ಮೊದಲೀಗೆ ಅಲ್ಲಮ ಪ್ರಭುವಿಗೆ ಶರಣಾರ್ಥಿ
ಕೂಡಿ ಕುಂತ ಜನಕೆಲ್ಲ ನಮ್ಮ ನಮನಾ.
ಕಲಿಯುಗದೊಳಗಿನ ಕತೆಯ ವಿಸ್ತಾರವ
ತಿಳಿಸಿ ಹೇಳುವೆ ಕೇಳಬೇಕ್ರಿ ಜನಾ.

ಕೂಡಿಕುಂತ ದೈವಕ್ಕ ಕೈಮುಗದ ಹೇಳತೇನು,
ಮರೆಯೀರಿ ಮುಂದಬಂದ್ರ ಚೂರ ಕಸರಾ.
ಯಪ್ಪಾ ಸ್ವಾಮಿ ಗುರುದೇವ ತಪ್ಪಮರತ ಒಪ್ಪಕೊಡ
ನೆಪ್ಪಿನ್ಯಾಗ ಇಡುವಾಂಗ ಸರ್ವರಾ.

ಏ ಎವ್ವಾ ಸರಸೋತಿ ‘ತಾಳಕ್ಕ ನಲಿವಾಕಿ’
ನಾಲೀಗಕ್ಷರ ಕಲಿಸ ಐದರಾ.
ಹಿರಿಯರ ಪಿರತೀಗಿ ಸರಿದೊರೆ ಸಮನಿಲ್ಲ;
ಕೇಳಾವರ ನ್ಯಾಲಿರಲಿ ನಿರಂತರಾ.

ಜಂಬೂದ್ವೀಪದ ಪೈಕಿ ಮ್ಯಾಗಡೆ ಮಲೆನಾಡ
ಸೂಸಿ ಹರಿದಾಳಲ್ಲಿ ಘಟಪ್ರಭಾ.
ಆ ದಂಡಿ ಆರ್ಯಾಣ, ಈ ದಂಡಿ ಶಿವಪೂರ,
ಕೆಂಪು ಹಂಚಿನ ಊರು ಬಲು ಶೋಭಾ.

ಗೌಡ ಶ್ರೀ ಭರತೇಶ, ಗೌಡ್ತಿ ಲಕ್ಷ್ಮೀ ದೇವಿ,
ಎಳಕ ವಯಾದೊಬ್ಬ ಗಂಡ ಮಗಾ.
ತೂಗು ತೊಟ್ಟಿಲವಾಗಿ, ಬೆಳ್ಳಿ ಬಟ್ಟಲವಾಗಿ,
ಕೈಕಾಲ ಮುರದ ಬಿದ್ದ ಲಕ್ಷ್ಮೀ ಜಾಗ.

ಕತಿ | ಹೇಳತೀವ್ರಿ ಮುಂದಿಂದಾ
ಇರು | ಗುರುವೆ ನಾಲಗೆಯ ಹಿಂದಾ
ಆಗ | ದಿರಲಿ ಒಂದು ಸಹ ಕುಂದಾ
ನಾ | ನಿಮ್ಮ ಕರುಣದ ಕಂದಾ

ಗೌಡ್ತಿ ಬ್ಯಾನೀ ತಿಂದ ಗಂಡ ಹಡದ, ಗಂಗಾಳ ಹೊಡದ,
ಐದೇರೆಲ್ಲ ಜೋ ಅಂದ ಕತಿ ನಿವಳಾ.
ಹೇಳತೇನ ಕೇಳ ಗೆಳೆಯಾ ನಿನಮುಂದ ಕತಿಯೊಂದ
ನನಮುಂದ ಕುಂಡ್ರ ಹೀಂಗ ತೆರದ ಮನಾ ||ಗೀ||


ಊರಾಗೂರ ಅದರಾಗ ಇನ್ಯಾವೂರ
ಚಂದ, ಶಿವಪೂರ ರಾಜೇಕ.
ಮಳೆಯಾದ ಎರಿಯೊಳಗ ಬೆಳೆದ ಕರಿಕಿ ಹಾಂಗ
ಊರು ಹಬ್ಯsದ ಮೂಡಪಡುವಣಕ

ಹಸರುಶಾಂತಿ ಪಸರೀಸಿ ಮೈಚಾಚಿ ಮಲಗ್ಯsದ
ನದಿಯ ಎದೆಯಾಗುನು ಅದೆ ನೆರಳಾ.
ಹೊಳೆಯ ದಂಡೆಯ ಆಲ ನೂರಾರು ಪಾರಂಬಿ,
ಬುಡದಾಗ ಕರ್ರೆವ್ವ ಊರ್ಯಾಳ್ತಳಾ.

ನೂರು ಬಂಡಿಗೆ ಇಂಬುಗೊಡುವಷ್ಟು ನೆರಳಿತ್ತು;
ಯಾರ್ಯಾರು ಸುಳಿದಿಲ್ಲ ಬಡ್ಡೀತನಕ.
ಉದಯಾಸ್ತಗಳ ನಡಕ, ಹೊಳಿಗುಡ್ಡ ಎಡಬಲಕ,
ಜಗದಾಗಿಂಥಾದಿಲ್ಲ ಬಹುತೇಕ.

ಊರ ದನಗಳನೆಲ್ಲ ಇಲ್ಲಿ ಹಾರಸತಾರ,
ಕೂಡತಾರ ಹಿರಿಯರು ಯಾವಾಗರೆ.
ಈ ನೆರಳ ತಂಪನ್ನ ಅದಕಿದಕು ಬಳಸುವರು
ಎಳಿಗೂಸು ನಗುವುದು ಅದರಾಗರೆ.

ನದಿಯ ತೆರೆಗಳ ಮ್ಯಾಲೆ ಬಿಸಲಿಂದ ಬರಬರದ
ಈ ತಂಪ ಕಳಿಸ್ಯಾರು ದಿಗ್ದೇಶಕ.
ಪೂಜಾರಿಗಳ ಬಿಟ್ಟು ಇನ್ಯಾರು ನೋಡಿಲ್ಲ
ಊರ ಕರ್ರೆವ್ವನ ಕರೀಮಕಾ.

ಮಾ | ಡಿದನು ಹರಿಯಿಲ್ಲಿ ಬೋಧಾ
ಬೆಳೆ | ದಾರು ಇಲ್ಲೆ ವೇದಾ
ಈ | ನೆರಳ ತಂಪಿನ ಹಸಾದಾ
ಕೊನೆ | ಕೊನೆಗೆ ಬುದ್ಧ ಏನಾದ?

ಈ ತಂಪು ಸತ್ಯದಲಿ ಈ ಬದುಕ ಬಣ್ಣಿಸಿದ
ಚೆನ್ನsರ ನೆನಿ ತಮ್ಮ ದಿನಾದಿನಾ.
ಹೇಳತೇನ ಕೇಳ ಗೆಳೆಯಾ ನಿನಮುಂದ ಕತಿಯೊಂದ
ನನಮುಂದ ಕುಂಡ್ರ ಹೀಂಗ ತೆರೆದ ಮನಾ ||ಗೀ||


ಹುಡಿಗೇರ ಹುಸಿ ಸಿಟ್ಟಿನ್ಹಾಂಗ ಓಣಿಯ ತಿರುವು,
ತೆರೆದ ಕಣ್ಣುಗಳಣ್ಣ ಮನಿಬಾಗಿಲಾ;
ಮಣ್ಣಾಗ ಆಡೂವ ಚಿಣ್ಣರ ಗಿಣಿ ಹಿಂಡ
ಯಾವತ್ತು ಊರಾಗ ಕಲಲಲಲಾ.

ಸೂರ್ಯಾ ಕರಗಿ ನೀರಾಗಿ ನಾದಿ ಒಳಗ ಹರಿದಾನು
ಎಳಿ ಹರೆ ಬಂದಾಗ ಹುಡಗೋರಿಗಿ
ಜೋಡೆಮ್ಮಿ ಹಾಲಕುಡದ ಸೆಡ್ಡುಹೊಡೆದ, ಕುಸ್ತಿಹಿಡಿದ,
ಗರಡಿಮನೆ ಕಾಣಸ್ತೈತಿ ಓಣಿ ತುದಿಗಿ.

ಚಿಗುರು ಮೊಲೆಗಳ ಕಂಡು ಚಿಗುರು ಚಿಗುರಲೆ ಇಲ್ಲ
ಒಮ್ಮಿಗಿಲೆ ಎಲೆಯಾಯ್ತು ಗಿಡಗಿಡಕ;
ಚೈತ್ರ ಫಾಲ್ಗುಣಗಳನು ಎದೆಯಾಗ ಹಿಡಿದಾರು
ಹೂವಾಗಿ ಸೋರೀತ ತಟತಟಕ.

ಯಾರೇನ ಆಡಿದರು ಗಾದಿ ನಾಣ್ಣುಡಿಯಾಗಿ
ವಾಡಿಕೆಯಾದಾವು ನಾಡೊಳಗ
ಕರಿಯಜ್ಜ ಹಾಕೀದ ಗೆರಿಗೋಳ ಯಾರ್ಯಾರು
ದಾಟಿಲ್ಲ ಹದಿನಾಕು ಹಳ್ಳಿಯೊಳಗ.

ಬೇಡಿ ಬಂದಾನ ಗೌಡ ಪಡದ ಬಂದಾರ ಜನಾ
ಕೊರತಿಲ್ಲ ಹೊಗಳುವ ಕವಿಜನಕ.
ಮನಿಮನಿಗಿ ನಡುವಡ್ಡ ಗೆರೆಯಿಲ್ಲ, ಎರಡಿಲ್ಲ,
ಕಾಣಿ ತಕ್ಕಡಿಗಿಲ್ಲ, ಸಮತೂಕ.

