ಕರ್ನಾಟಕದ ಸಾಹಿತ್ಯಾಸಕ್ತರ ಹಾಗೂ ವಿಚಾರವಂತರ ಮನಸ್ಸಿನಲ್ಲಿ ಮಹತ್ವದ ಸಾಂಸ್ಕೃತಿಕ ನೆನಪಾಗಿ ಮತ್ತು ಕನ್ನಡದ ಮೂಲಕ ಭಾರತೀಯ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಶ್ರೇಷ್ಠ ಲೇಖಕರಲ್ಲಿ ಒಬ್ಬರಾಗಿ ದಾಖಲಾಗಿರುವ ಶಿವರಾಮ ಕಾರಂತರು ಹುಟ್ಟಿ, ಬೆಳೆದು ಅರಳಿಕೊಂಡದ್ದು ಬೆಟ್ಟ ಕಡಲುಗಳ ನಡುವಣ ದಕ್ಷಿಣ ಕನ್ನಡ ಜಿಲ್ಲೆಯ ಪರಿಸರದಲ್ಲಿ. ಒಂದೆಡೆ ಶ್ರೇಣಿ ಶ್ರೇಣಿಗಳಾಗಿ ವ್ಯಾಪಿಸಿಕೊಂಡ ಸಹ್ಯಾದ್ರಿ, ಪರ್ವತಗಳು, ಮತ್ತೊಂದೆಡೆ ತರಂಗ ತರಂಗವಾಗಿ ಹಾಸಿಕೊಂಡ ಕಡಲು. ಈ ಎರಡರ ನಡುವೆ ಹುಟ್ಟಿದ ಚೈತನ್ಯದಂಥ ಶಿವರಾಮ ಕಾರಂತರ ಬದುಕಿನಲ್ಲಿ ಬೆಟ್ಟಗಳ ದಿಟ್ಟತನವೂ, ಕಡಲಿನ ನಿರಂತರ ಕ್ರಿಯಾಶೀಲತೆಯೂ ಮೇಳವಿಸಿಕೊಂಡಿವೆ ಅಂದರೆ ಉತ್ಪ್ರೇಕ್ಷೆಯ ಮಾತಲ್ಲ. ಇಂಥ ಒಂದು ಮನೋಧರ್ಮದ ಕಾರಂತರು ತಮ್ಮ ಪ್ರಯೋಗಶೀಲ ಪ್ರತಿಭೆಯ ಮೂಲಕ ಅನಾವರಣಗೊಳಿಸಿದ ಅನುಭವ ಪ್ರಪಂಚದ ವಿಸ್ತಾರ ವೈವಿಧ್ಯಗಳು ಇಂದಿಗೂ ಬೆರಗು ಹುಟ್ಟಿಸುವಂತಿವೆ. ವಾಸ್ತವವಾಗಿ ಕಾರಂತರ ಸಾಧನೆಗಳದ್ದೇ ಒಂದು ಪ್ರಪಂಚ. ಅವರಿಗೆ ಅರುವತ್ತು ವರ್ಷ ತುಂಬಿದಾಗ ಉಡುಪಿಯ ಸಾಹಿತ್ಯಾಭಿ- ಮಾನಿಗಳು ಅವರಿಗೆ ಅರ್ಪಿಸಿದ ಅಭಿನಂದನ ಗ್ರಂಥದ ಹೆಸರೇ ಕಾರಂತ ಪ್ರಪಂಚ. ‘ನಾವು ಕಾಣುವ ಈ ಬಹಿರಂಗ ಪ್ರಪಂಚ ಎಷ್ಟು ಬಗೆಯ ವೈವಿಧ್ಯ ಮತ್ತು ವಿಸ್ಮಯಗಳಿಂದ ಕೂಡಿದೆಯೋ ಅಷ್ಟೇ ವೈವಿಧ್ಯ ಮತ್ತು ವಿಸ್ಮಯಗಳಿಂದ ಕೂಡಿದೆ ಅವರ ಸಾಹಿತ್ಯ ಪ್ರಪಂಚವೂ. ಅವರೇ ಮಕ್ಕಳಿಗಾಗಿ ಕನ್ನಡದಲ್ಲಿ ಮೊಟ್ಟಮೊದಲು ಸಿದ್ಧಪಡಿಸಿದ ‘ಬಾಲಪ್ರಪಂಚ’ ಮತ್ತು ಆನಂತರ ಸಿದ್ಧಪಡಿಸಿದ ‘ವಿಜ್ಞಾನ ಪ್ರಪಂಚ’ ಇವುಗಳು ಕನ್ನಡದಲ್ಲಿ ಕಾರಂತರು ಕೈಗೊಂಡ ಏಕಾಂಗ ಸಾಹಸದ ಅದ್ಭುತಗಳು.

