದುವೆಯಾದರೂ
ಮಗ ಮಲಗಬೇಕು ತನ್ನೆದರಲ್ಲೆ, ಸೊಸೆ ಅಡಿಗೆಮನೆಯಲ್ಲಿ.

ಮೊದಮೊದಲು ಅಕುಂಚನವಾಗಿ ಸಂಕೋಚದಲ್ಲಿ
ಆಮೇಲೆ ಅಡ್ಡಾದಿಡ್ಡಿ ದೊಡ್ಡ ದೇಹದಲ್ಲಿ ಗೊರಕೆಯ

ತುರೀಯಾವಸ್ಥೆಗೆ ತಲುಪಿದನೋ –
ಗೊದು ತಾಯಿ, ವಿಸ್ತಾರ ಬಾಯಿಮುಚ್ಚಿ, ಮೈಯೆಲ್ಲ ಕಣ್ಣಾಗಿ
ಕಣ್ಣೆಲ್ಲ ಕೈಯಾಗಿ, ರಾಮಾಯಣದ ರಹಸ್ಯ ಪುಟದಲ್ಲಾಡಿಸುತ್ತ
ಆಡುತ್ತ ಆಡಿಸುತ್ತ ಬೆರಳ,
ಕಂಪಿಸುವ ಮೂಗಿನ ಕೆಂಪು ಮುಖದಲ್ಲಿ
ತಿಳಿ ಬೆವರೊಡೆದು ಮಲಗುತ್ತಾಳೆ. ಬೆಳಿಗ್ಗೆದ್ದು
ಹೇಳುತ್ತಾಳೆ: ಮಗಾ,
ಕನಸಿನಲ್ಲಿ ನಿಮ್ಮಪ್ಪ ಬಂದಿದ್ದ
ರಾಮಾಯಣವೇನು ಸಾಮಾನ್ಯವೇನೊ?

ನಿಜ ಹೇಳಲೆ? ಅವಳಿಗೆ ರಾಮಾಯಣ ತಿಳಿಯುವುದಿಲ್ಲ
ಯಾಕೆಂದರೆ ಓದು ಬರಹ ಬಲ್ಲವಳಲ್ಲ.
ಇದ್ದಿರಬಹುದು ಅಭಿಮಾನ
ಯಾಕೆಂದರೆ ಅದು ಗಂಡನ ರಾಮಾಯಣ.

ದಡ್ಡಮಗ ಇಂದ್ರಿಯದ ಕಳವಳಕೆ ಹಳಹಳಿಸಿ
ಹೆಂಡತಿಯ ಬೆನ್ನ ಹಿಂದೆ ಕದ್ದು ಸುಳಿದಾಡಿದನೊ –
ಈ ತಾಯಿಗೆ ಮಹಾಮಾಯಿಗೆ ಹ್ಯಾಗೆ ತಿಳಿಯುತ್ತದೋ?
ಹಂಗಾಮಿಗೆ ಹದವಾಗಿ ಸೊಸೆಯ ಮೈ ಬಾರಿಸಿ ಚರ್ಮ
ಸುಲಿದು ಮಡಿಬಟ್ಟೆಯ ಹಾಗೆ ಒಣಗು ಹಾಕುತ್ತಾಳೆ.

ಚರ್ಮ ಹೀಗೆ ಒಣಗುತ್ತಿದ್ದಾಗಲೇ
ಮೊದಲಿನಿಬ್ಬರು ಸೊಸೆಯಂದಿರು ಗೊಟಕ್ಕೆಂದದ್ದು
ಗೋದೂ ತಾಯಿ ಬಕೆಟ್ಟು ಕಣ್ಣೀರು ಸುರಿಸಿದ್ದು
ಬಿಡು ಮಗಾ ಸಾವಿರ ಹೆಣ್ಣ ತಂದೇನಂದದ್ದು
ಮಗ ಯಾಕೆ ಊರಿಗೂರೇ ಮೂಗಿನಮೇಲೆ ಬೆರಳಿಟ್ಟದ್ದು
ಈಗಿದ್ದ ಸೊಸೆಗೆ ಬಿದ್ದ ಕನಸಿನ ಪ್ರಕಾರ – ಸುಳ್ಳೆಷ್ಟೋ ಖರೆ ಎಷ್ಟೋ!