ಮರ | ತಾನ ಕೊಟ್ಟ ಭಗವಾನಾ
ಕಡಿ | ಮಿಲ್ಲ ಅಬರಿಗೇನೇನಾ
ಹೊಲ | ದಾಗ ಕಾಳ ಭರಪೂರಾ
ದರ | ದಾಗ ಇಲ್ಲ ಹೇರಪೇರಾ

ಪಾರಂಬಿ ಕರ್ರೆವ್ವ ಗುಡ್ಡದ ನಿರವಾಣಿ
ಈ ಊರ ಕಡೆಗಿರಲಿ ನಿಮ್ಮ ಧ್ಯಾನಾ.
ಹೇಳತೇನ ಕೇಳ ಗೆಳೆಯಾ ನಿನಮುಂದ ಕತಿಯೊಂದ
ನನಮುಂದ ಕುಂಡ್ರ ಹೀಂಗ ತೆರೆದ ಮನಾ ||ಗೀ||


ಇನ್ನ ಮುಂದಿನ ಕತಿ ಹ್ಯಾಂಗಾರೆ ಹೇಳಲಿ?
ಎದಿಯಾಗ ಆಗತದ ಕಸವೀಸಿ.
ಯೋಳಪಟ್ಟಿ ಹುಲಿಬಂದು ಯೋಳೆಂಟು ದನತಿಂದು
ಸುದ್ದಿ ಕೇಳಿ ಗೌಡ ಹೊಂಟಾ ಬ್ಯಾಟೀಗಿ.

ಗೌಡ್ತಿ ಲಕ್ಷ್ಮೀ ದೇವಿ ಸೆರಗೊಡ್ಡಿ ಬೇಡತಾಳ
ಹೋಗಬ್ಯಾಡ್ರಿ ಬಿದ್ದೀತೆನಗ ಕೆಟ್ಟಕನಸಾ, –
ಋಶೀಲಿಂದ ಸರಸವಾಡಿ, ಗೌಡಾ ನೀವು ಮಲಗಿದಾಗ,
ಮಂಚದ ಕಾಲ ಮುರಧಾಂಗಾತ ಧಸಕ್ಕನ.

ಅಬಲೆ ಅಂಜಿದಳೆಂದು ದಾದುಮಾಡದೆ ಹೊಂಟ;
ವಾದ್ಯದ ದನಿ ತುಂಬಿ ದಿಕ್ಕದಿಶಾ,
ಬೆಲ್ಲದ ಬೇಂಟೀಗಿ ಇರುವಿ ಮುತ್ತಿದ ಹಾಂಗ
ಜನಸೇರಿ ಹರಸ್ಯಾರು ತುಂಬಿ ಮನಸಾ.

ಇದೆ ಕೊನೆಯ ಸಲದಂತೆ ಮಳಮಳ ಮಕನೋಡಿ
ಎದಿಯಾಗ ಹಿಡಿದಾರು ಆ ರೂಪವ.
ಹತ್ತು ದೇವರಿಗೆಲ್ಲ ಹರಕೀಯ ಹೊತ್ತಾರು,
ತೇರ ಎಳಸತೇವ ಕಾಯೆ ಕರ್ರೆವ್ವ.

ಬ್ಯಾಟಿಗಾರರ ಕುದರಿ ರಥದ ಧೂಳಿನೊಳಗ
ಮುಳುಗಿ ಹೋದಾನ ಗೌಡ ಮುಂದಮುಂದಕ.
ಹುಬ್ಬಗೈಯ ಹಚ್ಚಿಕೊಂಡು ಏರನೇರಿ ನೋಡತಾರ
ಬೆಂಕಿ ಹೊತ್ತಿಸಿಧಾಂಗ ಬಿಸಲ ಬಿದ್ದೀತ.

ಹೊಳಿ | ಯಾಗ ತೆರಿಗಳಿರಲಿಲ್ಲ
ಆ | ಲsದ ಗಿಡಕ ತಂಪಿಲ್ಲ
ಓ | ಣ್ಯಾಗ ಎಲ್ಲ ಬಣ ಬಣಾ
ಸುಡ | ಗಾಡಧಾಂಗ ರಣರಣಾ

ಗುಡ್ಡದ ಕಡ್ಡಕ ಬೆಂಕಿ ಹಚ್ಚಿದರ್ಯಾರೊ,
ಹೊಗಿ ತುಂಬಿ ನೋಡ್ಯಾರು ಎಲ್ಲಾ ಜನಾ,
ಹೇಳತೇನ ಕೇಳ ಗೆಳೆಯಾ ನಿನಮುಂದ ಕತಿಯೊಂದ
ನನಮುಂದ ಕುಂಡ್ರ ಹೀಂಗ ತೆರದ ಮನಾ ||ಗೀ||


ಪಡುವಣದ ಮೂಗಿನ ಮುತ್ತುದುರಿ ಸಂಜ್ಯಾಯ್ತು,
ಹಿಂದಿರುಗಿ ಬಂದಾವು ದನಾ ಕರಾ.
ಈದೊಡನೆ ಕರುಸತ್ತು ಎಮ್ಮಿ ಕೆರೆಯೊಳಗೊದರಿ
ಕ್ಷಿತಿಜ ಬಾನಿನ ತುಂಬ ಹಸಿನೆತ್ತರಾ.

ಕಂಡ ಹಗಲಿನ ಸತ್ಯ ಸಂಶಯವಾದೀತು
ಸಂಧಿಪ್ರಕಾಶದ ಸಂಧಿನೊಳಗ.
ಕನಸಿನ ಕರಿಯ ಚೋರನ ಹಾಂಗ ಗೌಡ ಬಂದ,
ಊದಿ ಬಾರಿಸಿ ಏನೇನಿಲ್ಲ ಬ್ಯಾಟಿ ಬಳಗ.

ಸಿಡ್ಲ ಹೊಡೆದು ಹಾಳಬಿದ್ದ ಬಾವೀತನಕ ತಾನs ಹೋಗಿ
ಏನೋ ಚೆಲ್ಲಿ ತಿರುಗಿ ಬಂದಾ ನಗನಗತ.
ತೊಟ್ಟಿಲೊಳಗಿನ ಕೂಸು ಚಿಟ್ಟಂತ ಚೀರೀತ –
ಊದು ಹಾಕಿದ ಹೊಗಿ ಓಣಿ ತುಂಬೀತ.

ಊದ ಹಾಕಿ ಐದೇರು ಆರತಿಯ ಬೆಳಗ್ಯಾರು
ಖುಶಿ ಬಾಳ ಗೌಡ್ತೀಗಿ ಒಳಗೊಳಗ.
ಮಗ ಬಂದು ಕೇಳ್ಯಾನು: ಹುಲಿ ಎಲ್ಲಿ? – ಸತ್ತೀತ?
ಇನ್ನ ಮ್ಯಾಲ ಚಿಂತಿಲ್ಲ ಏಟು ನಮಗ.

ಪರಭಾರೆ ಹಾಸ್ಗಿ ಒಳಗ ಮುಟ್ಟಿಬಿಟ್ಟು ಹೇಳ್ತಾನ:
ನಿನ್ನ ತಾಳಿ ಗಟ್ಟಿಮುಟ್ಟ ಉಳಿದು ಬಂದೇನ.
ಹುಲಿಯಲ್ಲ ಅಂವ ದೊಡ್ಡ ರಾಕ್ಷೇಸ, ಮಾಯಾವಿ,
ಕೊಂದ ಹಾಳ ಬಾಂವಿ ತಳಾ ಕಾಣ್ಸಿ ಬಂದೇನ

ಹಣಕಿ | ಹಾಕಬಾರ್ದು ಯಾರ್ಯಾರಾ
ಹಾ | ಕಿದರ ಗೋರಿ ತಯ್ಯಾರಾ
ಊ | ರಾಗ ಹೊಡಸ ಡಂಗೂರಾ
ಯಾ | ವತ್ತು ಇರಲಿ ಖಬರಾ

ನಿನ್ನ ಮಗ ಹಣಿಕಿ ಹಾಕಿದಂದು ನಾನು ಹಲಿಗಿ ಹೊಡಿಸಿ
ಹಾದೀ ಹಿಡಿದೀನಂತ ಗಟ್ಟಿ ತಿಳಕೊ ರಮಣಾ.
ಹೇಳತೇನ ಕೇಳ ಗೆಳೆಯಾ ನಿನಮುಂದ ಕತಿಯೊಂದ
ನನಮುಂದ ಕುಂಡ್ರ ಹೀಂಗ ತೆರದ ಮನಾ ||ಗೀ||


ಬೀಸು ಜ್ವಾಳ ಆದಾವು, ನವ ಹಾಡು ಮುಗಿದಾವು.
ಹಕ್ಕಿ ಚಿಲಿಪಿಲಿ ಚೀರಿ ಬೆಳಗಾಯಿತ.
ಝುಮು ಝುಮು ನಸಕಿನ್ಯಾಗ ಆಲsದ ಬಡ್ಯಾಗ
ಕರಿಯಜ್ಜ ಕೂತಾನ ಕೆಮ್ಮಿ ಕೋತ.

ಗೊಂಡೀಯ ಲಂಗೋಟಿ, ಕಸಿಯಂಗಿ ತೊಟ್ಟಾನ,
ಮುದಿಸೂಳಿ ಬಂದಾಳ ಹೊಳಿನೀರಿಗಿ.
ಕೈಬೀಸಿ ಕುಂಡಿ ಹೊಳಿಸಿ ಕಣ್ಣ ಹಾರ್ಸಿ ನಡದಾಳ
ನೆನನೆನದ ನಗತಾನ ತಿರುತಿರುಗಿ.

