ಇದೆ ಈಗ ಮಳೆ ನಿಂತು ಗಳಿಗೆ ಎರಡಾಗಿಲ್ಲ
ಪಡುವಣಕೆ ರವಿ ಮೋಡ ಸರಿಸಿ ಬಂದ
ಎರಕೊಂಡು ಮೈಯಾರ ಬಿಟ್ಟ ನವ ವಧುವಿನೊಲು
ಕುಳಿತ ಇಳೆಯನು ಕಂಡು ಬೆಚ್ಚಿ ಬಿದ್ದ!

ಮರ್ಯಾದೆಗಾಗಿ ನಸು ಹಸಿರುಡೆಯನುಟ್ಟಿಹಳು
ಮೈತುಂಬ ಮಕರಂದ! ಅಹ ಸುಗಂಧ!
ತಣ್ಬೆಲರು ಕಳ್ಳತನದಿಂದೆ ಮೂಸುತಲಿಹುದು
ಕಂಡ ಕೋಗಿಲೆ ಸಾರುತಿರುವುದಂದ!

ಎದಯಕ್ಕರೆಯು ಉಕ್ಕಿ ಬರೆ ಸ್ವರ್ಣ ಬೆಳಕುಗಳ
ಅವಳ ದೇಹದ ಮೇಲೆ ಚೆಲ್ಲಿ ಚೆಲ್ಲಿ
ಕಿರಣಮೃದುಕರದಿಂದೆ ತಾಕಿದನು ಕೆನ್ನೆಗಳ
ಮೈಯ ಕೊಡಹಿದಳಲಾ ನಗೆಯ ಚೆಲ್ಲಿ!

ಎಂಥ ಮೌನದ ಭಾಷೆ ಆಡಿದರೊ ಹಾಡಿದರೊ
ಮಧುರ ಪ್ರೇಮದ ಗೀತೆ ಹೃದಯದೊಳಗೆ
ರಸಮಧುಸರಸ್ಸಿನಲಿ ಈಜಾಡಿದರೊ ಬೆರಸಿ
ವಿದ್ಯುದಾಲಿಂಗನದಿ ಎದೆಯನೆದೆಗೆ!

ಕೊನೆಗಾಟ ಆಕಾಶದಲ್ಲಿ ಬಣ್ಣದ ಕಾಶಿ
ರಚಿಸಿ ರಮಿಸಿದನೊಂದು ಚಣದವರೆಗೆ
ಕೊನೆಗವಳ ಕ್ಷಿತಿಜ ತುಟಿಗೊತ್ತಿ ಇನಿ ಮುತ್ತೊಂದ
ನಗಿಸಿ ಮರೆಯಾದನಹ ಅಷ್ಟರೊಳಗೆ!
ಬಿಕನೇಸಿ ತಿರುಗಿದೆನು ಇತ್ತ ಕಡೆಗೆ!