ಹಿತ್ತಲ ಗುಲಾಬಿ ಗಿಡ ಒಂಟಿ ಹೂ ಧರಿಸಿತಹ
ಹರಳಿನುಂಗುರ ಬೆರಳಿಗಿಟ್ಟಹಾಗೆ
ನಾವು ತೊಟ್ಟಾಸೆ ಸುಸ್ಪಷ್ಟ ಸುಂದರ ಕನಸು
ಸಾಕಾರಗೊಂಡು ಹೂವಾದಹಾಗೆ!

ಓ! ಎಂಥ ಚೆಲುವಿಕೆಯು! ಬುಡ ಮಣ್ಣು! ಗಿಡ ಮುಳ್ಳು!
ಹಸಿರೆಲೆಯ ಕೆಸರಿನಿಂದೆದ್ದ ಕಮಲ!
ಎಂಥ ವಿಕೃತಿಯ ಗರ್ಭದಿಂದೆಂಥ ಆಕೃತಿಯು
ಕರಿಮೋಡದಿಂದೊಗೆದ ಕಾಮಬಿಲ್ಲ!

ನವುರನವುರಾದ ಶತಸ್ನಿಗ್ಧ ಕೋಮಲ ಮಧುರ
ದಿಟ್ಟಿಗೂನೂ ಬಾಡುವಂಥ ಪಕಳೆ
ಸಂಜೆ ಮುಗಿಲಿನ ಕೆಂದೆರೆಯ ಮೋಡ ರಂಗವನೆ
ಹುಡಿಮಾಡಿ ಎಸೆದಂತೆ ದಳ – ಮೊಗ ಕಳೆ!

ಹುಡಿಯಾ ಹೊಂಗಿರಣದಲಿ ಮಿಂದು ಮಣಿ ಮಿಂಚಿನೊಲು
ನೀರಹನಿಯೊಂದೆ ಗರ್ಭದಲಿ ಮಿನುಗಿ
ನನ್ನದೆಯ ಸೂರೆಪಾನವ ಸೂರೆಗೊಳ್ಳುತ್ತಿದೆ
ಚಿತ್ತ ಚಂಚಲತೆ ಅಸ್ಥಿರತೆಗೆರಗಿ!

ನನ್ನ ಕನಸಿನ ಹಾಗೆ ರೂಪ! ಕಲ್ಪನೆಯ ಸುಕು –
ಮಾರಾಂಗ! ಶಿವಸುಂದರಕೆ ಮುನ್ನುಡಿ!
ಗಿಡದ ಆಕಾಶವಾಣಿಯ ಕೇಂದ್ರದಿಂದ ಮಧು –
ಮಾಸ ಹಾಡಿದ ಕವನ! ಏನು ಇಮೋಡಿ!

ಇದರುದಯದೊಂದೀಗೇ ನನ್ನೆದೆ ಕುಮುದವರಳಿ
ಬೆದೆ ಮರೆತು ಸೌರಭವ ಸೂಸುತಿಹುದು!
ಮರೆತ ಪಯಣಕ್ಕೊಂದು ಹೊಸಹುರುಪು ಉತ್ಸಾಹ
ಹೊಸ ಬೆಳಕ ಹೊಂಗಿರಣ ತೂರುತಿಹುದು!

ವನ – ತೋಟ – ಪರ್ವತವನುಳಿದೆಮ್ಮ ಹಿತ್ತಲಕೆ
ಬಂದನಿವ ಋತುರಾಜ ಅತಿಥಿಯಾಗಿ!
ಒಂದೆರಡು ದಿನವೇಕೆ? ಇದು ಕೂಡ ನಿಮ್ಮ ಮನೆ
ಇರಲಾಗದೇ ಇಲ್ಲೆ ಅಚಲರಾಗಿ!