ಇಳಿದ ಪಾರಂಬೀಗಿ ಗೊಡ್ಡೆಮ್ಮಿ ಮೈತಿಕ್ಕಿ
ಸೆಗಣಿ ಹಾಕಿದ ನಾತ ಗೊಮ್ಮೆಂದಿತ.
ದಿನಧಾಂಗ ರಾಮಗೊಂಡ ಚರಿಗಿ ಹಿಡಿದ ಬಂದಾನು,
ಕೂಡ್ರತಾನು ಮುದುಕನ ಹಂತ್ಯಾಕ.

ನಾತಕ್ಕ ಹೇಸಿ ತುಸು ಮುಂದ ಕೂಡ್ರೂನಂದ;
ಅಜ್ಜ ಕೀಳಲೆ ಇಲ್ಲ ತನ್ನ ತಳ.
ಎಣ್ಣೆ ಇಲ್ಲದೆ ಉರಿದ ತನ್ನ ದಿನಮಾನಗಳ
ಹೇಳತಾನ, ಕ್ವಾರಿಮೀಸಿ ಕೊರಕೊರದ.

ಅಷ್ಟರಾಗ ಸಮಗಾರ ಬಸ್ಸಿ ಕೂಸನು ತಂದು
ಕರ್ರೆವ್ವಗಿದಿರಾಗಿ ಇಟ್ಟಾಳಡ್ಡ:
ರಾತ್ರಿ ಚಿಟ್ಟನೆ ಚೀರಿ ಮಲಿಮರತ ಮಲಗೇತಿ
ತಾಯಿ ನಿನ್ನ ವರ್ಮಬ್ಯಾಡ ನಮಗೂಡ.

ಕೇಳಿ | ಬಂತ ಹೊಡೆದ ಡಂಗೂರಾ
ಹಾಳ | ಬಾಂವ್ಗಿ ಹೋಗಬ್ಯಾಡ್ರಿ ಯಾರಾ
ಹಣಿಕಿ | ಹಾಕಬಾರ್ದು ಯಾರ್ಯಾರಾ
ಯಾ | ವತ್ತು ಇರಲಿ ಖಬರಾ.

ತಪ್ಪಿಗಿಪ್ಪಿ ಹಣಿಕಿದರ ದಂಡಾಶಿಕ್ಷಾ ಮಾಡತಾರು
ನೆಪ್ಪಿನ್ಯಾಗ ಇಟಗೊಳ್ರಿ ಎಲ್ಲಾ ಜನಾ.
ಹೇಳತೇನ ಕೇಳ ಗೆಳೆಯಾ ನಿನಮುಂದ ಕತಿಯೊಂದ
ನನಮುಂದ ಕುಂಡ್ರ ಹೀಂಗ ತೆರೆದ ಮನಾ ||ಗೀ||


ಹೋರೀಯ ಕೊಂಬಿನ್ಹಾಂಗ ಮಕ ಮೀಸಿ ಮೂಡ್ಯಾವ
ಎಳಕ ಯೌವನ ಬಂದು ರಾಮಗೊಂಡಗ.
ಹಿಂಡ ದನಗೋಳೋಳಗ ದ್ಯಾಮವ್ನ ಕ್ವಾಣಧಾಂಗ
ಅವನಿದ್ದ ವಾರಿಗಿಯವರೊಳಗ.

ಅವನ ಕೆನ್ನಿಯ ಒಳಗ ಸೂರ್ಯದೇವ ಹೊಳದಾನು
ಕಣ್ಣಾಗ ಹುಣ್ಣೀಮಿ ಚಂದ್ರಮರಾ
ಒಗರೇನು, ಹೊಗರೇನು, ಹರೆಯ ಗರುವಿಕಿಯೇನು
ಬಾಯಿ ಬಾಯಿ ಬಿಡತಾವ ಹುಡಿಗೇರಾ.

ಹಸನಾದ ಬಾಲೇರು ಹಂತೇಲಿ ಬಂದ ಬಂದ,
ಒಡಪ ಹೇಳಿ ಓಡತಾರ ನಗನಗತ,
ಸರಿಸರಿ ಸಖಿಯರು ಮಾರೀಗಿ ನೀರಗೊಜ್ಜಿ
ಕಾದತಾರ ಪರಿ ಪರಿ ಅಡ್ಡನಿಂತಾ.

ತುಂಬೀದ ಹೊಳೆಯಾಗ ತೆರಿ ಹೊಡದ ಈ ಸಾಂವಾ,
ಗುಡಿಯ ಮುಂದಿನ ಗುಂಡ ಹೊತ್ತ ಒಗದಾಂವಾ.
ಮನ್ನಿ ಶಿವರಾತ್ರ್ಯಾಗ ಹತ್ತು ಮಂದಿಯ ಕೂಡ
ಕುಸ್ತಿ ಹಿಡಿದ, ಎರಿ ಮಣ್ಣ ಮುಕ್ಕಿಸಿದಾಂವಾ.

ಊರೀನ ಹುಡುಗೋರು ದೊಡ್ಡಾಟ ಬಿಟಕೊಟ್ಟು
ನಾಟಕವಾಡ್ಯಾರು ಪಟ್ಟಪೈಲೇಕ,
ಹುಳಮೇದ ಬನಧಾಂಗ ಒಣಗ್ಯಾವ ಕುಣಿದಾವ;
ನೋಡಲಿಲ್ಲ ರಾಮಗೊಂಡ, ಕರಿಮುದಕ.

ಅವನ | ಮ್ಯಾಲೆ ಮುದುಕ ಭಾಳ ಪ್ರೀತಿ
ಕ | ಣ್ಣಾಗ ತುಂಬಿ ಅಕ್ಕರತಿ
ನೀ | ನಮ್ಮ ಊರ ಸರದಾರಾ
ನನ | ಗಿಲ್ಲ ಎದರ ದರಕಾರಾ

ಊರ ಹೊರಗ ಹೋಗುವಾಗ ತಿರುಗಿ ನೋಡ್ಯಾನ ಗೌಡ
ಹಾವಿನ ಹುತ್ತಿನ್ಹಾಂಗ ಮೂಗ ಮುರದಾನ.
ಹೇಳತೇನ ಕೇಳ ಗೆಳೆಯಾ ನಿನಮುಂದ ಕತೆಯೊಂದ
ನನಮುಂದ ಕುಂಡ್ರ ಹಿಂಗ ತೆರದ ಮನಾ ||ಗೀ|


ಚಂದ್ರsನ ಮುರಿದ್ಯಾರೊ ನೀರಿಗೆ ಎಸೆದಾರು
ಚೂರು ಚೂರು ಚೀರ್ಯಾವ ನದಿಯೊಳಗ
ಬಸರಿಯರ ಕನಸಿನಲಿ ತಲೆಬುರುಡೆ ಹಲ್ಕಿರಿದು
ಹೂ ಹೆರುವ ಗಿಡಬಳ್ಳಿ ಒಣಗ್ಯಾವ

ಹೋರಿಗಳು ಎತ್ತಾಗಿ ನೊಗ ಎತ್ತಲಾರದೆ
ಗದ್ದೆಯಲಿ ಬಿದ್ದಾವ ಬಾಲ ಮುದುರಿ
ಪಾರಂಬಿಕರ್ರೆವ್ವನ ಕೈಭಿನ್ನವಾದಾವು
ಮಾಯವಾಗದ ಗಾಯವಾದಾವರಿ.

ಹೊತ್ತೇರಿ ಎದ್ದ ಗೌಡ ಬಡ್ಡೀಗಿ ಹಣ ಕೊಟ್ಟು
ಕೂಡ್ಸ್ಯಾನ ಚಾವಡ್ಯಾಗ ದೊಡ್ಡಸಭಾ.
ಹಸಮಕ್ಳ ಸಲುವಾಗಿ ಗರಡೀಯ ಮನಿ ಕೆಡಿವಿ
ಹೊಸ ಸಾಲಿ ಕಟ್ಟಿಸೋಣ, – ಬಲೆ ಶೋಭಾ

ಊರಂತ ಊರೆಲ್ಲಹೌದಂತ ತಲಿದೂಗಿ
ಬಾಯಿತುಂಬ ಹೊಗಳ್ಯಾರ ಗೌಡಪ್ಪನ
ಮನೆಗೊಂದು ಹೆಣ್ಣಾಳು ಗಂಡಾಳು ಬಂದಾವು,
ಲಗುಮಾಡ ಮುಗೀಬೇಕ, ಮೂರsದಿನಾ.

ಶುಕ್ರಾರ ಸುರವಾಗಿ ಆಯ್ತಾರ ತಯ್ಯಾರ
ಬಿರದೀತ ಸ್ವಾಮಾರ ಬಡ್ಯಾಗನ.
ಆಲsದ ಬೇರ ಬಂದು ತೊಡರ್ಯಾವು ತೊಡಕ್ಯಾವು;
ಮೊದಲದನ ಎಲ್ಲಾರು ಕಡಿಯೋಣ.

