ಬದಿಯ ಹಸಿ ಗೋರಿಯನು ಹರಿಯದಿರು, ಗೀಸದಿರು
ಹಲ್ಕಿರಿದು ಬಂದೀತು ಅಳಿದ ಭೂತ.
ವರ್ತಮಾನದ ತೋಳಿನೊಳಗಾನು ಪರಮಸುಖಿ;
ಇರಲಿ ಎಂಥದೆ, ಎಷ್ಟೆ ಅನಿರೀಕ್ಷೀತ.
ಪೂರ್ವಪಶ್ಚಿಮಗಳನು ಇಕ್ಕು, ಅಗಳಿಯ ಹಾಕು,
ಆ ಸೂರ್ಯ ಕ್ರೂರ ಶಶಿ ಇಣಕಿಯಾರು.
ನಾಲ್ಕು ಮೂಲೆಗು ನಾಲ್ಕು ಅಮವಾಸೆಗಳ ಹಚ್ಚು,
ಬರಲಿ ಕಿರಣಿಸಿ ಕರಿಯ ಕಪ್ಪು ಬೆಳಕು.
ಬಾಗಿಲಿನ ಆ ಈ ಬದಿಗೆ ಕಾವಲಿಗಿರಲಿ
ಫಾಲ್ಗುಣ ಚೈತ್ರ ಮಾತ್ರ!

ಇದು ನೋಡು ಹಂಗಾಮು!
ನಿನ್ನ ಬತ್ತೆಲೆಯಿಂದ ಈ ಎದೆಯ ಹದಗೊಳಿಸು
ಒತ್ತಿ ಉತ್ತು.
(ಕೋಗೊಲೆಯ ಕಂಠದಲಿ ಕುಳಿತ ಬೆಸಗೆಯೊಮ್ಮೆ
ನಿಟ್ಟುಸಿರ ಬಿಕ್ಕುತ್ತ, ತುಸು ನೆರಳಿತು.)
ನವಿರಸಾಲಿನಗುಂಟ ಸುಖದ ಮುಂಗಾರಿ ಬೀಜಗಳ ಬಿತ್ತು
(ಹೊಡೆ ಹಾಯ್ದ ಶ್ರಾವಣದ ನವಿರು ಜೋಲಿಯ ಹೊಡೆದು
ಹಾಗು ಹೀಗೂ ತೂಗಿ ತುಸು ನಕ್ಕಿತು!)

೧೯೫೯