ಹಾಡು ||
ಹುಸಿಯಲ್ಲ ಅಸಲ ಖರೆ ಸೋಸಿ ಹೇಳತೇವ್ರಿ
ಇದ್ದನೊಬ್ಬ ಕಲೆಗಾರ |
ಭಾರಿ ಸಿಟಿಯ ಕಿರುರೂಮಿನೊಳಗ ರೂಮಿನಂಥಾ ಗೂಡಿನೊಳಗ
ಮರೆತ ಹಾಡಿನ ತುಂಡು ಸಾಲಿನ್ಹಾಂಗ | ಇದ್ದಾ
ಹೊರಗೆ ಬರಲು ರಹದಾರಿಯಿಲ್ಲದ
ಆಳ ನೋವಿನ್ಹಾಂಗ ||

ವಚನ ||
ಆತ ಖ್ಯಾತನಲ್ಲ, ಜರಿರುಮಾಲಿಲ್ಲ, ಕಾಶ್ಮೀರಿ ಶಾಲಿಲ್ಲ,
ಹುಟ್ಟಿ ಖಾನೆಸುಮಾರಿಗಿಲ್ಲ, ಸತ್ತು ಗೋರಿಗು ಇಲ್ಲ,
ಆದರೂ ಘಟ್ಟಿಕುಳ, ಚಿತ್ರ ಬರೆಯೋದನ್ನ ಬಿಡಲೇ ಇಲ್ಲ.
ಇನ್ನೇನಿಲ್ಲ, ರೂಮಿನ ಗೋಡೆಯ ಮೇಲೆ ತರತರದ ಗಿಡಮರ

ಮುರಿಮುರಿಗೆಯೆಳೆ ಬಳ್ಳಿ ಬರೀತಿದ್ದ,
ಎಲೆ ಮಾತ್ರ ಬರೆಯೋದು ಬರಲೆ ಇಲ್ಲ.

ಹಾಡು ||
ಬೊಡ್ಡಿ ಕಾಂಡ ಟೊಂಗಿ ಬರೆದಾ |
ಟಿಸಿಲು ಟಿಸಿಲಿನ
ದೇಟು ದೇಟಿನ ನೀಟ ಗೆರೆಯ ಬರೆದಾ |
ಅಗಿದು ಅಗಿದು ಒಳ
ಗುದ್ದಿ ಹೋಗುವ ನೆಲ
ದಾಳ ಬೇರು ಬರೆದಾ |
ಇಳಿಬಿದ್ದ ಬಿಳಲು ಬರೆದಾ |

ಗಿಡಕ ಮರಕ ಎಲೆ ಮೂಡಲಿಲ್ಲಾ
ತಲಿಯಮ್ಯಾಲ ಕೈ, ಕೂತನಲ್ಲಾ
ಮರೆತ ಹಾಡಿನ ತುಂಡು ಸಾಲಿನ್ಹಾಂಗಾ | ಇದ್ದಾ
ಹೊರಗ ಬರಲು ರಹದಾರಿಯಿಲ್ಲದ
ಆಳ ನೋವಿನ್ಹಾಂಗ ||


ವಚನ ||
ಅವ ಬರೆದ ಬೊಡ್ಡಿಗೆ ರೆಂಬೆ ಕೊಂಬೆಯೊಡೆದು
ಮರವಾಗಿ, ಮರ ಬೆಳೆದು ಮಳೆಯಾಗಿ
ಒಂದಿದ್ದದ್ದು ಹಲವು ಹದಿನೆಂಟಾಗಿ, ರೂಮಿನ ಛಾವಣಿಯ ತುಂಬ
ಮೆಳೆಹೋದರು ಬೆಳಕಿಳಿಯದಂತೆ ಇಡಿಕಿರಿದು ಬಲೆ ಹೆಣೆದರೂ
ಬರೆದ ಕಾಡು ಒಡ್ಡೊಡ್ಡಾಗಿ ಹಬ್ಬಿ ರೂಮಿನ ನಾಲ್ಕೂ ಗೊಡೆಯಲಿ
ಬೆರಳೂರುವಷ್ಟು ಸ್ಥಳ ಉಳಿಯದಿದ್ದರೂ, ಸದರಿ ಕಲೆಗಾರನಿಗೆ
ಬಿಳಿದಾಡಿ ಬೆಳೆದರೂ
ಕೈಯುಗುರು ಬೆಳೆದರೂ
ಬೋಳುಗಿಡಮರಕೆ ಎಲೆ ಬೆಳೆಯಲ್ಲಿಲ್ಲ,
ಹೊರಗೆ ಹಂಗಾಮ ಹದ ಬಂದರೂ ಹೋದರೂ
ಒಳಗೆ ಋತುಮಾನ ಕಾಲಿಡಲೇ ಇಲ್ಲ.

ಹೊರತಾದ ಹೊರಗಿಗೆ, ಮೈಮರೆತ ಕಾಡಿಗೆ
ದಾರಿತಪ್ಪಿಸಿಕೊಂಡು ಅಲೆದರೂ ಕರೆದರೂ
ಎಲೆಮಾತ್ರ ಮೂಡಲಿಲ್ಲ!

