ಗೆಳೆಯಾ ಬರತೀನಿ ಮನದಾಗಿಡೊ ನೆನಪ ||ಪ||
ನಾ ನೀ ಯಾರೋ ಏನೋ ಎಂತೊ
ಅಂತು| ಪೋಣಿಸಿತು ಕಾಣsದ ತಂತು
ಇದು ಹೌದು ಹಾದಿ ಗೆಳಿತಾನ
ಇದ್ದ| ರಿದ್ದೀತು ಹಳಿಯ ಒಗತಾನ
ಮರೆತು ನೆನಪಿಸಿಧಾಂಗ
ಬೆಸದಾವೊ ನಮ ಮನ
ಕಡಿತನಕ ಸ್ನೇಹ ಬಂಧನ ||

ಹರಿನೀರು ಹರೀತೊ ಬೆಳವಲಕ
ಒಡಮುರಿ| ಧಾಂಗಾತೊ ಹಸಿರು ಎಡಬಲಕ
ತೆನೆಹಾಯ್ದು ನವಿರೆದ್ದು ತೂಗಿ
ತುಂಬಿ| ಬಂದೀತೊ ಈ ವರುಷ ಸುಗ್ಗಿ
ತೂರಿಕೊಳ್ಳುದರೊಳಗೆ
ಗಾಳಿ ಅಡಮಳಿದಾಳಿ
ಕೈಗಿತ್ತು ಬಾಯ್ಗಿಲ್ಲ ಮಾಗಿ ||

ಮೈಯಾಗ ಬಂಧಾಂಗ ಚೈತ್ರ
ಮೈತ್ರಿ| ಕುಣಿಸೀತು ನಮ ನಿಮ್ಮ ನಿರತ
ಹೊಸೆದುಸಿರು ಹುರಿಬಿತ್ತೊ ಬಿಗತ
ಕುಣಿಕಿ| ಬಿಚ್ಚಿಲ್ಲ ಬರಿ ವ್ಯರ್ಥ ಎಳೆತ
ದಿನವೊಂದು ಕ್ಷಣಧಾಂಗ
ದಿನವೆಲ್ಲ ಧಾಂಗಧೀಂಗ
ಹರೆ ಬಂತೊ ಪಿರಿತೀಗಿ ತುರತ ||

ಕಣ್ಣಾಗ ತುಂಬೇತಿ ಒರತಿ
ಇರಲಿ| ಇದs ನಮನಿ ಕಡೀತನಕ ಪಿರತಿ
ಬೆಳೆದು ದೊಡ್ಡವನಾಗೊ ಗೆಳೆಯಾ
ಹರಿಸೊ| ನಾಡೊಳಗ ಬೆಳಕೀನ ಝರಿಯ
ಅಭಿಮಾನ ತುಂಬಲೆನ್ನೆದೆಯ
ಅಲ್ಲೆ| ಕೂಗಲಿ ಇವ ನನ್ನ ಗೆಳೆಯ
ಚಂದ್ರಶೇಖರನೆದೆಯ
ಹರಕೆ ನಿನಗಿದೊ ಧಾರೆ
ಇರಲೀದು ಕಡಿತನಕ ನೆನಪ ||

೧೯೬೦