ಬ್ಯಾಟಿ ಬ್ಯಾಟಿಯನಾಡಿದಾ |
ಬ್ಯಾಡರ ಹುಡುಗ |
ಕಾಡ ಬ್ಯಾಟಿಯನಾಡಿದಾ ||

ಕಾಡೀನ ಮೈಸವರಿ
ಸೂಸ್ಯಾವ ಬಿಸಿಗಾಳಿ
ತುಳುಕ್ಯಾವ ಖುಶಿ ಪುರಮಾಸಿ |
ಹವ್ವಲ್ಲೆ ಅಂದರ
ಅವ್ ನೋಡ ಹೂಚಿಗುರ
ಗಂಧ ಸೂಸ್ಯಾವ ಮಲ್ಲೀಗಿ | ಹಾ ಎವ್ವಾ |
ಬಾಯಿ ಬಂದಾವ ಸಂದಿಗೊಂದೀಗಿ ಹಾ ತಾಯಿ ||

ನದರ ನದರಿಗಿ ತಳಕ
ಹಾಕಿದರ ಮೈಪುಳಕ
ಒಳಗ ಒಡದಾವ ತಿಳಿಬೆವರಾ |
ಹಿಂಡನಗಲಿದ ಜಿಂಕಿ
ಹೌಹಾರಿ ಯಾಕ ನಿಂತಿ
ಹಾರಿ ಬಂದಾನ ಹುಲಿರಾಯಾ: ಹಾ ಎವ್ವಾ
ಎಲ್ಲಿ ಹೋದೀಯೆ ನನ್ನ ಹುಲ್ಲೇಯ ಮರಿಯೆಂದಾ ||

ಮಾತನಾಡುತ ಬಂದಾ
ಮೈಮ್ಯಾಲ ಕೈ ತಂದಾ
ಬಸವಳಿದಾವ ಹಸಿ ದಿಗರಾ |
ಜೋಲಿ ತಪ್ಪಿದ ಪೋರಿ
ಬಿದ್ದಾಳ ತೆಕ್ಕೀಗಿ
ಕರಗಿ ಹರಿದಾವ ನಾಚೀಕಿ | ಹಾ ಎವ್ವಾ |
ಸಂದ ಉಳಿಯದ ಹಾಂಗ ಒಂದಾಗಿ ಮೈಮುರಿದಾ ||

(ಕರಿಮಾಯಿ)