‘ಬಾಲಪ್ರಪಂಚ’ಕ್ಕೂ ನನ್ನ ಸಾಹಿತ್ಯ ನಿರ್ಮಿತಿಗೂ ಒಂದಷ್ಟು ಸಂಬಂಧವಿದೆ. ಯಾಕೆಂದರೆ ಕುವೆಂಪು ಕವಿತೆ ಮತ್ತು ಕಾರಂತರ ‘ಬಾಲ ಪ್ರಪಂಚ’ ಈ ಎರಡೂ ನನ್ನ ಸಾಹಿತ್ಯಾಸಕ್ತಿ ಮತ್ತು ಸಾಹಿತ್ಯ ನಿರ್ಮಿತಿಯ ಹಿಂದಿನ ಮುಖ್ಯ ಪ್ರೇರಣೆಗಳಾಗಿವೆ. ನನ್ನ ಮಿಡಲ್ ಸ್ಕೂಲಿನ ದಿನಗಳಲ್ಲಿ ಕುವೆಂಪು ಅವರ ಕವಿತೆ ನನ್ನೊಳಗಿನ ‘ಕವಿ’ಯನ್ನು ತಟ್ಟಿ ಎಚ್ಚರಿಸುತ್ತಿದ್ದರೆ, ಕಾರಂತರ ‘ಬಾಲ ಪ್ರಪಂಚ’ ನನ್ನನ್ನು ಈ ಬಹಿರಂಗ ಜಗತ್ತಿನ ವಾಸ್ತವಗಳ ಹಾಗೂ ವಿಸ್ಮಯಗಳ ಕಡೆಗೆ ನನ್ನ ಗಮನವನ್ನು ಸೆಳೆಯುತ್ತ ನನ್ನ ವಾಸ್ತವ ಪ್ರಜ್ಞೆ ಹಾಗೂ ವೈಚಾರಿಕತೆಯನ್ನು ಎಚ್ಚರಗೊಳಿಸಿತು. ಈ ಅರ್ಥದಲ್ಲಿ ಕುವೆಂಪು ಮತ್ತು ಕಾರಂತರಿಬ್ಬರೂ ನನ್ನ ಪಾಲಿಗೆ ಈ ಶತಮಾನದ ಮಹತ್ವದ ಬರೆಹಗಾರರಾಗಿದ್ದಾರೆ. ಅಷ್ಟೇ ಅಲ್ಲದೆ, ಈ ದೇಶದ ಚರಿತ್ರೆ ಹಾಗೂ ಸಂಸ್ಕೃತಿಯನ್ನು ಅತ್ಯಂತ ಆರೋಗ್ಯಪೂರ್ಣವಾದ ಚರ್ಚೆಗೆ ಗುರಿಪಡಿಸಿದ ವಿಚಾರವಂತರಾಗಿದ್ದಾರೆ. ಅದರಲ್ಲೂ ಶಿವರಾಮ ಕಾರಂತರು ನಮ್ಮ ಕಾಲದ ನಿಜವಾದ ವಾಸ್ತವವಾದಿ ಚಿಂತಕರಾಗಿದ್ದಾರೆ. ಅವರ ಪಾಲಿಗೆ ನಾವು ಕಾಣುವ ಈ ಬದುಕು ಮುಖ್ಯ; ಈ ಬದುಕನ್ನು ನಿಯಂತ್ರಿಸುವ ಅಪೌರುಷೇಯವಾದ ಅಥವಾ ಆಧ್ಯಾತ್ಮಿಕವಾದ, ದೇವರೋ ಮತ್ತೊಂದೋ,  ಮುಖ್ಯವೇ ಅಲ್ಲ. ಆದ ಕಾರಣವೆ ಅವರು ಮನುಷ್ಯನಾದವನು ತನ್ನ ಬದುಕಿನ ಅರ್ಥವನ್ನು ಕಣ್ಣೆದುರು ಕಾಣುವ ಈ ಜಗತ್ತಿನಿಂದಲೇ ಪಡೆದುಕೊಳ್ಳಬೇಕು ಎಂದು ನಂಬಿದವರು. ಅವರು ಬರೆದ ‘ಬಾಳ್ವೆಯೇ ಬೆಳಕು’ ಎಂಬ ಕೃತಿ ಅವರ ನಿಲುವನ್ನು ಸ್ಪಷ್ಟಪಡಿಸುವ ವೈಚಾರಿಕತೆಯಿಂದ ಕೂಡಿದೆ. ‘ಬಾಳ್ವೆಯೆ ಬೆಳಕು’ ಅನ್ನುವುದೇ ಕಾರಂತರ ಜೀವನದ ಸಿದ್ಧಾಂತವಾಗಿದೆ. ಒಂದು ರೀತಿಯಲ್ಲಿ ಭಗವಾನ್ ಬುದ್ಧನ ಹಾಗೆ, ಕಾರಂತರು ಕಾಣುವ ಈ ಜಗತ್ತೆ ಮನುಷ್ಯನ ಬದುಕಿನ ಅರ್ಥವಂತಿಕೆಗೆ ಮೊದಲ ನೆಲೆ ಎಂದು ನಂಬಿದವರು.

ಇದರಿಂದಾಗಿಯೆ ಕಾರಂತರು ಪರಂಪರಾಗತವಾದ ನಂಬಿಕೆಗಳಿಗೆ ಜೋತುಬೀಳುವ, ಮತ್ತು ಅಧ್ಯಾತ್ಮದ ಹೆಸರಿನಲ್ಲಿ ಈ ಬದುಕಿನಿಂದ ವಿಮುಖವಾಗುವ ಪ್ರವೃತ್ತಿಗಳನ್ನು ತಿರಸ್ಕಾರದಿಂದ ನೋಡುತ್ತಾರೆ. ಇದು ಮುಖ್ಯವಾಗಿ ಮನುಷ್ಯನಾದವನು ಪರಾವಲಂಬಿಯಾಗದೆ, ತನ್ನ ಬದುಕಿಗೆ ತಾನೇ ಜವಾಬ್ದಾರನಾಗಬೇಕೆಂಬ ನಿಲುವಿಗೆ ಸಂಬಂಧಿಸಿದ್ದು. ಹಾಗೆ ನೋಡಿದರೆ ಕಾರಂತರು ತಮ್ಮ ಬದುಕು ಬರೆಹಗಳ ಮೂಲಕ ಪ್ರತಿಪಾದಿಸಿದ್ದು ಈ ‘ಸ್ವಾವಲಂಬನೆ’ ಎಂಬ ಮೌಲ್ಯವನ್ನು. ಅವರು ‘ಆಳಿದ ಮೇಲೆ’ ಎಂಬ ಕಾದಂಬರಿಯಲ್ಲಿ ಒಂದೆಡೆ ಪ್ರಸ್ತಾಪಿಸುವಂತೆ ‘ಮನುಷ್ಯನಾದವನು ತಾನು ಸಮಾಜದಿಂದ ಪಡೆದುದಕ್ಕಿಂತ, ತಾನು ಕೊಟ್ಟುದ್ದೆ ಮಿಗಿಲಾಗಿರಬೇಕು’ ಅನ್ನುವುದು ಅವರ ನಿಲುವು. ಇದು ಸಾಧ್ಯವಾಗುವುದು ಮನುಷ್ಯ ಅನ್ಯರ ಹಂಗಿಗೆ ಒಳಗಾಗದೆ ತಾನು ಸ್ವಾವಲಂಬಿಯಾದಾಗ ಮಾತ್ರ. ಹಾಗೆ ಸ್ವಾವಲಂಬನೆಯನ್ನು ಸಾಧಿಸಬೇಕಾದರೆ ತನ್ನ ಆತ್ಮ ಗೌರವದ ಬಗ್ಗೆ ವಿಶ್ವಾಸ ಬೇಕು; ಅದಕ್ಕಿಂತ ಮಿಗಿಲಾಗಿ ಎಲ್ಲ ದಾಕ್ಷಿಣ್ಯಗಳನ್ನೂ  ಮೀರುವ ದಿಟ್ಟತನ ಬೇಕು. ಆದ ಕಾರಣವೆ ಈ ಬರೆಹದ ಪ್ರಾರಂಭದಲ್ಲಿ ಹೇಳಿದ್ದು, ಕಾರಂತರಲ್ಲಿ ಬೆಟ್ಟಗಳ ದಿಟ್ಟತನವಿದೆ ಎಂದು. ಅವರ ಕಾದಂಬರಿಯ ಬಹುತೇಕ ಮಹಿಳೆಯರು, ಈ ಸ್ವಾವಲಂಬನೆಯ ಪ್ರತೀಕಗಳಾಗಿದ್ದಾರೆ.

