ಮಧ್ಯರಾತ್ರಿ; ತುಸು ಗದ್ದಲಿಲ್ಲ ಸಾಗಿತ್ತು ಜಡದ ದಾಳಿ
ಕಟ್ಟುನಿಟ್ಟುಗಳ ಹಂಗು ಹರಿದು ಹಬ್ಬಿಹಳು ನಿಶೆಯ ಕಾಳಿ
ದಿಕ್ಕು ಕೂಡ ತಮ್ಮಿರವು – ತಾಣಗಳ ಮರೆತು ಕರಗಿ ಹೋಗೆ
ಚಿಕ್ಕೆ ನಿಸೆಯ ಹುರಬುರುಕು ನೆತ್ತಿಯನು ಕುಕ್ಕುತಿಹವು ಬಿಡದೆ

ಕಾಲ ಗಿಡುಗನಾ ಕರಿಯ ರೆಕ್ಕೆಯೊಲು ನಾಲ್ಕು ಗೋಡೆ ಸುತ್ತು
ಆರಲಿರುವ – ಅಳುತಿರುವ ಚಿಮಣಿ ತುಸು ಆಚೆಬದಿಗೆ ಇತ್ತು
ಮೃತ್ಯು ಜಿಹ್ವೆ ಕಡುಗೆಂಪು ಹಾಸಿನಲಿ ‘ಸತ್ತ’ ಸಾಯಲಿರುವ
ಜೀವಿಯೊಂದು ತೂಗಾಡುತಿತ್ತು ಅಚೀಚಿ ಬದುಕು ಸಾವ.

ಲೊಚಗುಡುತಲಿತ್ತು ಕರಿಗಾಲ ಹಲ್ಲಿ ಯಾ ಶಕುನ ಹೇಲುತಿತ್ತೊ!
ಎಬಡ ಗೂಗಿ ಕೂಗಾಡುತಿತ್ತು ಅದಕಾವ ಮೋದವಿತ್ತೊ!
ಬಾನ್ ಬಿಕ್ಕುತಿತ್ತು ತಿರೆ ತಿಣುಕುತಿತ್ತು ಸಳಸಳನೆ ಕುದಿದು ಗಾಳಿ
ಯಮನು ಬರೆದ ‘ಶರಾ’ ಓದುತಿತ್ತು ಮೈ ಹಾಗೆ ಹೀಗೆ ಹೊರಳಿ!

ಗುಳಿಬಿದ್ದ ಕೆನ್ನೆ ಕುಣಿಯಾದ ಕಣ್ಣು – ಸುಡುಗಾಡೊ ಅಬ್ಬ ಹಣೆಯು!
ಹೊಟ್ಟೆ ಬೆನ್ನಿಗಂತರವೆ ಇಲ್ಲ! ಎದೆ – ಅತಿಥಿ ಯಮನ ಮನೆಯು
ಕೇಶ ಮದಿಯ ಕಟ್ಟಡವಿಯಲ್ಲಿ ಸೀರ್ – ಹೇನಿಗನ್ನವಿಲ್ಲ!
ಬಿರುಸು ಹಕಳಿಗೆಟ್ಟಿರುವ ಮೈಯು! ಜಲ ಸ್ನೇಹವಂತು ಇಲ್ಲ.

ಉಸಿರ ಡೊಂಬನೋಡಾಡುತಿದ್ದ ಎದೆ – ಬಾಯ್ಗೆ ಲಾಳಿಯಂತೆ
ಜೀವವಿತ್ತು ನನ್ನಾಣೆ ನನ್ನ ಮಾತನ್ನು ನಂಬು ಮತ್ತೆ!

ಜೀವ ತುಂಬಿದೊಲು ಕಲ್ಲಿಗೊಮ್ಮೆ ಹುಚ್ಚೆದ್ದು ಯಾಕೊ – ಎಂತೊ –
ಅವನೆದ್ದು ಕುಳಿತ ಎಲ್ಲಿದ್ದಿತೇನೊ ಚೈತನ್ಯ ಮತ್ತೆ ಬಂತೊ!

ಸತ್ತ ಕಣ್ಣುಗುಡ್ಡಿಯಲು ಕೂಡ ನೂರ್ ಸೂರ್ಯರೊಮ್ಮೆ ಹೊಳೆಯೆ
ಚಿಮ್ಮಿ ಬಂತು ಎಲ್ಲಿಂದೊ ಕಾಂತಿ! ಎನೆ ಯಾವ ರುದ್ರನಿವಗೆ?

ಗಗನದಗಲ ಕಣ್ಣುಗಳ ತರೆ ಬ್ರಹ್ಮಾಂಡ ನುಂಗುವಂತೆ
ತಪ್ತ ಹೃದಯದಿಂ ಕುದಿವ ಉಸಿರು ಹೊರಬಂದಿತಂಬಿನಂತೆ!
ಮಾತಾಡಲೆಳಸೆ ಧ್ವನಿ ಇಲ್ಲದಾಯ್ತು; ಹಿಸುಕಿತೊ ಕುತ್ತು ಕತ್ತು!
ಹರಿವಾಗ ತಂತಿ ಅಬ್ಬರಿಸುವಂತೆ ಕೊನೆಯುಸಿರು ಹೊರಗೆ ಬಂತು!

ದೇಹ ಸೀಮೆಯನು ದಾಟಿ ಜೀವ ಯಮನಡಿಗೆ ಬಾಗುತಿತ್ತು
ಅವನ ತಪ್ತ ಎದೆಯುಸಿರು ಗಗನ ಗಂಡೆದೆಯ ಸೀಳುತಿತ್ತು!
ನೂರು ನೆರಳುಗಳು ಕೂಗಿ ಕುಣಿದವೋ ಕೈಯ ಕೈಯೊಳಿರಿಸಿ
ಭೂತ ಸಭೆ ಕರೆದು ಹಬ್ಬ ಮಾಡಿದುವು ತಮ್ಮ ಭಾಗ್ಯ ಮೆರೆಸಿ.

* * *

ಪರಿಚಿತರೆ? ಸ್ನೇಹಿತರೆ? ಒಬ್ಬರಿದ್ದರೇ ಬಾಯ್ಗೆ ತೊಟಕು ನೀರ-
ಬಿಡಲಿಕ್ಕೆ? ಕಣ್ಣುಹನಿ – ಅದಕು ಕೂಡ ಬರಗಾಲ! ವಿಧಿಯು ಕ್ರೂರ!
ಬದುಕಿನೆಲ್ಲ ಸಿಹಿಯುಂಡನೇನು? – ಛೀ ಎಳೆವಯಸ್ಸು ಪಾಪ!
ಪ್ರೇಮಪ್ರೀತಿಗಳ ಕಂಡನೇನು? – ಬರಿ ನಟನೆ ಮೋಸಕೂಪ!

ಒಣಗುತಿತ್ತು ಗಿಡ – ತೊಡಕು ನೀರು ಸಹ ಯಾರು ಹನಿಸಲಿಲ್ಲ!
ಸತ್ತಮೇಲೆ ಕಣ್ಣೀರ ಸುರಿಸದರು ‘ವಿಧಿಯ ಆಟವೆಲ್ಲ!’