ಸ್ವಾಮಿ ನಮ್ಮಯ್ ದೇವರ ಬಂದಾವ ಬನ್ನಿರೇ
ಸ್ವಾಮಿ ನಮ್ಮಯ್ ದೇವರ ಬಂದಾವ ಬನ್ನಿರೇ ||ಪ||
ದೇವ ದೇವರ ನಮ್ಮವನಯ್ಯಾ
ಹಾಡಿಗೆ ಮೊದಲೋ ನಮ್ಮಯ್ ನೋ |
ಶುಂಭ ನಿಶುಂಭರ ತಿಂದ ಸಾಂಬಗುರು
ಮೇಲನಾಡಿನಿಂದ ಬಂದವನೋ ||
ದಡ್ದ್ಯಾಗ ನಮದೇವ ದೊಡ್ಡವನಯ್ಯಾ
ಕುರ್ಯ್ಯಾಗ ಹಿರಿಯಾಂವ ನಮ್ಮಯನೋ |
ಬೆಳಿಗೋಳ ಕೀಲ ಬಲ್ಲವನಯ್ಯಾ
ಮಳೆಯ ಸೂತರಾ ತಿಳಿದವನೋ ||
ಹುಲಿಮೀಸಿ, ಮೈತುಂಬ ಬಂಡಾರ ಬಡಕೊಂಡ
ಹಸುವಿನ ಹೆಜ್ಜ್ಯಾಗ ನಡೆದವನೋ |
ಬೀಸಿದ ಹೊಸಗಾಳಿಗೊಂದೊಂದ ಪರಿಯಾಗಿ
ಸೂಸುವ ನಗಿಗಳ ತುಟಿಯವನೋ ||
ಬಿಳಿಯ ಗೊಂಗಡಿಯ ಬಗಲ ಚೀಲದ
ಹಗಲದೀಪದ ನಾಯಕನೋ
ಚಿನ್ನದ ಕಡೆಯಿಂದ ಚೆನ್ನಾದ ಕೈಗsಳ
ಇಕ್ಕಳಧಾಂಗ ಮುಗಿದವನೋ ||
ಇಂಥಾ ಸ್ವಾಮಿಯ ಹಂತ್ಯಾಕಪ್ಪಾ
ದುಡುದುಡು ಓಡ್ಯಾವ ಕುರಿಗೋಳ
ಕುರಿಗೋಳಂದರ ಕುರಿಗೋಳಪ್ಪಾ
ಮಾತನಾಡುವ ಕುರಿಗೋಳ ||
ಸುತ್ತುಗಟ್ಟಿ ಮುಕ್ಕಟ್ಟ ಕಟ್ಟಿದಾವ
ಜಯ ಜಯವೆಂದಾವ ಕುರಿಗೋಳ |
ಅಂದ ಆಡದ್ದಕೆಲ್ಲ ಹೌದ್ಹೌದೆನ್ನುತ
ಕಣ್ಣೀರ ಕರದಾವ ಕುರಿಗೋಳಾ ||
ಮೇಲನಾಡಿನ ಚೆಲುವ ನಾಯಕಾ
ತಾವೊಂದ ಏನ ಮಾಡಿದನೋ |
ಹೊಕ್ಕ ಹೊರಗ ಬರಧಾಂಗ ಕಟ್ಟಿದಾನ
ತೋಳಿನ ಬೇಲಿಯ ಒಳಹೊರಗೊ ||
ಗಾಣದೆತ್ತಿನ್ಹಾಂಗ ಕಣ್ಣ ಕಟ್ಟಿಸಿಕೊಂಡು
ಕಾಶಿಗೆ ಬಂದೇವಂದಾವ |
ಬತಗೆಟ್ಟ ಕುರಿಗೋಳ ಬಲ್ಲಾಂಗ ಕುಣದಾವ
ಸ್ವರ್ಗಕ ಕಣ್ಣ ಕಿಸದಾವ ||
ನೆತ್ಯಾಗ ಕಣ್ಣ ನದರ ಮುಗಿಲಿನಲಿ
ತ್ರಿಪುರ ಕನಸುಗಳ ತೋರ್ಯಾನ |
ಮಾತಿನ ಏಣಿಯ ಗಟ್ಟಿಮುಟ್ಟ ಅಂಟಿಸಿ
ತೋರುದಕೇರೇರಿ ಇಳದಾನ ||
* * *
ಬಾರೊ ಬಾರೊ ನಮ್ಮಯ್ಯಾ ಎದಿ
ಕದಗೋಳ ತೆರೆದೇವ ಕರದೇವ |
ಹಾಲದ ಬಳ್ಳಿ ಹಾದಿಗುಂಟ ಹಬ್ಬಿಸೇವ
ಬಾಡಧಾಂಗ ಬಾ ಸ್ವಾಮಿ ಅಂತೇವ ||
ಹೆಜ್ಜಿಗಿ ಏಳೇಳ ಎಳಿ ದೀಪ ಹಚ್ಚೇವ
ಕಳೀಧಂಗ ಬಾ ಸ್ವಾಮಿ ಮೆಲ್ಲಕರೆ |
ನಂಬುಗೆಯೆಂಬೋ ರತ್ನಗಂಬಳಿ
ಗದ್ದಿಗಿ ಮಾಡೇವ ಕುಂಡ್ರಾಕರೆ ||
ಕುಡಗೋಲ ನಿಂದೋ ಕುಂಬಳ ನಿಂದೋ
ಹೆಂಗರೆ ಹೆರಚಂತಂದೇವ|
ಘೋಡಗೇರಿ ಹುಡುಗರು ಡೊಳ್ಳಿನ ಮ್ಯಾಳದವರು
ಬಾಗಿ ನಮೋ ನಮೋ ಅಂದೇವ ||
೧೯೬೪
Leave A Comment