ಚಾಲಿ | ವರದ ಮುದುಕ ಬೇಡಿಕೊಂಡಾ
ಕೈ | ಮುಗಿದು ಅಡ್ಡ ನಿಂತಕೊಂಡಾ
ಸರಿ | ಸರಿಸಿ ಮರವ ಕಡಿದಾರ
ಸಾ | ಲೀಯ ಪೂಜಿ ಮಾಡ್ಯಾರ

ತಾಸೇ ಹಲಗಿ ಡೊಳ್ಳ ಗರ್ದೀಲೆ ಬಾರಿಸ್ಯಾರ;
ಕರಿಯಜ್ಜ ತೀರಿಕೊಂಡ ಅದsದಿನಾ.
ಹೇಳತೇನ ಕೇಳ ಗೆಳೆಯಾ ನಿನಮುಂದ ಕತಿಯೊಂದ
ನನಮುಂದ ಕುಂಡ್ರ ಹೀಂಗ ತೆರದ ಮನಾ ||ಗೀ||


ಬಾಂದದ ಮ್ಯಾಗಿನ ಕೆಂದ ಗೋವಿನ ಕರಾ
ಬಿಸಲೀಗಿ ಬಾಯಿ ಬಾಯಿ ಬಿಡತsದರಿ.
ಬಿಸಲ ಹಳದಿಯ ನಡುವ ಕರಿ ನೆರಳ ಚೆಲ್ಲೂವ
ಹಸರ ನಂಬಿಗೆಯನ್ನು ಕಡದಾರರಿ.

ರಾಮ ಮುದುಕನ ನೆನೆದು ಹಾಡಿ ಅಳಬೇಕಂದ್ರ
ಹನಿ ನೀರ ಬರಲಿಲ್ಲ ಕಣ್ಣೊಳಗ.
ಹಡೆದವನ ಬಯ್ಯುದಕ ಬಾಯsರೆ ತಗದಾನ
ಅಕ್ಷರ ಹಿಡೀಲಿಲ್ಲ ಶಬ್ದದೊಳಗ.

ಕೋಲೇ ಬಾಗಿಲ ಮುಚ್ಚಿ ಕುಂತ ಧ್ಯಾನಿಸತಾನ,
ಉಸುರರೆ ಹಾಕತಾನ ಮೈಲುದ್ದ.
ಕತ್ತಲೆಯ ಗವಿಯೊಳಗ ಕೇಂದ್ರ ತಪ್ಪಿದ ಭ್ರಾಂತಿ
ಉರಳ್ಯಾವ ಇಳಕಲಕಡ್ಡಬಿದ್ದಾ.

ಅದನಿದನು ಬ್ಯಾರೇ ಮಾಡಿ ವರ್ಣಿಸುವ ವಿವರಿಸುವ
ಬೆಳಕಿಲ್ಲ, ಬಲ್ಲಿರೇನ ನೀವ್ಯಾರರೇ?
ದೀವೀಗಿ ತರಲಾಕ ದೇವರ ಮನಿ ಹೊಕ್ಕ,
ಮನದಾಗ ಖುಶಿಯಾಗಿ ಕುಂತಾನರಿ.

ಅವರಪ್ಪ ಬಂದವನು ‘ಭಕ್ತಿ ನಾಟಕ ಸಾಕು’
ಹಿಂಗಂದು ಚೆಂಡೀಯ ಚಿವುಟ್ಯಾನರಿ
ನಾಚಿ ಕೋಲೆಗೆ ಬಂದು ನೋಡತಾನು, – ಕರಿಯಜ್ಜ
ಮೀಸ್ಯಾಗ ಮುಸಿಮುಸಿ ನಗತಾನರಿ.

ಚಿ | ಟ್ಟಂತ ಚೀರಿ ಬಿದ್ದಾನು
ಬೇ | ಖಬರ ಆಗಿ ಅಂದಾನು
ಪಾ | ರಂಬಿ ಅಂತ ಕೂಗ್ಯಾನು
ಹಡೆ | ದವನ ಬಳಿಗೆ ಕರದಾನು

ಕರ್ರೆವ್ವನಾಣಿ ನೀನಲ್ಲ – ಇನ್ನೇನೇನೊ
ಬಡಬಡಿಸಿ, ಹೊಸ್ತಿಲಕ ತಲಿ ಹೊಡೆದಾನ.
ಹೇಳತೇನ ಕೇಳ ಗೆಳೆಯಾ ನಿನಮುಂದ ಕತಿಯೊಂದ
ನನಮುಂದ ಕುಂಡ್ರ ಹೀಂಗ ತೆರದ ಮನಾ ||ಗೀ||

೧೦
ಕರಿಯ ಅಜ್ಜನ ಭೂತ ರಾಮಗೊಂಡನ ಹಿಡಿದ
ಸುದ್ದಿ ಹಬ್ಬಿತು ಊರ ಕಡೀತನಕ;
ಹೊರಕಡಿಗೆ ಹೋದ ಹೆಣ್ಣಿಗೆ ತಿಳಿದು ಹೊಳಿಮ್ಯಾಗ
ಬರ ಬರದ ಕಳಿಸ್ಯಾಳು ದಿಗ್ದೇಶಕ.

ಬಾಗೀಲ ಹಾಕ್ಯಾನು, ಅಗಳೀಯ ಜಡಿದಾನು,
ಕಳಕೊಂಡು ಹುಡಿಕ್ಯಾನು ಒಳಹೊರಗ.
ಉಗುರು ತಾಕಿದ ಹೇನಿನಂತೆ ಅಡಗುವ ಹೆಣ್ಣು,
ಮರ ಮರಾ ಮರಿಗ್ಯಾವ ಮನದೊಳಗ.

ಏಸೋ ಅಮಾಸೆಗಳ ಪುರಮಾಸೆ ಸಾಕ್ಯಾನ
ಸುರದಾನ ಅಳದಾನ ನಿಟ್ಟುಸಿರ
ಮುಗಿಲ ನೀಲಿಯ ಕೆಳಗ ಟೊಂಗಿ ತೂಗ್ಯಾಡ್ಯಾವ
ಎಲಿ ಉದುರಿ ಅದರ್ಯಾವ ತೆರಿನೀರ.

ಈ ಊರಿಗೆರವಾಗಿ ಬ್ಯಾರೆ ಕಡೆ ಹೋಗುದಕ –
ಕಾಲಕಿತ್ತ ಆದಾನ ತಯ್ಯಾರಾ
ಹಡದಪ್ಪ ಬ್ಯಾಡಂತ ಅನಲಿಲ್ಲ, ಹಡದವ್ವ
ಹಾಕಿದ್ದ ಗೆರಿದಾಟಿ ನಡೀಲಾರ.

ಕಣ್ಣಾಗ ಸೊನ್ನೀಯನಿಂಬುಗೊಂಡಾನಣ್ಣ
ಹಳಿ ನಿಮಿಷ ಹಾಸ್ಯಾನ ಮಲಗ್ಯಾನರಿ
ಬೂದಿ ಬೆಳದಿಂಗಳಲಿ ಹುದುಗಿ ಹೊಳೆದವು ಕೆಂಡ
ಮೈ ಸುಟ್ಟು ಛಟ್ಟನೆ ಎದ್ದಾನರಿ.

ಮೈ | ನಡುಕ ಹುಟ್ಟಿ ಎದ್ದಾನ
ದಿ | ಕ್ಕೀಗ ಕೈಯ ಮುಗದಾನ
ಹಡ | ದಾಕಿ ಬಳಿಗೆ ಬಂದಾನ
ಹೇ | ಳುದಕ ಬಾಯಿ ತಗದಾನ

ತಾಯಿ ಕುಲು ಕುಲು ನಕ್ಕು ಏನಂತ ಅಂದಾಳ:
ತೃಪ್ತಿ ಮಾಡೊ ಬಸರಿನ ಬಯಕಿಯನಾ
ಹೇಳತೇನ ಕೇಳ ಗೆಳೆಯಾ ನಿನಮುಂದ ಕತಿಯೊಂದ
ನನಮುಂದ ಕುಂಡ್ರ ಹೀಂಗ ತೆರೆದ ಮನಾ ||ಗೀ||

೧೧
ಅವಳ ಬಸುರಿನ ಸುದ್ದಿ ನಾ ಕೇಳಿ ನೀ ಕೇಳಿ
ಕೇಳಿ ಊರಂತೂರ ನಕ್ಕಾರರಿ,
ಹಸರ ಕುಪ್ಪಸ ತೊಟ್ಟು ಬಿಸಲೀಗೆ ತಲಿಬಿಟ್ಟು
ಹೊಳೆಸಾಲ ದನಧಾಂಗ ನಿಂತಾಳರಿ.

ಕೆನ್ನೆ ಮಿರಿ ಮಿರಿ ಮಿಂಚಿ ಬಣ್ಣಗಳು ಉರಿದಾವು,
ಕಣ್ಣಾಗ ತೋರ್ಯಾವು ಎಳಿ ಚಿಗರ.
ಭೈರವಿಯ ವಂಕ ತೆರಿಗಳ ಹಾಂಗ ಅಂಗಾಂಗ
ಮುರಿದೆದ್ದು ಧರಿಸ್ಯಾವು ಹೊಸ ಹೊಗರಾ.

ಚಂದ್ರಕಾಳಿಯ ಸೀರಿ ಚಂದsಕ ನೇಸ್ಯಾಳ
ಸೆರಗಿನ್ಯಾಗ ತಗಸ್ಯಾಳ ಗಿಣಿಹಿಂಡಾ
ಆಲsದ ಎಲಿಗೋಳ ದಂಡಿಕಟ್ಟ ಬಿಗಿಸ್ಯಾಳ
ಹುಡಿಗೇರ ನಾಚ್ಯಾರ ಇದ ಕಂಡಾ.

