ಖರೆ ಖೊಟ್ಟಿ ಏನ ಹೇಳಿದರೂನು ಕೇಳುತ್ತಿ;
ನನ್ನಾಣಿ, ನಿನ್ನಾಣಿ, ಕೆಟ್ಟ ದೇವರ ಆಣಿ –
ಬಿರಿ ಬಿರೀ ಬಿರಿ ಬಿರೀ, –
ನೆನೆದರೀಗಲು ಅಬ್ಬ, ಮೈಗೆ ಮುಳ್ಳುಗಳೆದ್ದು
ಹರಿಯುವುದು ತೊಟ್ಟಂಗಿ ಟರ್ರನೆಂದು!
ಆಗ ಆಗಿರಬಹುದು ಗಂಟೆ ಏಳೋ ಎಂಟೊ,
ಮಗುವಿನಿಸ್ಸಿಯ ಹಾಗೆ ಮಾಡಣವು ರಟ್ಟಾಗಿ
ಪಿಚ್ಚಗಣ್ಣಿನ ಸೂರ್ಯ ಮೂಡಿ ಬಂದ.
ನಾನಿಲ್ಲೆ ಕುಳಿತಿದ್ದೆ, ಇದೆ ಹಾಸಿಗೆಯ ಮೇಲೆ,
ಈ ಕಡೆಗೆ, ಹೀಗೆ ಮುಖ, ಹೀಗೆ ಭಂಗಿ.
ಅಥವಾ, ಇಲ್ಲವೆ, ಮತ್ತೆ, ಸರಿ, – ಪಶ್ಚಿಮಕೆ ಈ ಕಿಡಕಿ,
ಬಿಳಿ ಹೊಳಪಿನೆಳೆಬಿಸಿಲ – ಕೋಲು ಮೆತ್ತಗೆ ತೂರಿ,
ತಪ್ಪು ಮಾಡಿದ ನಾಯಿ ಹೀಗೆ ಬಿತ್ತು.
ಹೊರಗೆ ಹಸುರಿನ ಹರಕಿನಲ್ಲಿ ಹತ್ತೋ ಎಂಟೊ
ತೆರಕೊಂಡು ಅಲುಗಲುಗಿ ಬಿಸಿಲ ಕಾಸುವ ಹೂವು.
ಬಿರಿ ಬಿರೀ ಬಿರಿ ಬಿರೀ, – ಟ್ರೇನು,
ಅದರಲ್ಲೂನು ಎಕ್ಸ್‌ಪ್ರೆಸ್ಸು, –
ನೆನೆದರೀಗಲು ಆಹಾ!
ಹುರುಕಿನುರುಪಿನ ಮೇಲೆ ಕಿರಬೆರಳ ತುದಿಯಿಂದ
ತುರಿಸಿದಂತೆ!
ಅಥವಾ ದೋಸೆಯವಾಸನೆ ಮೂಗಿನಂಚಿನಮಟಾ ತುಂಬಿ
ಹೊಟ್ಟೆಯತನಕ ಸೋರಿದಂತೆ!
ಬಿರಿ ಬಿರೀ ಬಿರಿ ಬಿರೀ, –
ಹೊಡೆವ ನನ್ನೆದೆಯ ತಾಳಕ್ಕೆ ಅನುಗುಣವಾಗಿ,
ತುಂಬು ಕಳಚಿದ ಹಣ್ಣು ಕೆಳಗೆ ಉರುಳುವ ಹಾಗೆ,
ಉರುಳಿ ಬೀಳುವ ಹಾಗೆ, ಬಿದ್ದು ಉರುಳುವ ಹಾಗೆ,
ಬಿದ್ದೇ ಬಿಡುವ ಹಾಗೆ, –
ಬಂದಳು!


ಉದ್ದವಾಯಿತು ಹೌದ ಪ್ರಸ್ತಾವನೆ?
ನುಡಿಯ ಮಾಪನು ಬಳಸಿ ಎದೆಯಾಳದನುಭವವ
ಅಳೆದಾಗುಮಾಡುವುದೆ ಕಷ್ಟನೋಡು. ಆದರೂ,
ಒಂದನಾಡಲು ಹೋಗಿ ಒಂಬತ್ತನಾಡುವರ
ಕಂಡರಾಗದು ನನಗೆ. ನಿನಗೆ?
ಬಿರಿ ಬಿರೀ ಬಿರಿ ಬಿರೀ ಬಂದಳಷ್ಟೆ,
ಥೇಟು ಕ್ಯಾಲೆಂಡರಿನ ನಟಿಯ ಹಾಗೇ ಕಣೋ ರೂಪ!
ಅವೆ, ಕಣ್ಣು, ಅದೆ ಮಸಡಿ, ತುಟಿಯ ಅಣೆಕಟ್ಟಿನಲಿ
ಮಡಗೊಂಡ ಮುಗುಳು ನಗೆ.
ಬಳಿಬಂದಳಿನ್ನಷ್ಟು, ಕಣ್ಣುಗಳನೋಡಿದಳು.
ಗವಿಯ ಕಿವಿಯಲ್ಲೀಗ ಗಾಳಿ ಪಿಸುಗುಡಲಿಲ್ಲ.
ಬಿಸಿಲು ಬೆಂಕಿಯ ನಕ್ಕು ತೆಕ್ಕೆ ಹಾಯುತ್ತಿತ್ತು.
ರಸ್ತೆ ಮನೆ ಕಲ್ಲುಕಟ್ಟಿಗೆ ಎಲ್ಲ ಎಲ್ಲವನು,
ಎಂಥ ಬಿಸಿಯಿಂದವಳು ಪ್ರೀತಿಸಿದಳಂತೀಯ!
ಹುರಿದ ಬೀಜದ ಹಾಗೆ ಅವಳೆದುರು ನಿಂತಾಗ,
ಎರಿ ಜವಾರಿಯ ಕಬ್ಬ ಸುಲುಸುಲಿದು ತಿಂಬಾಗ
ಕಬ್ಬಿಗೆಂತೋ ಅಂತೆ ನನಗಾಯಿತು.
ಸಿನೆಮ ನಾಯಕರಂತೆ
ಬಾಯ್ಪಾಠ ಮಾಡಿದ್ದ ಹಾವಭಾವಗಳನ್ನು ತೋರಿಸಿದೆನೆ?
ಇಲ್ಲ.
ಅಥವಾ ಪ್ರಾಕೃತರಂತೆ
ನಯವಿನಯ ನಮ್ರತೆಯ ಸಂಯಮಿಸಲಾರದೆಯೆ ಮಿತಿ ಬಿಟ್ಟಿನೆ?
ಇಲ್ಲ.
ಅಥವಾ ಪಶುವಿನ ಹಾಗೆ,
ಉದಾ: ಕೋಣನ ಹಾಗೆ ಬೆದೆ ಮಣಕ ಕಂಡಂತೆ ಬಾಯ್ ಕಿಸಿದೆನೆ?
ಇಲ್ಲ.
ಅವಳ ದೇಹದ ಏರು ಇಳಿವುಗಳನಭ್ಯಸಿಸಿ
ಈ ವಹಿಯ ತುಂಬ, ಅದು ಆಧಾರ ಸಹಿತಾಗಿ
ಟಪ್ಪಣಿಯ ತೆಗೆದುಕೊಂಡೆ!
ಹೇಳು ಈ ಸಾಹಸಕೆ ಏನೆನ್ನುವಿ?

೧೯೬೩