ಹಾರಿ ಹಾರೈಸುತ ಹಲವ ಹಂಬಲಿಸುತ
ಒಲವಿನಾಸರೆ ಬೇಡುತ | ಬಂದೆ
ನಿನ್ನ ಸ್ವಾಗತವಿಲ್ಲ ನಗೆಯ ಹೂ ಬಿಸಿಲಿಲ್ಲ
ಬೆಂಕಿ ಬಿದ್ದವು ಕನಸಿಗೆ ||

ಹೇಗೆ ಹೇಳಲಿ ಹೇಗೆ ಹೇಳಲಾರದೆ ಇರಲಿ
ಬತ್ತಿ ಹೋಗಿದೆ ನಾಲಿಗೆ
ಸಿಂಬೆ ಬಿಚ್ಚುವ ನೆನಪು ಬುಸುಗುಡುವ ಬಿಸಿಯುಸುರು
ಸಂದೇಹ ಸುಳಿದಾಡಿದೆ | ಒಳಗೆ
ಭಗ್ನ ಮಂದಿರ ಮೂಕ ಗೋರಿಯಾಗಿದೆ ಲೋಕ
ಹೀಗೇಕೆ ಬದಲಾಗಿದೆ ||

ಕಾಲನ ಗಡಿ ಮೀರಿ ಕಾಯುವೆ ನಿನಗಾಗಿ
ನನ್ನ ಬಿಡುಗಡೆ ಎಂದಿಗೆ
ಹರುಷ ಹಿಂದಿರುಗಿಸು ಜಡಕೆ ಚೇತನ ನೀಡು
ಸಫಲವಾಗಲಿ ಸಾಧನೆ |
ನನ್ನೆದೆಯ ಬಾನೊಳಗೆ ಮಳೆಬಲ್ಲ ಬರೆದವಳೆ
ಕನಸುಗಳ ಕೊಡುವವಳೆ
ತೋರಿಸು ದಯೆ ಕರುಣೆ ||

(ಉಡುಗೊರೆ)