ಸಣ್ಣವನಿದ್ದಾಗ ನನಗೂ ಬೇಕೆನಿಸಿದ್ದ ಚಂದ್ರ
ಅವನು ನನ್ನ ಕಡೆ ನೋಡಿದ್ದೆ ತಡ
ಗಕ್ಕನೆ ಹಿಡಿದು ಕಣ್ಣ ಕನ್ನಡಿಯೊಳಗೆ
ಬಂಧಿಸಿಟ್ಟೆ.

ಕಣ್ಣು ಪಂಜರ
ಅದರಲ್ಲಿ ಚಂದಿರ
ಅವನೊಂದು ಪಕ್ಷಿ
ನಾ ಅದಕೆ ಸಾಕ್ಷಿ.

ಪಟಪಟ ರೆಕ್ಕೆಯ ಬಡಿದು
ಕನ್ನಡಿಯ ಮನೆಯಲ್ಲಿ ಹೆಂಗಿರಲಿ
ರಾಮ ರಾಮಾ ಅಂದ.

ಕೂಗಬೇಡ ಚಿನ್ನಾ
ನೀನೆ ನನ್ನ ಪ್ರಾಣ.
ರೆಕ್ಕೆ ಪುಕ್ಕ ನೊಂದರೆ
ನನ್ನ ಕಣ್ಣಿಗೆ ತೊಂದರೆ.