ತನ್ನ ಗಂಡನ್ನ ಹೆಣ್ಣು ಹುಲಿಯೊಂದು ಅರ್ಧ ನುಂಗಿದ ಹಾಗೆ
ಕನಸಾಗಿ ಕರುಬಿದಳಂತೆ

ಕಿವಿಕಿವಿಗೆ ಹಬ್ಬಿ ಒಬ್ಬೊಬ್ಬರು ಒಂದೊಂದು ಥರ,
ಅವರವರ ಶಕ್ತ್ಯಾನುಸಾರ, ಸೊಸೆಯಂದಿರ ಸಾವಿಗೆ
ಭಾಷ್ಯ ಬರೆದು ತೃಪ್ತಿಪಟ್ಟರಂತೆ.

ವಯಸ್ಸಾದಂತೆ ಬುದ್ಧಿ ಬರುವುದಂತೆ
ಕತ್ತೆಯಂಥ ಕತ್ತೆಗೂ. ಬಂತು ಮಗನಿಗೂ,
ತಾಯಿ ಹೋಗಿದ್ದಳು ಮಡಿನೀರಿಗೆ, ಹೊಳೆಗೆ.
ಬಂದ ಬುದ್ಧಿ ಸರಿಯಿದ್ದರೆ ರಾಮನ ಭಾಗ ಬರಲಿ,
ಇಲ್ಲಾ, ರಾವಳನ ಭಾಗ ಬರಲೆಂದು ಅವಸರವಸರವಾಗಿ
ರಾಮಾಯಣದಲ್ಲಿ ಬೆರಳು ಸೇರಿಸಿದ್ದ – ಕೈಗೆ
ಮಿದು ಮಿದು ಉದ್ದುದ್ದ ಹತ್ತಿ, ಪುಟತೆಗದ,
ಬಿಳಿ ಬಿಳಿ ಗರಿ ಗರಿಯ ನಿರೋಧ ನೋಡಿ
ಬಿಸಿಯೇರಿ, ತಣ್ಣಗಾಗಿ, ಅಬ್ಬಬ್ಬಾ ಎಂದು
ಪುಟ ಮುಚ್ಚಿದ.

ಅದು ರಾಮನದೇ? ರಾವಳನದೆ? ಅಂತ ಶಾಸ್ತ್ರಿಗಳಲ್ಲಿ
ಹೊತ್ತಿಗೆ ತೆಗೆಸಿದರೆ – ಭೂತಬಾಧೆ ಮಗಾ, ಮನೆ
ಬಿಡೂಂತ ಬಂತು. ಮನೆಗೆ ಬಂದು
ಹೆಂಡತಿಯೊಂದಿಗೆ
ಮನೆ ಬಿಡುವುದಾಗಿ ಹೇಳಿದ. ಯಾರಿಗೆ? ತಾಯಿಗೆ.
ಗೋದೂ ತಾಯಿ ವಿಸ್ತಾರ ಬಾಯಿಂದ ಹೇಳಿದಳು:
ಆಯ್ತಲ್ಲ, ಈಗ ಯಮಗಂಡ ಕಾಲ ನಾಳೆ ಹೋದೀಯಂತೆ ಬಿಡು ಮಗಾ.
ಬೆಳಗ್ಗೆದ್ದು ಹೆಂಡತಿಯ ತಟ್ಟಿದ. ಹೆಣವಿತ್ತು; ಜೀವವಿಲ್ಲ.
ಬೆದರಿ ಬೆಕ್ಕಸ ಬೆರಗಾಗಿ ಹೊರಗೆ ಬಂದರೆ
ಗೋದೂ ತಾಯಿ – ಬಿಡು ಮಗಾ ಸಾವಿರ ಹೆಣ್ಣ ತಂದೇನೆಂದು
ವಿಸ್ತಾರ ಬಾಯಿ ತೆರೆದಾಗ – ಮಗ
ಅಯ್ಯಯ್ಯೋ ಹುಲಿ ಹುಲಿ ಎಂದು

ತಲೆಯ ಬುದ್ಧಿಯನ್ನು ಕಾಲಿಗೆ ಹೇಳಿದ.
ಈ ಕಥೆಯ ನೀತಿಯಿಷ್ಟೆ – ನಿಮ್ಮ ಮಗಳಿಗೆ
ಗೋದೂತಾಯಿ ಅಂತ ಹೆಸರಿಡಬೇಡಿ.