ಹಾಡು ||
ಎಲೆ ಮೂಡಲಿಲ್ಲಾ ||
ಕಣ್ಣಿನಂಚಿನ ಹಸಿರು ಕುಂಚಿನಲಿ
ಹೆಸರುಗೊಳ್ಳಲಿಲ್ಲಾ |

ಕಂಡ ಖರೆಗೆ ಹಸಿರೇರಲಿಲ್ಲ ಹಾ
ಉಸಿರು ಚಿಗುರಲಿಲ್ಲಾ ||


ವಚನ ||
ಎಲೆ ಮೂಡಲಿಲ್ಲವೆಂಬುವ ನೋವು
ಒಳಗೊಳಗೇ ಬೆಳೆದು, ಬೆಳೆದ ನೋವು
ಬೋಳು ಗಿಡಮರದ ಗಂಟಲಲಿ
ಉಕ್ಕಲಾರದೆ ಸಿಕ್ಕಿ ಬಿಕ್ಕಾಗಿ
ಕಲೆಗಾರನ ಗಂಟಲುಬ್ಬಿತು.
ಗಂಟಲ ನೋವು ಉಬ್ಬಿ ಚೊಂಬಿನಷ್ಟಾಗಿ
ಕುರುವಾಗಿ, ನೋವು ತುಟಿ ಬಿಚ್ಚದೆ,
ಒದ್ದಾಡಿದಾ ಬಿದ್ದು ಒದ್ದಾಡಿದಾ | ಸ್ವಾಮಿ
ಹಗಲಾರು ಇರುಳಾರು ನರಳಾಡಿದಾ,
ಸಾಯಲಾರೇ ಶಿವನೆ ಬದುಕಲಾರೆ |


ವಚನ ||
ಕೊನೆಗೂ ಮೌನದ ತುಟಿಗೆ ಮಾತು ಬಂತು ಕೋ
ಉಘೇ ಉಘೇ ಶಿವ ಎನ್ನಿರಿ ಸ್ವಾಮೀ,
ಶಿವಲಿಂಗ ಎನ್ನಿರಿ,
ಬಣ್ಣಕೆ ಎರವಾದ ಕನಸಿಗೆ ಕಣ್ಣು ಬಂತು ಕೋ
ತಟ್ಟಂತ ದನಿಯಾಗಿ ಚಟ್ಟಂತ ಮೇಲೆದ್ದಾಗ
ಗಂಟಲ ಕುರುವೊಡೆದು, –
ಹುಣ್ಣೊಳಗಿಂದ ಬಣ್ಣ ಬಣ್ಣದ ರೆಕ್ಕೆಯೊಡೆದು
ಇಷ್ಟೆ ಕಣ್ಣಿನ ಇಷ್ಟಿಷ್ಟೆ ಚುಂಚದ ಹಕ್ಕಿ
ಗಕ್ಕನೆ ಹಾರಿಬಂತು. ಮೇಲಕ್ಕೆ ಕೆಳಕ್ಕೆ!
ರೆಂಬೆ ರೆಂಬೆಗೆ ಕೊಂಬೆ ಕೊಂಬೆಗೆ ಸೋಂಕಿನ ಸೊಗಸ ಬೀರುತ,
ಹಾರಿ ನಿಬ್ಬೆರಗಿನಲಿ ಹಾಡತೊಡಗಿತು ಬೆಳಕು ಚಿಮ್ಮಿದ ಹಾಗೆ.
ದೇವರ ಮಹಿಮೆಗೆ ಶರಣೆನ್ನಿರಿ ಸ್ವಾಮೀ
ಕಲೆಗಾರನ ಕಲ್ಪನೆಗೆ ಶರಣೆನ್ನಿರಿ.

ಹಾಡು ||
ಹಕ್ಕಿ ಹಾಡಿತಣ್ಣಾ ||
ತುಂಬಿದೆದೆಯ ತಂಬುಲದ ಹಾಡುಗಳ
ಕಾಡಿಗಿಡಿಸಿತಣ್ಣಾ |
ರೆಂಬೆಕೊಂಬೆಗೂ ನೆಗೆದು ಹಸಿರು ಹೂ
ಹೆಡಿಗೆ ಮುಡಿಸಿತಣ್ಣಾ
ಹಾಡಿದಷ್ಟು ಹಸಿರುಕ್ಕಿತಣ್ಣಾ
ಉಕ್ಕಿದ ಹಸಿರೇ ಬಲೆಯಾಯ್ತಣ್ಣ
ಹೊರಗೆ ಬರಲು ರಹದಾರಿಯಿಲ್ಲದೇ
ಒಳಗೆ ಸಿಕ್ಕಿತಣ್ಣಾ | ಹಕ್ಕಿ
ತನ್ನ ಬಲೆಗೆ ತಾ ಬಲಿಯಾಯಿತಣ್ಣಾ ||

ಆಚೆ ಸೀಮೆಯ ರುಚಿ ಬೆರೆತ
ಹದವಿತ್ತು ಹಾಡಿನಲಿ
ಹರ್ಷದ ವರ್ಷಕ್ಕೆ ಹಸಿರೇರಿ ಮರಗಳ ಹೃದಯ
ಅರಳಿ ಪರಿಮಳಿಸಿದವು ಅಲ್ಲಿ ಇಲ್ಲಿ ||