ಅಯ್ಯಾ ಗೋಡ್ಸೆ
ಎದ್ದೇಳಯ್ಯಾ, ಬೇಗ ಸಿದ್ಧನಾಗು
ಜನವರಿ ಮೂವತ್ತಲ್ಲವೆ ಇವತ್ತು?

ಕೊಲ್ಲ ಬಂದವರೆದುರು ಚೆಲ್ಲಿ ಮುಗುಳು ನಗುವ
ಮೈಮರೆಸುವ ಗಾಂದೀಟ್ರಿಕ್ಕು ಗೊತ್ತಲ್ಲ ನಿನಗು?
ಗಾಂಧಿಗೂ ಗೊತ್ತಿದೆ ಅವನ ಬೊಚ್ಚುನಗೆ
ಎಲ್ಲ ಪ್ರಶ್ನೆಗಳಿಗೆ ಉತ್ತರವಲ್ಲವೆಂದು.
ಆದರೂ ಒಡೆಯಲಾರದ ಒಗಟು ಗಾಂಧೀನಗು.
ನಮಗೋ ಸಮಯವೆಲ್ಲಿದೆ ಒಗಟು ಒಡೆಯಲು?
ನಾವು ಪೇಟಂಟ್ ಮಾಡಿದ ಗಾಂಧಿಗೂ ಸಂಸ್ಕ್ರತಿಗೂ
ಬೆಲೆ ಕುಸಿದು ಕಂಪನಿ ದಿವಾಳಿ.
ಅದಕ್ಕೇ ಗಾಂಧೀಜಿಯ ನಗೆ ನಮಗೆ ಹಗೆ.

ನಿನಗೂ ಗೊತ್ತು ಇವತ್ತಲ್ಲ ಜನವರಿ ಮೂವತ್ತು
ಆದರೂ ದಿನಾ ಆಚರಿಸಬೇಕಲ್ಲ
ಗಾಂಧಿಯ ಕೊಂದ ಕಥೆಯ
ಹಾಯ್ ರಾಮಾ ವ್ಯಥೆಯ!

ದಿನಕ್ಕೊಬ್ಬ ಗಾಂಧಿ, ದಿನಕೊಬ್ಬ ಗೋಡ್ಸೆಯ ಹುಡುಕಿ
ಸಿಕ್ಕದಿದ್ದಲ್ಲಿ ನಾನೊ ಇಲ್ಲವೆ ನೀನೊ
ಗೋಡ್ಸೆಗಳಾಗಿ ಗುಂಡು ಹಾರಿಸಬೇಕು.
ಹಾರಿಸಿದರೆ ಧಗಧಗಿಸುವ ದಿಗಂತ…..
ಹೊಗೆಯಾಡುವ ರಸ್ತೆ……
ದಿನಾ ಸಾಯುವ ಕರ್ಮ ಗಾಂಧಿಗೆ
ಕೊಲ್ಲುವ ಕರ್ಮ ನಮಗೆ – ತಪ್ಪಿದ್ದಲ್ಲ
ದೇಶಕ್ಕಾಗಿ ಇದು ಹೆಚ್ಚಲ್ಲ.

ಆಮೇಲೊಂದು ಶ್ರದ್ಧಾಂಜಲಿ ಒದರುವುದು – ಅದೂ ನಿತ್ಯದ್ದೆ!
“ಸತ್ತು ಹೋದರು ಗಾಂಧಿ
ಆಕಾಶಕ್ಕೆ ಹೊಗೆಯಾಗಿ, ಬೂಮಿಗೆ ಬೂದಿಯಾಗಿ!
ಕಲ್ಯಾಣದ ಬೆಳಕೆಲ್ಲಿ ಹೋಯಿತು ರಾಮ ರಾಮಾ!”
ಈಗ ಜನಗಣ ಹಾಡಿ ಮನೆಗೆ ನಡೆ.

ತಕರಾರು ಬರಬಹುದು ಸ್ವರ್ಗದ ಗಾಂಧೀ ಕಡೆಯಿಂದ
ಇನ್ನೇನಂತೆ ಆ ಮುದಿಯನಿಗೆ?
ಶಾಲೆ ಕಾಲೇಜುಗಳಿಗೆ ರಜ ಹಾಕಿ
ಮಾಡುವುದಿಲ್ಲವೆ ಅವನ ತಿಥಿ ಜಯಂತಿ?
ಅವನ ಹೆಸರಿಟ್ಟಲ್ಲವೆ ಬೀದಿ ಭವನಗಳಿಗೆ
ಬೇಕಾದರೆ ವಿಧಾನಸೌಧವೇ ತನ್ನ ಸಮಾಧಿ ಎಂದುಕೊಳ್ಳಲಿ.
ನಮಗೇನಂತೆ?
ನೇರನುಡಿಯಲ್ಲಿ ನುಡಿಯುವುದುಚಿತ:
“ನೋಡಿ ಗಾಂಧೀಸಾಹೇಬರೇ
ನೀವು ಸತ್ತದ್ದಕ್ಕೆ
ಭೂಗೋಳದ ಕಿರುನಗೆಯೂ ಮಾಸಿಲ್ಲ ಸ್ವಾಮಿ.
ಕ್ರಾಂತಿಯೆಂದದ್ದೆಲ್ಲ ಕಸವಾಗಿ ತಿಪ್ಪೆಯಾಗಿದೆ ದೇಶ!
ಕಾಣದೆ?”

ದೇಶಪ್ರೇಮ ಈಗೀಗ ಭಾರೀ ದುಬಾರಿಯಪ್ಪ.