ಒಂದಂಬು ತಿಂಗಳಿಗೆ ಒಂದೇನ ಬಯಸ್ಯಾಳ
ತುಂಬು ಹುಣ್ಣಿಮಿ ರಾತ್ರಿ ಬೆಳದಿಂಗಳಾ;
ಇಂಬಾದ ಮಂಚದಲಿ ದಿಂಬೀಗೆ ಒರಗ್ಯಾಳು
ಕುಡಿವುದಕ ಕೇಳ್ಯಾಳ ಹುಲಿಹಾಲಾ.

ಮಗ ಬಂದು ಅಂತಾನ: ಬಂಕಿ ಬಂಕೀ ಒಳಗ
ಅಲ್ಲ ಸಲ್ಲದ ಬಂಕಿ ಅಲ್ಲತಗಿ.
ಸಿಡಿಮಿಡಿಗುಟ್ಯಾಳ ಮುಡಿಯನಲ್ಲಾಡ್ಯಾಳ
ಬಿದ್ದಾವ ಎಡವಿದರೆಂಟಮನಿ.

ಬರ | ಲಿಲ್ಲ ಏಟು ಕಕಲಾತಿ
ಮರ | ತಾಳ ರೀತಿ ಮತ್ತ ನಡತಿ
ಮರಿ | ಗ್ಯಾರ ಮಂದಿ ಮರಮರಾ
ಬದ | ಲಾಗಿದಾನ ಗೌಡ ಪೂರಾ

ಕುಂದನಾದಿದಳೆಂದು ಅಂದ ಮಾತಿಗೆ ನೊಂದು
ಹೋಗುದಕ ತಯ್ಯಾರಿ ಮಾಡ್ಯಾನ
ಹೇಳತೇನ ಕೇಳ ಗೆಳೆಯಾ ನಿನಮುಂದ ಕತಿಯೊಂದ
ನನಮುಂದ ಕುಂಡ್ರ ಹೀಂಗ ತೆರದ ಮನಾ ||ಗೀ||

೧೨
ಸಿಂಗಾರ ಉಟ್ಟಾನ, ಸಿಂಗಾರ ತೊಟ್ಟಾನ,
ಸಿಂಗಾರ ಆದಾನ ತಲೀತನಕ.
ಜರ ತಗದ ರುಂಬಾಲ ದುಂಡಾಗಿ ಸುತ್ಯಾನ,
ಶಮನಾಸ ಬಿಟ್ಟಾನ ಹಿಂಬಡಕ.

ಅಂಗ್ಳಾ ಉಡುಗೋ ಹೊತ್ತು, ಗಂಗಾಳ ಬೆಳಗೋ ಹೊತ್ತು
ಬಂದಾನ ಜೋಡೆತ್ತ ಹೊಡಕೊಂಡ.
ಬಂಡೀಗಾಲಿಯ ಅಚ್ಚು ಸರಿದಿತ್ತು, ಹೆದರದ
ಹೊಂಟಾನ ಕುಡುಗೋಲ ಹಿಡಕೊಂಡಾ.

ಪಟ್ಟೇದ ಕುದರೀಯ ಏರ್ಯಾನ ರಾಮಗೊಂಡ
ಬೆನ್ನ ಚಪ್ಪರಿಸ್ಯಾನ ಮೆಲ್ಲsಕ
ಹಾದಿ ಹರಸುವರಿಲ್ಲ, ನೋಡಿ ಮರುಗುವರಿಲ್ಲ,
ಹಿಂದ ಮುಂದ ಯಾರಿಲ್ಲ ಎಡಬಲಕ.

ಅಗಸೀ ಹೊರಗ ಬಂದ, ಏನಂದ ರಾಮಗೊಂಡ?
ಪಾರಂಬಿ ಕರ್ರೆವ್ವ ನಮ ಶರಣಾ;
ತಿರುಗಿ ಬಂದರ ನಾವು ಆರ ಸೊಲಗಿಯ ಹುಗ್ಗಿ
ಹಾಕ್ಸೇವ, ಕೊಟ್ಟೇವ ಸೀರೀಖಣಾ.

ಹಳ್ಳದ ಹಂತೇಲಿ ಬಂದೇನ ಅಂದಾನ
ಗುಡ್ಡದ ನಿರವಾಣಿ ನಮ ಶರಣಾ;
ತಿರುಗಿ ಬಂದರ ನಾವು ದೀಡ ನಮಸ್ಕಾರ
ಹಾಕೇವ, ಕೊಟ್ಟೇವ ಬೆಳ್ಳೀಕಣ್ಣಾ.

ಬಂ|ದಾವ ಇದಿರು ಬರಿ ಬುಟ್ಟಿ
ಹೊಡೆ|ದಾನ ಕುದರಿಯನು ಮೆಟ್ಟಿ
ಹಿರಿ|ಯರ ಪುಣ್ಯ ನಮ ಮ್ಯಾಲಾ
ಸುರಿ|ತಿರಲಿ ಹರಿಯೆ ಅನುಗಾಲಾ

ಪಾರಂಬಿ ಕರ್ರೆವ್ವ, ಗುಡ್ಡದ ನಿರವಾಣಿ
ಈ ಊರ ಕಡೆಗಿರಲಿ ನಿಮದ್ಯಾನಾ.
ಹೇಳತೇನ ಕೇಳ ಗೆಳೆಯಾ ನಿನಮುಂದ ಕತಿಯೊಂದ
ನನಮುಂದ ಕುಂಡ್ರ ಹೀಂಗ ತೆರದ ಮನಾ ||ಗೀ||

೧೩
ಕಾ ಅಂಬೋ ಕಾಗಿಲ್ಲ, ಗೂ ಅಂಬೋ ಗೂಗಿಲ್ಲ,
ಯಾರ್ಯಾರ ಸುಳಿವಿಲ್ಲ ಅಡಿವ್ಯಾಗ.
ಏರ್ಯಾನ, ಇಳದಾನ ಇದ್ದ ಬಿದ್ದ ತಗ್ಗಾದಿನ್ನಿ;
ಹುಯ್ಲ ಹೊಡೆದ ಹುಡಕ್ಯಾನ ಗವಿಯೊಳಗ.

ಹೊತ್ತು ನೆತ್ತಿಗೆ ಏರಿ, ಹುಳಹುಪಡಿ ಹುರಪಳಿಸಿ
ತಳುವ್ಯಾನ ಗವಿಯೊಳಗ ತುಸು ಹೊತ್ತ.
ಚುಚ್ಚಿದರ ಬೆರಳು ಸಿಗಬೀಳುವಂಥಾ ತಂಪು,
ಮೈಗೆ ಮನಸಿಗೆ ಅಹ ಎಂಥಾ ಸುಖ!

ಮನ್ನಿ ರಾತ್ರೀ ಶ್ಯಾರಿ ಕದ್ದಮುಚ್ಚಿ ಬಂದವಳು;
ಆಗಿತ್ತು ಇದ ನಮನಿ ಹ್ವಾದಮ್ಯಾಲ.
ಬೆಳಕೀನ ಬಿಳಿಸುಟ್ಟು ಬೂದಿಬಣ್ಣಕ್ಕೆ ತಿರುಗಿ,
ನೆರಳೆಲ್ಲ ಕರಕಾಗಿ ಗಾಲಮೇಲಾ

ದೂರ ತಾರೆಯ ಹಾಂಗ ಮಿಣಕ್ಯಾವೆರಡು ಕೆಂಡ,
ಬರಬರತ ಹೊಳೆದಾವು ಬೆಂಕೀ ಕೊಳ್ಳಿ.
ಮನ ಸುಟ್ಟು ಛಟ್ಟನೆ ಎದ್ದಾನ; ಬಿಗಿಯಾಗಿ
ಹಿಡಿದಾನ ಕುಡುಗೋಲ ಬೆಳ್ಳೀಹಿಡಿ.

ಯೋಳ ಪಟ್ಟಿಯ ಹೆಣ್ಣಹುಲಿ ಬಂದು ನಿಂತೀತ;
ಧೈರ್ಯದಿಂದ ಕೇಳ್ಯಾನ: ಕೊಡ ಹಾಲ.
ಹುಲಿಯು ತಾಲಿಯ ತುಂಬ ಮಲಿಹಾಲ ಕೊಟ್ಟೀತ,
ನೆನ ನೆನದ ನಗತsದ ಕಲಲಲಲಾ!

ಕೊ | ಟ್ಟೀರಿ ಹಾಲ ಭರಪೂರಾ
ಮಾ | ಡಿದಿರಿ ನಮಗ ಉಪಕಾರಾ
ನಗ | ತೇರಿ ಯಾಕ ಕಲಕಲಾ
ಆ | ತೇನು ನಿಮಗ ಖುಶಿ ಬಾಳಾ

ಹೊಟ್ಟಿತುಂಬಾ ಉಂಡು ಹನ್ನೆರಡು ವರುಷಾತು,
ಈಗ ಬಂದಿ ಬಾಳಾ ಕೂಡಿ ಬಂತ ದಿನಾ!
ಹೇಳತೇನ ಕೇಳ ಗೆಳೆಯಾ ನಿನಮುಂದ ಕತಿಯೊಂದ
ನನಮುಂದ ಕುಂಡ್ರ ಹೀಂಗ ತೆರದ ಮನಾ ||ಗೀ||

೧೪
ಕಣ್ಣಾಗ ಕತ್ತಲಿ ಕೂಡಿ ಬಿದ್ಧಾಂಗಾಗಿ
ಕೋಲ್ಮಿಂಚ ಕುಡಗೋಲ ಝಳಪಿಸಿದಾ.
ಬೆನ್ನಾಗ ಸಿಗಬಿದ್ದು ಹುಲಿ ಒದರಿ, ದವಡಾಸಿ,
ಹಿಂದ ಹಿಂದ ಅಟ್ಯಾನ ಬೆನ್ನಿಗಿ ಬಿದ್ದಾ.