ಕಾರಂತರ ಬರೆಹದ ಮತ್ತೊಂದು ಲಕ್ಷಣವೆಂದರೆ ಅವರ ನಿರಂತರ ಕ್ರಿಯಾಶೀಲತೆ, ಕಡಲಿಗೆ ಇರುವಂಥ ನಿರಂತರ ಕ್ರಿಯಾಶೀಲತೆ. ಮಕ್ಕಳಿಂದ ಹಿಡಿದು ಅತ್ಯಂತ ಪ್ರೌಢರವರೆಗೂ ಅವರವರಿಗೆ ಸಲ್ಲುವ ಸಾಹಿತ್ಯ ನಿರ್ಮಿತಿಯಿದೆ ಕಾರಂತರಲ್ಲಿ. ಕಾವ್ಯವೊಂದನ್ನು ಹೊರತುಪಡಿಸಿ ಇನ್ನುಳಿದ ಎಲ್ಲ ಸಾಹಿತ್ಯ ಪ್ರಕಾರಗಳಲ್ಲೂ ಕೈಯಾಡಿಸಿದವರು ಕಾರಂತರು. ಬಾಲಸಾಹಿತ್ಯ- ಪತ್ರಿಕೋದ್ಯಮ-ನಾಟಕ- ಚಲನಚಿತ್ರ- ಯಕ್ಷಗಾನ-ಕತೆ, ಕಾದಂಬರಿ, ನಾಟಕ, ಚಿತ್ರ-ಪ್ರವಾಸಕಥನ, ಆತ್ಮಕಥೆ ಇತ್ಯಾದಿ ಹಲವು ಹತ್ತು ಕ್ಷೇತ್ರಗಳಲ್ಲಿ ಅವರು ತಮ್ಮನ್ನು ಅಂಕಿತಗೊಳಿಸಿಕೊಂಡಿದ್ದಾರೆ. ಅದೊಂದು ರೀತಿಯಲ್ಲಿ ‘ಹುಚ್ಚು ಮನಸ್ಸಿನ ಹತ್ತು ಮುಖಗಳು.’ ಕೇವಲ ಹತ್ತು ಮುಖಗಳಲ್ಲ; ಅಸಂಖ್ಯ ಮುಖಗಳು ಎಂದರೂ ಸಲ್ಲುತ್ತದೆ. ಕನ್ನಡದ ಇತರ ಸಾಹಿತಿಗಳು ಕೇವಲ ಸಾಹಿತ್ಯಕ್ಕಷ್ಟೆ ಸೀಮಿತಗೊಂಡರೂ, ಕಾರಂತರು ಸಾಹಿತ್ಯದಾಚೆಯ ವಿವಿಧ ಕಲಾಕ್ಷೇತ್ರಗಳಲ್ಲಿ ತಮ್ಮನ್ನು ವಿಸ್ತರಿಸಿಕೊಂಡವರು. ಕೈಯಲ್ಲಿ ಕುಂಚ ಹಿಡಿದು ಚಿತ್ರ ಬಿಡಿಸಿದವರು; ಕಾಲಿಗೆ ಗೆಜ್ಜೆ ಕಟ್ಟಿಕೊಂಡು, ಮುಖಕ್ಕೆ ಬಣ್ಣ ಬಳಿದುಕೊಂಡು ಚಂಡೆ ಮದ್ದಳೆಯ ನಾದಕ್ಕೆ ಕುಣಿದವರು. ಯಕ್ಷಗಾನ ಎಂಬ ಕಲಾಪ್ರಕಾರವನ್ನು ಜಗತ್ತಿಗೆ ಪರಿಚಯ ಮಾಡಿಕೊಟ್ಟವರು. ಕೊನೆಯ ಉಸಿರಿರುವ ತನಕವೂ ನಿರಂತರ ಕ್ರಿಯಾಶೀಲವಾಗಿ ಬದುಕಿದವರು.

