ಆಳ ಆಳ ಪಾತಾಳದಾಗಿನ
ಮೋಸದಾಗಿನ ಕಸಾ ಸೋಸಿ ನಾ
ಅಸಲ ಹಾಡ ಹೇಳಿದರೂ
ನಂಬಾಣಿಲ್ಲ ನನ್ನ ನಚ್ಚಾಣಿಲ್ಲ ಹುಸಿ
ಹುಸೀ ಎಂಬರವರು.

ದೊಡ್ಡದಲ್ಲ ಘನಸಣ್ಣದಲ್ಲ ಹಾ-
ಡಿತ್ತು ಒಡಲಿನಷ್ಟ.
ಬಣ್ಣ ಇಲ್ಲ ಖರೆ, ಕರ್ರಗಿತ್ತು ಅಮ-
ವಾಸೆ ರಾತ್ರಿಯಷ್ಟ.
ತಣ್ಣಗಲ್ಲ ಬಿಸಿಯಲ್ಲ ಇತ್ತು ಶೀ-
ತೋಷ್ಣ ರಕ್ತದಷ್ಟ.
ನಂಬಲಿಲ್ಲವರು ನೆಚ್ಚಲಿಲ್ಲವರು ತಮ
ತುದೀ ಮೂಗಿನಷ್ಟ.

ಸಹಜವಾಗಿತ್ತು ಹಾಡು ಮರದ ಗಂಟಲಿನ ಚಿಗುರಿನಂತೆ
ಮೂರ್ತವಿತ್ತು ಮುದಿಸೂಳೆ ಆಳುವ ಮೈಮನದ ನೋವಿನಂತೆ
ನಾಡಿಬಡಿತಗಳ ಪ್ರಾಸವಿತ್ತು ನಿಜವಿತ್ತು ನಿಜದ ಹಾಗೆ
ಹೊಟ್ಟೆಕಿಚ್ಚಿನಲಿ ಸುಟ್ಟ ಹಸಿವೆಯ ಕಪ್ಪು ತರ್ಕದಂತೆ
ಕಾರಮೋಡ ಭೋರ್ಗರೆದು ಗುಡುಗುವ ಮಿಂಚಿನೆಳೆಯ ಹೋಲಿದರೂ
ನಂಬಲಿಲ್ಲವರು ನಚ್ಚಲಿಲ್ಲ ಹುಸೀ ಹುಸೀ ಎಂದು ಕೂಗಿದರು.

ಕರುಳಿನಾಳದ ಖರೇದೊಳಗಿಂದ
ಹೊರಗ ಬರುವ ಅವಸರಕ
ತುಸ ರಕ್ತ ಬಂತು ಕಣ್ಣುರಿಯುತಿತ್ತು
ಕಡುನೀಲಿ ಫಾಸ್ಫರಸ್‌ಧಾಂಗ

ತುಟೀ ಕಚ್ಚಿ ನಿಂತಿತ್ತು ಉಕ್ಕುವ
ಬಿಕ್ಕ ತಡಿಯೊ ಹಾಂಗ
ಆದರೇನು ಅದ ಕಂಡ ಒಡನೆ
ಮೈ ಬಿಳಿಚಿ ಕಿರಿಚಿದರು
ಒದರಿ ಕೂಗಿದರು
ಹುಸೀ ಎಂದರವರು.