ಹೊಕ್ಕಲ್ಲಿ ಹೊಕ್ಕಾನ, ಜಿಗಿದಲ್ಲಿ ಜಿಗಿದಾನ,
ಹಾರಿದಲ್ಲಿಗೆ ಹಾರಿ ಗಾಳೀಹಾಂಗ,
ಮೆಳಿಯೊಳಗೆ ಸರಬುರುಕ, ಹೊದರೊಳಗ ಸರಬುರುಕ,
ಜೋಡ ಸರಬುರುಕಣ್ಣ ಹುಲ್ಲಾಗ.

ಮಾಡsದ ಚಿಮಣಿ ಮ್ಯಾಗ ಕಾಡೀಗಿ ಕಡಕೊಂಡ
ಬಿದ್ಧಾಂಗ ಹೊತ್ತಾರಿ ಕತ್ತಲಿಸಿತ.
ಹುಲಿ ಗಪ್ಪಗಾರಾಗಿ, ಕುದರಿ ಮಟಾಮಾಯಾಗಿ;
ತಾಲಿಹಿಡದ ಹೊಂಟಾನ ಊರತ್ತ.

ಮುಂದಮುಂದ ಬಂದಾನ ಸರಿರಾತ್ರಿ, ಉಲುವಿಲ್ಲ;
ಇದಿರೀಗಿ ಕಂಡಾನ ವಿಚಿತ್ತರಾ.
ಜಕ್ಕಜಲದೇರ ಜೋಡಿ ಜತ್ತಾಗಿ ಹೊಂಟೀತ
ಮೆತ್ತsಗ ಆಡಗ್ಯಾನ ಬಯಂಕರಾ.

ನೀರಹನಿ ಹೆಣೆಧಾಂಗ ಮೈತುಂಬ ಆಭರಣ;
ಹನಿಗೊಂದು ತಾರಕ್ಕಿ ಚಂದ್ರಮರಾ.
ಮಿಂಚ ಕರಗಿಸಿ ಎರಕ ಹೊಯ್ದಾಂಗ ಮೈಹೊಗರ,
ಬಾಯೊಳಗ ಕಂಡಾವು ಮುತ್ತಿನ ಸರಾ.

ನಡ | ದಾವ ಭಾಳ ಗಂಭೀರಾ
ಬಿಡಿ | ಬಿಡಿಸಿ ಒಡಪನಾಡ್ಯಾವ
ಬಿ | ದ್ದಾವ  ಹುಬ್ಬ ಅಗ್ಗಂಟಾ
ಮಾ | ತೊಂದ ಚಿಂತಿ ಯೋಳಂಟ

ಗಣದ ಮಾತ್ರೆಯ ಹಾಂಗ ದಿನಗೋಳ ಎಣಿಸ್ಯಾವ:
ಹನ್ನೆರಡು ವರುಷಾತ ಈ ಹೊತ್ತನs.
ಹೇಳತೇನ ಕೇಳ ಗೆಳೆಯಾ ನಿನಮುಂದ ಕತಿಯೊಂದ
ನನಮುಂದ ಕುಂಡ್ರ ಹೀಂಗ ತೆರೆದ ಮನಾ ||ಗೀ||

೧೫
ಏನ ಕಾಣಲು ಬಂದು ಇನ್ನೇನ ಕಂಡೇವ!
ಹೆಣ್ಣೀಗಿ ದಿನಮಾನ ಅನುವಾದಾವ.
ಹಬ್ಬೀದ ಹಸರಾಗ ಹೆಬ್ಬುಲಿ ಒದರ್ಯಾವು,
ತಬ್ಬಲಿ ಮಗ ಅತ್ತ ಕರೆದಾವ.

ಅಮ್ಮಾ ಎಂದವನನ್ನು ಗುಮ್ಮ್ಯಾಡಿ ಕೊಂದಾಳು,
ಹುಲಿಯೇರಿ ಎದ್ದಾಳು ಗುದ್ಯಾಡಲು.
ಹುಯ್ಯಾಲ ಬೊಬ್ಬೆಯೊ ಜಗವೆಲ್ಲ ತುಂಬಿದರು
ಒದರ್ಯಾಟ ಕೇಳಿಲ್ಲ ಯಾರ್ಯಾರಿಗು.

ಮರಿಯಾನಿ ಕರತಂದ ಕ್ವಾರಿಹಲ್ಲ ಕೊರೆಕೊರೆದ
ಬಲಗೈಗೆ ಯೋಳ ಬಳಿ ಏನ ನಿವಳಾ!
ಹಚ್ಚೀ ಬಟ್ಟಚುಚ್ಚುದಕ ಹಸರ ಸಾಕಾಗಿಲ್ಲ,
ಚಿಗರೀಗಿ ಮಿದುಕೈಯ ಚಾಚ್ಯಾಳ.

ಬಣ್ಣದ ಅರಮನಿ ನಡುಗಂಬ ಬಿದ್ದೀತ;
ಬಣ್ಣಗಳ ಸುಟ್ಟಾಳ ಕೆನ್ನೀ ಒಳಗ.
ಯಾತ ತಿರುಗಿಸುವಂತ ಭೂತ ದೇವರನೆಲ್ಲ
ಹುಗದಾಳ ಹಾಳಾದ ಬಾಂವ್ಯಾಗ.

ಇಷ್ಟಕೇಳಿ ರಾಮಗೊಂಡ ಹೊಟ್ಟೀ ಒಳಗ ಕಷ್ಟವಾಗಿ
ಬಂದ ನಿಂತ ಕಟ್ಯಾನ ಮುಕ್ಕಟ್ಟ.
ಹೆಜ್ಜಿಯಿಡ ಒಡಪಾ ಒಡದ ಬಿಡಾಂವಲ್ಲ ದೇವೀ ನಿಮಗ
ಚಾಲಿವರದ ಕಾಡಿ ಬೇಡಿ ಎಲ್ಲಾ ಕಟ್ಟಾ.

ಹೌ | ಹಾರಿ ನೋಡ್ಯಾವ ಇಂವsನಾ
ಹಿಡ | ದಾವ ಗುರುತ ಖೂನ
ಇಂವ | ಇಂವs ಹೌದು ಆಂದಾವ
ದಿಕ್ಕು | ತಪ್ಪಿ ಓಡಿ ಹೋದಾವ

ನಿಮ್ಮ ಕೈ ಬಳಿಯಾಣಿ ರಾಮಗೊಂಡ ಕೇಳತೇನು
ಒಡದ ಹೋಗರಿ ನಿಮ್ಮ ಒಗಟಾನಾ.
ಹೇಳತೇನ ಕೇಳ ಗೆಳೆಯಾ ನಿನಮುಂದ ಕತಿಯೊಂದ
ನನಮುಂದ ಕುಂಡ್ರ ಹೀಂಗ ತೆರದ ಮನಾ ||ಗೀ||

೧೬
ಬೆಳದಿಂಗಳೊಗಿನ ತಿಳಿನೀರ ಝರಿ ಹಾಂಗ
ಭರಭರ ಹರಿದಾವ ಮುಂದ ಮುಂದಕ.
ಗುಡ್ಡsದ ಮ್ಯಾಗೀನ ಫಡಿ ಉರುಳಿ ಬಿದ್ಹಾಂಗ
ಕೂಗ ಹೊಡದ ಓಡ್ಯಾನ ಹಿಂದ ಹಿಂದಕ.

ವಂಕ ದಾರೀ ಒಳಗ ಮಿಂಚ್ಯಾವ ಮರಕಂಟಿ,
ಕಲ್ಲಾಗ ಹಾರಗಾಲ ಬಿದ್ದಾವ.
ಕೆಟ್ಟದೇವರ ಆಣಿ ಹೆಜ್ಜೇಯನಿಟ್ಟೇರಿ
ಕೊಟ್ಟಹೋಗರಿ ನಮಗುತ್ತರವ.

ಸೊಂಡಿ ಸುಟ್ಟ ಬೆಕ್ಕಿನ್ಹಾಂಗ ಖಬರತಪ್ಪಿ ಓಡ್ಯಾವ
ಬಂದಾವ ಹಾಳಬಾಂವಿ ಸಮೀಪಕ.
ಅಮವಾಸಿ ದಿನ ಉಲ್ಕಿ ಉರುಳು ಬಿದ್ಧಾಂಗಾಗಿ
ಜಿಗದಾವ ಜೋಡಾಗಿ ಬಾಂವಿಯೊಳೀಕ.

ಮ್ಯಾಲಹಾರಿದ ಮೀನ ನೀರಿನೊಳು ಜರಿಧಾಂಗ
ಸೇರಿ ಒಂದಾದಾವ ನೀರ ನೀರಿಗಿ.
ತೆರೆಸುತ್ತಿ ಆಗಾಗ ತಾರಕ್ಕಿನಗೆ ನಕ್ಕು
ದಂಡೀಯನಡರ್ಯಾವು ತಿರುತಿರುಗಿ.

ಹಸುಗೂಸು ಎಳಿಎಳೀ ಕಳಲು ಅತ್ಹಂಗಾತು
ತೆರಿಗೋಳ ಸಪ್ಪಳ ದಂಡ್ಯಾಗ.
ಕರಿಯ ಭ್ರಾಂತಿಯ ಮುದ್ದಿ, ಕಣ್ಣುಮೂಗುಗಳಿಲ್ಲ
ಮೆತ್ಯಾವ ಮೂಲ್ಯಾಗ ಮೂಲ್ಯಾಗ.

