ಪ್ರಳಯದ ಬಿರುಗಾಳಿ ಬೀಸಿ
ಮದ್ದಾನೆಯಂಥ ಧೂಳೆಬ್ಬಿಸಿ
ಕ್ಷಿತಿಜಗಳ ಆವರಿಸಿ, ನೆಲಮುಗಿಲಿಗೇಕಾಗಿ
ಮಿಂಚಿನ ಶಲಾಕೆ ಫಳ್ಳನೆ ಹೊಳೆದು
ಸ್ಫೋಟಿಸಿದಾಗ –
ಸಿಡಿಲು ಬಡಿದದ್ದು ಎಲ್ಲಿ ಯಾರಿಗೆ ಎಂದು ತಿಳಿಯಲೆ ಇಲ್ಲ.
ಅರೆಗಳಿಗೆ ನಮ್ಮ ಉದ್ಗಾರ ನಮಗೇ ಕೆಳೀಸದಂಥ
ಸ್ಮಶಾನ ಮೌನ. ಆಮೇಲೆ ಕಂಡಿತು
ಅಂಗಳದ ಆಲದ ಮರ ಬಡಮೇಲಾಗಿ ಬಿದ್ದಿತ್ತು
ನೆತ್ತಿಯ ಸುಳಿಯಿಂದ ಬಡ್ಡಿಬೇರಿನ ತನಕ ಸೀಳಿತ್ತು.

‘ಅಜ್ಜನ ಅಜ್ಜ ಅವನಜ್ಜ ನೆಟ್ಟ ಅನಾದಿಮರವೆಂದು –
ಇದರ ನೆರಳಲ್ಲಿದೆ ಚಂದ್ರಕಾಂತ ಶಿಲೆ,
ಆಯುರ್ವೇದ ಇದರೆಲೆ,
ಹಾಡುವ ಹಕ್ಕಿಗಳ ಹಸಿರುಯ್ಯಾಲೆ,
ಬೆಳ್ದಿಂಗಳಲ್ಲಿ ಯಕ್ಷಿಯರ ನೆಲೆ
ಕಗ್ಗತ್ತಲಲ್ಲಿ ಭೂತಪ್ರೇತ ರಾಕ್ಷಸರ ಯಕ್ಷಗಾನ ಕಲೆ
ಆಹಾ ಇದು ಇರೋದು ನಮ್ಮಂಗಳದಲ್ಲೆ”
ಎಂದು ಉಬ್ಬಿಕೊಬ್ಬಿದ ನಮ್ಮ ಹಿರೀಕರೆ
“ನೋಡುತ್ತಿರಿ ಸಾಮಾನ್ಯವಲ್ಲ, – ಈ ಮರ ಬಿದ್ದದ್ದು
ದಾಕಲಾಗುತ್ತದೆ ಇತಿಹಾಸದಲ್ಲಿ.
ಮಾರಿದರೆ ಎಷ್ಟು ಬಂದೀತು ಮಹಾ! ಆದರೂ
ಅಜ್ಜನೆಟ್ಟ ಆಲದ ಮರ, ಆಶಿರ್ವಾದವೆಂದಾದರೂ
ಪಾಲು ಬರಬೇಕಲ್ಲ” ಎಂದಾಗ ಹುಚ್ಚನೊಬ್ಬ ಹೇಳಿದ:
“ಇತಿಹಾಸದಲ್ಲಿ ದಾಕಲಾಗುತ್ತದೆ, ಬಿದ್ದ ಮರವ ಮಾರಿ
ನೀವು ಕಳ್ಳೆಪುರಿ ತಿಂದದ್ದು ಸಹ!”