ಅವ ಸತ್ತ ಬಗೆ ಪೋಲಿಸರಿಗೆ, ಅವರ ನಾಯಿಗೆ
ಪತ್ರಿಕೆಗೂ ಬಗೆಯರಿಯದೆ ಹಾಗೇ ಇದೆ.
ಫೈಲುಗಳಲ್ಲಿ ಸಿಳ್ಳುಹಾಕುವ ಮಾಮೂಲಿ ಕೇಸು
ಬಲ್ಲವರಿಗೆ ಈ ದಿಗಿಲು ದಕ್ಕುವುದು ಸುಲಭವಲ್ಲ.
ಹೇಳಬಾರದ್ದೇನಲ್ಲ, –
ಈತ ತನ್ನ ನೆರಳಿನ ಜೋಡಿ ಹಾದರ ಮಾಡಿದ್ದು
ಅದು ಸುತ್ತಿ ಉಸಿರುಗಟ್ಟಿ ಸತ್ತದ್ದು

ನಗುವ ಬಾಬತ್ತಲ್ಲ. ಚಿಕ್ಕಂದಿನಿಂದ ಹೀಗೆಯೇ ಇದ್ದನಾತ

ನೆರಳ ಕಂಡರೆ ಪ್ರೇಮದ ಗುಟುರು ಹಾಕುವ ಹೋತ:

ಒಬ್ಬಂಟಿಯಾದಾಗ ಬೇಕೆಂದೆ ಬೆದೆನೆಗೆದು
ನೆರಳಿನ ಜೋಡಿ ತಿಳ್ಳೀ ಆಡಿ ಹೈಹಾರುವ ಪರಿಯೇ,
ಕಂದೀಲಿಗೆ ಕುಣಿವ ನೆರಳಿನಂಗಾಂಗ ಭಂಗಿಗೆ
ಕಂಗಳು ಕನಸು ಹೆರುವೈಸಿರಯೇ,
ನೆರಳಿನ ಕತ್ತಿಗೂ ತೋಳ ಸಂದಿಗೂ ಕೈತೂರಿ
ಫಕ್ಕನೆ ನಕ್ಕ ನಗೆಯೇ,
ಗೋಡೆಯ ಪಕ್ಕ ನಿಂತು ಡಿಕ್ಕೀಹೊಡೆದು
ಪಕ್ಕೆ ನೋಯಿಸಿಕೊಂಡ ಸುಖದ ನೋವೇ,
ಕತ್ತಲೆಯ ವಿರಹವೇ
ಬೆಳಕಿನ ಸರಸವೇ,
ಒಂದೇ ಎರಡೇ, ಆಹಾಹಾ ಇವ
ಕನ್ನಡಿಯ ಛಾಯೆಗೆ ಮಾಯೆ ಮಾಡಿ
ಹಾಡು ಹೇಳಿದಾಗ
ನೆರೆಹೊರೆ ಹುಡುಗಿ ಬಿಕ್ಕಿದ್ದು
ಹೆಚ್ಚಲ್ಲ ಬಿಡಿರಿ.

ಆಯ್ತಲ್ಲ,
ಮೊನ್ನೆ ಸಾವಿನ ಮುನ್ನ, ಸರಿರಾತ್ರೀಲಿ
ಏಕಾಂತಕೆಳಸಿ ಕಂದೀಲು ತಂದಿಟ್ಟ.
ಬಿದ್ದ ನೆರಳಿನಗುಂಟ ಕುಂಟಲಿಪಿ ಆಡುತ್ತಾ ಆಡುತ್ತಾ,
ಹೊಂಟಿರಲು, –
ದೂರದೆತ್ತರದಲ್ಲಿ,
ಆಧಾರವಿಲ್ಲದಾಕಾಶದಲ್ಲಿ ನೇತಾಡುವ ಸೂರ್ಯನ ಹಾಗೆ,
ನಗುವ ಚಂದ್ರನ ಹಾಗೆ,
ಪಾತಾಳ ಬಾವಿಯಲ್ಲಿ ಮೂಡುವ ಚಿಕ್ಕೆಯ ಹಾಗೆ,
ಹುಲ್ಲಿನೆಸಳಿನ ಮೇಲೆ ಮಿನುಗುವಿಬ್ಬನಿ ಹಾಗೆ,
ಸತ್ಯದ ಅತಿಶಯದ ಹಾಗೆ, ಹೊಳೆವ ಸುಳ್ಳಿನ ಹಾಗೆ
ತೂಗ್ಯಾಡುತ್ತಿತ್ತು ಇನ್ನೊಂದು ಕಂದೀಲು!
ಕಾದಿತ್ತು ಕತ್ತುಹಿಸುಕುವ ಕಪ್ಪು ದಿಗಿಲು
ಅಗೋ ತನ್ನ ಮೈಗೆ ಇನ್ನೊಂದು ನೆರಳು!

ಆ ನೆರಳು ಈ ನೆರಳು ಕ್ರಾಸಾಗಿ
ಕತ್ತರಿಗೆ ಸಿಕ್ಕು
ಅಳ್ಳಳ್ಳಾಗಿ ಹುಡುಗ ತಳ್ಳಂಕಗೊಂಡ.
ಬೆದರಿ ವೇದನೆಯೊದರಿ ರೂಮಿಗೆ ಬಂದ.

ರೂಮಿನ ತೂಗುವ ದೀಪದ ಗೋಡೆಯ ನೆರಳು
ಕುಣಿಕುಣಿದು ಗೋಣಿನ ಸುತ್ತ ನೇಣಾಗಿ ಸುತ್ತಿ ಸುತ್ತುವರಿದು
ಹೋರಾಡುತ್ತ ಹೋರಾಡುತ್ತ
ತೆರೆಬಾಯಿ ತೆರದಂತೇ
ಸೆಟೆದ ಮೈ ಸೆಟೆದಂತೇ
ಚಾಚಿದ್ದ ಕೈ ಚಾಚಿದ್ದಂತೇ

ಹಾರಿದವು, –
ಹುಡುಗನ ಹರಣ.
ಎರಡಳಿದವ ಆತನ ಆತ್ಮಕ್ಕೆ ಶಾಂತಿ ಕೊಡಲಿ, –

ಗೋಡೆಯಮೇಲೆ ಕ್ರಾಸಿನೇಸುವಿನಂತೆ
ಕೀಲಿಸಿದ್ದ ನೆರಳಿನ್ನೂ
ಪೋಲೀಸರಿಗೆ, ಅವರ ನಾಯಿಗೆ, ಪತ್ರಿಕೆಗೂ
ಬಗೆಹರಿಯದೆ ಹಾಗೇ ಇದೆ.

ಇದಕ್ಕೆ ಸಾಕ್ಷಿ ಬೇಕೆ?
ನೋಡಿರಿ, ಜೋಡಿ ನೆರಳಿದೆ ಈಗ ನನ್ನ ಮೈಗೆ!