ತಿದಿ | ತೇಗಿ ಬಂದಾನ ರಾಮಾ
ಮೂ | ಡ್ಯಾನ ಆಗ ಚಂದ್ರಾಮ
ಒಳ | ಒಳಗ ಹಣಿಕಿ ಹಾಕ್ಯಾನ
ಪ್ರತಿ | ಬಿಂಬ ಕಂಡ ಸರದಾನ

ಅಡ್ಡಮಳಿ ಗುಡ್ಡಮೋಡ ತಿಕ್ಕಿ ಗರ್ಜಿಸಿಧಾಂಗ
ಹಾಳಬಾಂವಿ ನಕ್ಕೀತ ಒಂದಸವನಾ.
ಹೇಳತೇನ ಕೇಳ ಗೆಳೆಯಾ ನಿನಮುಂದ ಕತಿಯೊಂದ
ನನಮುಂದ ಕುಂಡ್ರ ಹೀಂಗ ತೆರದ ಮನಾ ||ಗೀ||

೧೭
ಕಿವಿಯೊಳಗ ಘಜ್ಜಂತ ಗೂಟ ಜಡಿಧಾಂಗಾಗಿ
ಎಲ್ಲಿ ತೆಂಕಣ ಮೂಡ ಬಡಗಣಾ?
ತಾನೆಲ್ಲಿ ತನ್ನ ದೇಹಕ್ಕ ನೆರಳಿದೆ ಇಲ್ಲೊ?
ಕಾಲು ಊರಿವೆ ಹೌದು ನೆಲದಾಗನ.

ತನ್ನ ಒಳಗಿನ ರಾಮ ಚಪ್ಪಾಳಿ ಹೊಡಧಾಂಗ,
ಖೊಕ್ಕಂತ ನಕ್ಕಾಂಗ ಬಿಳೀನಗಿ.
ನಕ್ಕ ರಾಮನನೊಮ್ಮೆ ತೆಕ್ಕೆ ಹಾಯಲೆ ಓಡಿ?
ನಡುವಿನಂತರ ನೂರ ಹರದಾರಿ!

ತೆರಿಯೊಳಗ ಪ್ರತಿಬಿಂಬ ಕೊರಕೊರದ ಹಂಚೀತ
ತೆರಿನಿಂತ ಹೊರತಿಲ್ಲ ಆಕಾರವು.
ತೆರೆಯ ತಣ್ಣನೆ ಸರ್ಪ ಮೈಸುತ್ತಿ ಬಿಗಿಧಾಂಗ
ಮುದುಡಿ, ಹಿಗ್ಗೀ, ನಡುಗಿ ಮಿಡಿಕ್ಕಾಟವು.

ನೋಡ ನೋಡ್ತ ಇದರೀಗೆ ದೊಡ್ಡ ಧಾಂಡಿಗ ಮೂರ್ತಿ
ನಡೆದು ಬಂತೋ ಥೇಟು ಹಿಮಾಲಯಾ.
ಚಿಕ್ಕ ಮಕ್ಕಳ ಚೊಕ್ಕ ನಗಿಯ ಬೆಳದಿಂಗಳಿಗಿ
ಕೈಕಾಲು ಒಡದಾವೋ, ಏನಛಾಯಾ!

ಆಡೇನೆಂದರ ನಾಲಿಗಿಲ್ಲ, ಓಡುದಕಿಲ್ಲ,
ಮೈಮುಳ್ಳ ಎದ್ದಾವ ಕೊರಿ ಬೇಲಿ.
ದಳದಳ ಸುರಿದಾವ ಬೆವರಹೊಳಿ; ನಿಂತಾನ
ಚಿತ್ರದ ಒಳಗಿನ ಗೊಂಬೀ ನಮನಿ.

ಸಾರಿ | ಸಾರಿ ಬಂತ ಹಂತ್ಯಾಕ
ಎ | ತ್ತೀತ ಹಸ್ತ ಹರಸುದಕ
ಖೂನ | ಗುರ್ತ ಹತ್ತಿ ಕಾಣುದಕ
ಬಿ | ದ್ದಾನ ಮತ್ತ ಹಣಗಲಕ

ಮರೆತಿ ಏನೋ ಮಗನ ಹರಕೀ ಹೊತ್ತ ಹಡೆದವನ
ನಶೀಬಿಲ್ದ ಹಾಳ ಬಾಂವಿ ಹಿಡಿದವನಾ?
ಹೇಳತೇನ ಕೇಳ ಗೆಳೆಯಾ ನಿನಮುಂದ ಕತಿಯೊಂದ
ನನಮುಂದ ಕುಂಡ್ರ ಹೀಂಗ ತೆರದ ಮನಾ ||ಗೀ||

೧೮
ಬಾರಾ ವರ್ಷದ ಮಾತು ನೀ ಗೇಣ ಚೋಟಿದ್ದಿ,
ಯೋಳ ಪಟ್ಟಿ ಹುಲಿ ಬಂತ ಅಡವೀಗೆ.
ಹಿಂದ ಮುಂದ ಹಳಬರು ಎಡಬಲಕ ಬ್ಯಾಟಿಗಾರು
ಗೌಡ್ತಿ ಮಾತ ಮೀರಿ ಹೊಂಟೆ ಬ್ಯಾಟೀಗಿ.

ಹುಲಿಯಲ್ಲ ಅಂವ ದೊಡ್ಡ ರಾಕ್ಷೇಸ, ಮಾಯಾವಿ
ಮಳ್ಳ ಮಾಡಿ ಮಂದಿ ಒಯ್ದಾ ಸಂದರ್ಯಾಗ.
ಮಟಾ ಮಟಾ ಮದ್ದೀನ ಮೈ ಮ್ಯಾಲ ಬಿದ್ದಾನ
ಕೊಂದಾನ ಸಂಶಯ ಬರಧಾಂಗ.

ನನ್ನ ಚರ್ಮ ಸುಲಿದು ಮೈಮ್ಯಾಲ ಹೊದ್ದಾನ
ಕಡಿದು ಬುಟ್ಟೀ ತುಂಬಿ ಹೊತ್ತ ತಂದಾನ.
ಹಾಳಬಾಂವಿಯ ಹಾಳಿನೊಳಗೆ ಹೂಳ್ಯಾನಯ್ಯೊ
ಪಾರಮಾಡೊ ನಿನ್ನ ಕೆಟ್ಟ ತಂದೀಯನಾ.

ಭಾವಿಸಿದ್ದುದನೆಲ್ಲ ಬಿಚ್ಚಿಟ್ಟ ಶಬ್ದಧಾಂಗ
ಹೇಳತಿಷ್ಟು ಬಾಯಿಬಿಟ್ಟು ಆಕಾಶಕ.
ದಂಗಬಡದ ರಾಮಗೊಂಡ ದಿಕ್ಕ ಮರತ ನಿಂತಾನ
ಸುರದ ಸೋಸಿ ನೆನೆದಾನ ತಳತನಕ.

ಕತ್ತಲ ನಿರಾಕಾರ ಸರಿದು ಚಂದಿರ ಏರಿ
ಸಾಕಾರವಾಯಿತೊ ಸರ್ವಜಗಾ.
ನಿನ್ನ ಪಡೆವುದಕೆ ನಾವಿನ್ನೇನ ಮಾಡೋಣ
ಹೇಳೆಂದ ಕಾಲೂರಿ, ಕೈಮುಗದ.

ದಿಕ್ಕಿ | ನ್ಯಾಗ ದಿಕ್ಕ ಮೂಡsಣಾ
ಅಲ್ಲಿ | ಒಬ್ಬ ಸಾಧು ಶರಣಾ
ಕೊಡ | ತಾನ ಮಂತ್ರಿಸಿದ ನೀರಾ
ಸಿಂ | ಪಡಿಸ ರಾಕ್ಷಸಗ ಪೂರಾ

ಜ್ವಾಕಿ ಬಾಳಾ ಅಲ್ಲಿ ತಿರಗತಾವ ರಾಕ್ಷೇಸ
ನೇಮಿಸಿದ ಹಿಂಡ ಹಿಂಡ ಸೈತಾನಾ.
ಹೇಳತೇನ ಕೇಳ ಗೆಳೆಯಾ ನಿನಮುಂದ ಕತಿಯೊಂದ
ನನಮುಂದ ಕುಂಡ್ರ ಹೀಂಗ ತೆರದ ಮನಾ ||ಗೀ||

೧೯
ಇನ್ನೊಮ್ಮೆ ಅಲ್ಲಮ ಪ್ರಭುವಿಗೆ ಶರಣಾರ್ಥಿ
ಕೂಡಿ ಕುಂತ ಜನಕೆಲ್ಲ ನಮ್ಮ ನಮನಾ.
ಕಲಿಯುಗದೊಳಗಿನ ಕಥೆಯ ವಿಸ್ತಾರವ
ತಿಳಿಸಿ ಹೇಳುವೆ ಕೇಳಬೇಕ್ರಿ ಜನಾ.

ಕೂಡಿ ಕುಂತ ದೈಂವಕ್ಕ ಕೈಮುಗದ ಹೇಳತೇನು,
ಹೊಟ್ಟ್ಯಾಗ್ಹಾಕ್ರಿ ಉಳಿದಿದ್ರ ಚೂರ ಕಸರಾ.
ಯಪ್ಪಾ ಸ್ವಾಮಿ ಗುರುದೇವ ತಪ್ಪ ಮರತ ಒಪ್ಪಕೊಡ
ನೆಪ್ಪಿನ್ಯಾಗ ಇಡುವಾಂಗ ಸರ್ವರಾ.

