ನಾನೊಬ್ಬನೇಕಾಂಗಿ ಊರ ಹೊರದಾರಿ ಬದಿ
ಕುಳಿತಿದ್ದೆ; ಸಂಜೆಗೆಂಪಳಿಯುತಿರೆ ಆಕಾಶ –
ದಲಿ ಮಲ್ಲಿಗೆಗಳಂತೆ ತಾರಾಳಿ ಹೊಳೆಯೆ ನಿಶೆ –
ಮೆಲ್ಲಮೆಲ್ಲನೆ ಅಡಿಯಿಡುತ ಬರುತಿರೆ ಹಾದಿ –
ಯಲ್ಲಿ ರೈತರ ಗುಂಪು ಹೊಲದ ಕೆಲಸವನುಳಿದು
ಮನೆಗೆ ಐತರುತಿರ್ದರಹ – ತಮತಮಗೆ ಬಂದ
ಹಾಡುಗಳ ಹಾಡುತ್ತೆ! ಏನು ಉತ್ಸಾಹವದು!
ಎಲ್ಲಿದ್ದಿತೇನೊ ಚೈತನ್ಯ ಮೇಣ್ ಆಮೋದ!!

ಮುಂಜಾವಿನಿಂದೆ ಸಂಜೆಯವರೆಗೆ ಬಿಡುವಿರದೆ
ನೆತ್ತರನೆ ಪಣಕಿಟ್ಟು ಬೆಮರ ಹೊಳೆಯೊಳು ಧುಮುಕಿ
ದುಡಿದುಡಿದು ಹಣ್ಣಾಗಿ ನೋವು ಹೊಟ್ಟೆಯುಳಿಕ್ಕಿ
ಹಾಡ ಹಾಡುತಲಿಹರು! ಏನು ನಿಷ್ಠುರ ಎದೆ!
ಅಳು ನುಂಗಿ ನಗುತಿಹರು! ನಾಗರಿಕರಿಂತಿಹರೆ?
ಇಂಥ ಗಂಡೆದೆ ನನ್ನದಾಗಿರಲಿ ಓ ಹರಿಯೆ!