ಸರಿಪಡಿಸಿದಳು ಜೋತ ತೊಗಲ ತೆರೆ, ಅಲ್ಲಲ್ಲಿ, –
ಆಯ್ತು ಮುದುಡಿದ ಕೌದಿ ಉದ್ದ ಅಗಲ.
ಪ್ಯಾರಿಸಿನ ರಂಗು ತೇಪೆಯ ಹಚ್ಚಿ ಮೆತ್ತಿದಳು,
ಕೆನ್ನೆ ತುಟಿಗಳ ಹರಕು ಬಿರುಕನೆಲ್ಲ.
ಹುಸಿನಗೆಯ ಖೊಟ್ಟಿ ನೂರರ ನೋಟು ಛಾಪಿಸುವ
ಹಳೆ ಯಂತ್ರ ಹೇರಿದಳು ತುಟಿಯಮೇಲೆ
ಉಸಿರಿಡುವ ಹುತ್ತವನು ತೀಡಿ ತೀಡಿ
ಮಾಡಿದಳು ನಿಡಿದಾದ ನೀಟಾದ ಮಿದು ಸಂಪಗೆಯೆಸಳ.
ಕಣ್ಣಿನೆವೆಗಳ ಸಾಣೆ ಹಿಡಿದು ಚೂಪಾಗಿಸುತ
ಕೊನೆಗೆ ಹುದುಗಿದಳೆರಡು ಹರಿತ ಬ್ಲೇಡ.
ನಿಜವ ಸಾರುವುದಕ್ಕೆ ತಲೆಯನೇರಿದ ಶುಭ್ರ –
ಖಾದಿಯೆಳೆ ಮುಚ್ಚಿದಳು ಇರುಳಿನಿಂದ.
ಪೇಟೆಯೊಳಗಿನ ಎರಡು ಗೌರಿಶಂಕರ ತಂದು
ಜೋತುಬಿಟ್ಟಳು ಎದೆಗೆ ಮೋಜಿನಿಂದ.
ಹರೆಯುಕ್ಕಿ ಮಹಾಪೂರ ಬಂದು, ಸಿಕ್ಕಾಪಟ್ಟೆ ತುಂಬಿ ಹರಿದು,
ಮನೆಮುರಿದು, ಕೆಡವಿ, ಮಾಡಿದ ವಿಕಾರವನೆಲ್ಲ
ಹೊಚ್ಚಿದಳು ನೈಲಾನು ಸಿಲ್ಕಿನಿಂದ!
ಫಿಲ್ಮು ತಾರೆಯರಿಂದ ಕಲಿತ ಹದಿನಾರನ್ನು
ಸಿಂಪಡಿಸಿದಳು ಅಲ್ಲಿ ಇಲ್ಲಿ ಉಲ್ಲಿ.
ಇಳಿದಳೋ ದಾರಿಯಲ್ಲಿ –
ಭೋಪರಾಕ್! ಏನಂದಿ?
ನನ್ನೆಡೆಗೆ ನಗುಬೀರಿ ಬಳುಕುತಿಹಳೆ?
ನನಗೆ ಗೊತ್ತಿಲ್ಲವೇ ಇದು ಕಳ್ಳಸಂತೆಯೆಂದು?

೧೯೫೯