ನೇಸರಿಗು ಬಿಸಲೀಗು ಬಿಗಿದಿಟ್ಟ ಒಗತಾನ;
ಅಂತೆ ಅನುಭವ ಮಾತು ಎರಡಕ್ಕುನು.
ಅನುಭವದ ಐಸಿರಿಯ ಆಗುಮಾಡುವ ಮಾತಿ
ಗೋತು ನಮೋನಮೋ ಎನ್ನುವೆನು.

ಘೋಡಗೇರಿ ಬಸ್ಸಪ್ಪ ಅವರ ಮಗ ಚಂದ್ರಪ್ಪ
ಪದಾ ಮಾಡಿದಾರ ಭಾಳ ನಿವಳಾ
ಗೌಡ್ತಿ ಬ್ಯಾನೀ ತಿಂದ ಗಂಡ ಹಡದ ಗಂಗಾಳ ಹೊಡೆದ
ಐದೇರೆಲ್ಲ ಜೋ ಅಂದ ಕತಿ ನಿವಳಾ

ಹಿರಿಯರ ಪಿರತೀಗಿ ಸರಿದೊರೆ ಸಮನಿಲ್ಲ
ಕೇಳಾವರ ಮ್ಯಾಲಿರಲಿ ನಿರಂತರಾ.
ಏ ಎವ್ವಾ ಸರಸೋತಿ ತಾಳಕ್ಕ ನಲಿವಾಕಿ
ನಾಲೀಗಕ್ಷರ ಕಲಿಸ ಇನ್ನೆರಡಾ

ಕತಿ | ಹೇಳತೇವ್ರಿ ಮುಂದಿಂದಾ
ಆಗ | ಧಾಂಗ ಒಂದು ಸಹ ಕಂದಾ
ಇರು | ಗುರುವೆ ನಾಲಗೆಯ ಹಿಂದಾ
ನಾ | ನಿಮ್ಮ ಕರುಣದ ಕಂದಾ

ಬೆನ್ನಾಗ ನೆತ್ತರ ಕಣ್ಣಾಗ ಕಣ್ಣೀರ
ಗೌಡಪ್ಪ ಕರಸತಾನ ಗೌಡ್ತಿಯನಾ.
ಹೇಳತೇನ ಕೇಳ ಗೆಳೆಯಾ ನಿನಮುಂದ ಕತಿಯೊಂದ
ನನಮುಂದ ಕುಂಡ್ರ ಹೀಂಗ ತೆರದ ಮನಾ ||ಗೀ||

೨೦
ಕಾಳ ತುಂಬಿದ ಜ್ವಾಳ ಗಾಳಿಗಲುಗಿದ ಹಾಂಗ
ತೂಗಿ ತೂಗಿ ಬಂದಾಳ ಮೈವಜನಾ.
ಚಳ್ಳಪಳ್ಳ ಗೆಜ್ಜೀನಾದ ಹೆಜ್ಜೀಯ ಚೆಲ್ಲತಾಳ
ನಾಜೂಕ ನಗಿ ನಕ್ಕ, ಏನ ಹಗಣಾ!

ಹಾಸ್ಗ್ಯಾಗ ಗುಜುಗುಜು ಆಡತಾರ, ಹಾಕತಾರ
ಲೆಕ್ಕ ಗುಣಿಸಿ ಭಾಗಾಕಾರ ಪರಭಾರೆ:
ಯೋಳಕ್ಕ ಗೋಳಾತ ಎಂಟಕ್ಕ ಗಂಟಬಿತ್ತ
ಸರಿ ಬೆಸ, ಹಿಡಿದಹ್ವಾರೆ ಗಂಡs ಖರೆ.

ಯೋಳ ಗಾದಿಯ ಮ್ಯಾಲ ಹೋಳಾಗಿ ಮಲಗ್ಯಾಳ
ಅಂತಾಳ; ಕರತರ್ರೆ ರಾಮಗೊಂಡಗ.
ಕೈಯಾಗ ಹಾಲತಾಲಿ ಕಣ್ಣುತಾಮ್ರದ ತಾಲಿ
ಕಂಡಾನ ಖರಖರೆ ಯಮನ್ಹಾಂಗ!

ಒಲಿಯ ಮ್ಯಾಲಿನ ಅಕ್ಕಿ ಉಕ್ಕುಕ್ಕಿ ಕುದ್ಧಾಂಗ
ಸಿಟ್ಟಾಗಿ ಕಿಸಿದಾಳ ಕಿಸಮೂಗನಾ.
ಬಲಾ ಇಲ್ಲದವನ ನೆಲಾ ಎದ್ದು ಬಡಿಧಾಂಗ
ಕರದಾಳ, ಮುಂದಕ ಬಾ ಚೆಲುವಾ.

ತುಸು ಆಡಿ ಹಲ್ಲsರೆ ಕಿಸಕಿಸದ ನಕ್ಕಾಳ,
ಜೊಲ್ಲಬಿತ್ತು ಗದಿಮ್ಯಾಲ ನಾಕ ಹನಿ.
ಏನೋ ಆಡಲು ಹೋಗಿ ಇನ್ನಷ್ಟ ನಕ್ಕಾಳ,
ಥೂ ಅಂತ ಉಗುಳ್ಯಾನ, ಅಲ್ಲತಗೀ.

ಬರ | ಲಿಲ್ಲ ಏಟು ಕಕಲಾತಿ
ಮರ | ತಾಳ ರೀತಿ ಮತ್ತು ನಡತಿ
ದಾ | ಸೇರು ಮರುಗಿ ಮರಮರಾ |
ಬದ | ಲಾಗಿದಾನ ಗೌಡ ಪೂರಾ

ಎರಡಂಬು ತಿಂಗಳಿಗೆ ಎರಡೇನು ಬಯಸ್ಯಾಳ?
ತಿನ್ನಲು ಕೊಡು ನಿನ್ನ ಹೃದಯವನಾ!
ಹೇಳತೇನ ಕೇಳ ಗೆಳೆಯಾ ನಿನಮುಂದ ಕತಿಯೊಂದ
ನನಮುಂದ ಕುಂಡ್ರ ಹೀಂಗ ತೆರದ ಮನಾ ||ಗೀ||

೨೧
ಮೂರಂಬು ತಿಂಗಳಿಗೆ ಮೂಗೀನ ಸಿರಕೋದ
ಮೂಸ್ಯಾಳ ಕಿಸಮೂಗ ತುಂಬೂಮಟಾ!
ನಾಕಂಬು ತಿಂಗಳಿಗೆ ಅಂಡ್ಯಾಳ ಆಡುದಕ
ಕಣ್ಣಗುಡ್ಡಿ ಬಯಸ್ಯಾಳ ಕೊಡ ಲಗುಟಾ

ಐದಂಬು ತಿಂಗಳಿಗೆ ಐದೇನ ಬಯಸ್ಯಾಳ?
ಕಿವಿಯ ಗಂಟೆಯ ಕೊಡು ನಾದಕ್ಕ.
ಆರಂಬು ತಿಂಗಳಿಗೆ ನಾಲೀಗಿ ಹೆರಚೀರಿ
ಸಾಂಬಾರ ಮಾಡಿರಿ ನಂಜೂದಕ!

ಏಳಂಬು ತಿಂಗಳಿಗೆ ಸಾಕಂಬುತನ ಬೇಕ
ತೊಗಲ ಹೆಚ್ಚಿರಿ ಪಚಡಿ ಮಾಡುದಕ!
ಎಂಟಂಬು ತಿಂಗಳಿಗೆ ಹೊಟ್ಟೀಯ ಹೊಸದಾಳ
ಗಾಂಧಾರಿ ಹಡೆದಾಳ ಗಂಡ ಮಗಾ!

ಐದೇರು ಬಂದಾರು ಗುಗ್ಗರಿ ತಿಂದಾರು
ಕುರ್ರಂತ ಕೂಗ್ಯಾರು ಹೆಸರಿಟ್ಟಾ!
ಊರ ತುಂಬ ಸಕ್ರಿ ಹಂಚಿ ಸಿಹಿ ಬಾಯಿ ಮಾಡ್ಯಾರ
ನಿಮ್ಮ ಮನಸೂ ಹೀಂಗs ಇರಲಿ ಸಿಹಿಕಟ್ಟಾ.

ಝಳ ತಾಗಿ ಬಾಡೀದ ಚಿವುಟಿದ್ದ ಚಿಗುರೆಲಿ
ರಾಮಗೊಂಡ ನಿಂತಾನ ಬಾಡಿ ಮುಖಾ
ಬಂದs ಬರ್ತsದಂತ ಆ ದಿನ ಕಾದಾನ
ಕಣ್ಣಿರದs ಕಂಡಾನ ಸೂರ್ಯದಿಕ್ಕಾ.

ದಿಕ್ಕಿ | ನ್ಯಾಗ ದಿಕ್ಕ ಮೂಡsಣಾ
ಅಲ್ಲಿ | ಒಬ್ಬ ಸಾಧು ಶರಣಾ
ಕೊಡ | ತಾನ ಮಂತ್ರಿಸಿದ ನೀರಾ
ಸಿಂ | ಪಡಿಸ ರಾಕ್ಷಸಗ ಪೂರಾ

ಹೇಳಾಕ ಹೆಸರ ಚಂದ ಕೇಳಾಕ ಕತಿ ಚಂದ
ನಿಮಗಾಗ್ಲಿ ಹತ್ತೆಂಟು ಮರಿಮಕ್ಕಳಾ
ಅವರಲ್ಲಿ ನಾವಿಲ್ಲಿ ಮಗಹುಟ್ಟಿ ಶುಭವಾಗಿ
ಅಂತಿಂತು ಬೆಳಗಾಯ್ತು ನಮ ಶರಣಾ.

೧೯೬೩