ಮೂಡಣದ ಹಕ್ಕೆಯಲಿ ಇರುಳು ಕಂದಾಹಾಕಿ
ರಕ್ತ ಚಲ್ಲಾಪಿಲ್ಲಿ ರಟ್ಟರಾಡಿ.
ತಡವಾಯಿತೆಂದು ಅದೆ ಎಚ್ಚತ್ತ ಮುದಿಹುಂಜ,
ಉಸಿರಿಲ್ಲ ಗಿಡಗಂಟಿ ಕೊರಳಿನಲ್ಲಿ.

ಹೊಗೆ ಹಿಡಿದ ಕಂದೀಲ-ಬಿಸಿಲು ಬಿಸಿಯಿಲ್ಲದೆಯೆ
ಇಂಬು ಇದ್ದಲ್ಲೆಲ್ಲ ಮೈಚಾಚಿತು.
ಇದೆ ಈಗ ಎಚ್ಚತ್ತ ಬೀದಿ, ಮೈ ಪರಚುತಿದೆ
ಕಾರು ಟಾಂಗಾ ಗಾಡಿ, – ಹುರುಕಿನುರುಪು.

ಹೂವ ಹೆಣಗಳನೆಲ್ಲ ಹಸಿರ ಮೇಲಿರಿಸಿದರು,
ಹರೆಯು ಸೋರಿದ ಭ್ರಮರ ಹರಿದಾಡಿತು.
ಮರಡಿಯೇ ಎರೆಯಾಗಿ, ಕಸಪೈರು ಹುಲುಸಾಗಿ,
ಬೆಳ್ಳಿ ಬಟ್ಟಲ ಹಾಲು ಹಳ್ಳವಾಯ್ತು.

ಆಗಲು ಹಜಾಮ ಅಂಗಡಿ ತೆರೆದು ಬೋಳಿಸಿದ
ಬೆಳೆದ ತಲೆ, ಬೆಳೆಗುದುರು, ಚುಟ್ಟಸೇದಿ.
ಹಾಲ ತದ್ಭವಿಸಿ ಮಾರುವ ಗೌಳಿ, ಕರುವಿನ –
ಪ್ರತಿಮ ಪ್ರತಿಮೆಯ ನೆಕ್ಕುತಿರುವ ಎಮ್ಮಿ.

ಬರಿಯ ವ್ಯಂಜನಗಳಲಿ ಕವನ ಕಟ್ಟಲುಬಹುದು,
ಇದಕೆ ಸಾಕ್ಷೀ ನಮ್ಮ ಭೀಮೂಕವಿ.
ಸೂರ್ಯೋದಯದ ಅವನ ಹಾಡು ಶಾಲೆಗಳಲ್ಲಿ,
ಇನ್ನೂ ಅನೇಕ ಕಡೆ ಹೆಸರಾಗಿದೆ.

ಚಷ್ಮ ಹಾಕಿದ ಗೆಳೆಯ ಬೀದಿಯಲೆ ಬೀರಿದನು:
ಈ ವಿಶ್ವವೆಲ್ಲವೂ ಬೂದಿಬಣ್ಣ.
ಜನರು ನಕ್ಕರು, ಅಥವಾ ಮತ್ತೆ ತಲೆದೂಗಿದರು;
ಕಂಡ ಈ ಹೊಸತತ್ವ ಏನು ಚೆನ್ನ!


ಇಲ್ಲಿ ಕುಳಿತಿದ್ದೇನೆ, ಸುತ್ತ ವರ್ತುಳ ಕೊರೆದು
ಒಳಗು ಹೊರಗುಗಳನ್ನು ಹೊರತು ಪಡಿಸಿ;
ಎಂದೊ ತಿಂದದ್ದನ್ನು ಮತ್ತೆ ಬಾಯಿಗೆ ತಂದು
ಬರಿಯ ಮೆಲುಕಾಡಿಸುವೆ, ಜೊಲ್ಲು ಸುರಿಸಿ:

ನೀರ ತೆರೆಗಳ ಮೇಲೆ ಲೀಲೆಯಾಡುವ ಬಿಸಿಲು,
ಗಿಡದ ಬುಡದಲಿ ಬೆಳಕ ಹೆಣೆವ ನೆರಳು,
ಎಲೆಯ ಹಸುರಿನ ತುಂಬು ಚಿತ್ರ ಬಿಡಿಸಿದ ಹೂವು;
ಸುಡುಗಾಡಿನಲ್ಲೆಂಥ ನಂದನವನ!

ಕೆಂಪೇನು, ಹಸುರೇನು, ಹಳದಿ ನೀಲಿಗಳೇನು!
ಬಿಸಿಲಿಗೊಡ್ಡಿದ ತೊಗಲಿಗೆಂಥಾ ಸುಖ!
ಹರೆಯಲುಬ್ಬಿದ ತರುಣ ಅಜ್ಜಿಯನು ಕೇಳಿದ್ದ:
ಹೀಗು ಆಗುವುದುಂಟೆ ಹೆಣ್ಣಿನ ಮುಖ?

ಅದು ಏನು, ಇದು ಏನು, ಗದ್ಯದಲೆ, ಪದ್ಯದಲೆ?
ಉಪಮೆ ರೂಪಕ ಪ್ರತಿಮೆ ಸಮಯ, – ಭ್ರಾಂತಿ.
ಸಾವ ಪ್ರಶ್ನಿಸಿ ನಕ್ಕ ಹಸುಳೆ ಹಾಲಿನ  ಕೆನ್ನೆ –
ಗಾವ ಕಾಣಿಕೆಯನ್ನು ಹೊತ್ತು ತರಲಿ?

ಅಯ್ಯೊ ಸಾಯುತ್ತಿರುವೆ ಅಭಿಮನ್ಯುವ್ಯೂಹದಲಿ
ಕೊರೆದ ಗೆರೆಗಳ ಹರಿಯದಂಥ ಧೀರ;
ಉತ್ತರೆಯ ಗರ್ಭದಲಿ ಬೀಜ ಬಿತ್ತಲೆ ಇಲ್ಲ, –
ಹೇ ಕೃಷ್ಣ, ಪಾಲಿಸೋ ನಿನ್ನ ಹಗಲ.

೧೯೬೨