ಕೇವಲ ಸಾಹಿತ್ಯ-ಕಲೆಗಳಿಗೆ ಮಾತ್ರವಲ್ಲ, ಈ ಸಂದರ್ಭದ ಭಾರತದ ವಿವಿಧ ವಿದ್ಯಮಾನಗಳಿಗೆ ಕಾರಂತರಂತೆ ಸ್ಪಂದಿಸಿದವರು ತೀರಾ ವಿರಳವೆಂದೇ ಹೇಳಬೇಕು. ಭಾರತದ ಭ್ರಷ್ಠ ರಾಜಕಾರಣವನ್ನು ಖಂಡಿಸಿದ ಕಾರಂತರು ತಾವೇ ರಾಜಕೀಯಕ್ಕೆ ಇಳಿದು, ಚುನಾವಣೆಗೂ ನಿಲ್ಲುವ ಕಾಳಜಿಗಳನ್ನು ಪ್ರಕಟಿಸಿದರು (ಆದರೆ ಚುನಾವಣೆಯಲ್ಲಿ ಅವರು ಗೆಲ್ಲಲಿಲ್ಲ ಅನ್ನುವುದು ಬೇರೆಯ ಮಾತು). ಪರಿಸರ ನಾಶದ ವಿರುದ್ಧವಾಗಿ ದನಿಯೆತ್ತಿ ಪ್ರತಿಭಟನೆ ಮಾಡಿದರು. ಒಟ್ಟಾರೆಯಾಗಿ ನಮ್ಮ ಸಮಕಾಲೀನ ಸಂದರ್ಭದ ಎಚ್ಚರದ ಗಂಟೆಯಂತೆ ವರ್ತಿಸಿದವರು ಕಾರಂತರು. ಒಬ್ಬ ಸೃಜನಶೀಲ ಬರೆಹಗಾರ, ನಿಜವಾಗಿಯೂ ಸೃಜನಶೀಲವಾಗಿ ಬದುಕುವುದು ಹೇಗೆ ಅನ್ನುವುದಕ್ಕೆ ಕಾರಂತರು ಅತ್ಯುತ್ತಮ ನಿದರ್ಶನವಾಗಿದ್ದಾರೆ. ಇಂಥವರು ಎಲ್ಲೋ ಯುಗಕ್ಕೊಮ್ಮೆ ಸಂಭವಿಸುವ ಆಶ್ಚರ್ಯಗಳು ಎನ್ನಬಹುದು. ಕಾರಂತರ ನಿಧನದಿಂದ ಇಂಥದೊಂದು ಸೃಜನಶೀಲ ಪರಂಪರೆಯ ಮುಕ್ತಾಯದ ಶೂನ್ಯದೊಳಗೆ ನಾವು ನಿಂತಿದ್ದೇವೆ-ಇಂಥವರು ಮತ್ತೆ ಬಂದಾರೆಯೇ ಎಂದು ಕಾಯುತ್ತ.

ಚದುರಿದ ಚಿಂತನೆಗಳು : ೨೦೦೦