ಶತಮಾನದ ವಿಜ್ಞಾನವು ನಮ್ಮ ಬದುಕಿನ ಹೊರ ರೂಪವನ್ನು ಮಾರ್ಪಡಿಸುವುದರೊಂದಿಗೆ ನಮ್ಮ ಆಲೋಚನಾ ಕ್ರಮಕ್ಕೆ ಕೂಡ ಹೊಸ ತಿರುವನ್ನು ತಂದುಕೊಟ್ಟಿದೆ.

ಈ ಶತಮಾನದ ಮಹಾ ಸಂಶೋಧನೆಗಳ ಬಗೆ ಬರೆಯುವುದು – ಅದೂ ಒಂದು ಬೀಸಿನಲ್ಲಿ ಅತ್ಯಂತ ತ್ರಾಸದಾಯಕ ಕೆಲಸ. ಏಕೆಂದರೆ ಕಳೆದ ಸಹಸ್ರಾರು ವರ್ಷಗಳ ಹಿಂದಿನಿಂದ ಈ ಶತಮಾನದ ಪ್ರಾರಂಭದವರೆಗೆ ಮನುಕುಲ ಮಾಡಿರುವ ಸಂಶೋಧನೆಗಳಲ್ಲಿ ಸಾವಿರಾರು ಪಟ್ಟು ಹೆಚ್ಚು ಸಂಶೋಧನೆಗಳು ಕಳೆದ ಕೇವಲ ಒಂದು ನೂರು ವರ್ಷಗಳಲ್ಲಿ ಆಗಿವೆ. ಸಂಶೋಧನೆಗಳ ಈ ಮಹಾಪೂರದಲ್ಲಿ ಮಹಾ ಸಂಶೋಧನೆಗಳನ್ನು ಹೆಕ್ಕಿ ತೆಗೆಯುವುದು ಕಷ್ಟದ ಕೆಲಸವೇ. ಜೊತೆಗೆ ಯಾವುದು ಮಹಾ ಸಂಶೋಧನೆ ಎಂಬುದೂ ಸಾಪೇಕ್ಷವೇ – ಐನ್‌ಸ್ಟೈನರ ಸಿದ್ಧಾಂತದ ಪ್ರಕಾರ. ಯಾವ ಸಂಶೋಧನೆ ಮನುಕುಲದ ಬದುಕಿನೊಂದಿಗೆ ಬೆಸೆದುಕೊಂಡಿದೆಯೋ, ಜನಜೀವನವನ್ನು ಗಾಢವಾಗಿ ಪ್ರಭಾವಿಸಿದೆಯೋ, ಬದುಕಿಗೊಂದು ಹೊಸ ದೃಷ್ಟಿಕೋನವನ್ನು ನೀಡಿದೆಯೋ ಅಂಥವನ್ನು ನಾನಿಲ್ಲಿ ಮಹಾ ಸಂಶೋಧನೆಗಳೆಂದು ಪರಿಗಣಿಸಿದ್ದೇನೆ.

ಆರೋಗ್ಯಆಯುಷ್ಯ

ಮನುಷ್ಯನಿಗೆ ಆರೋಗ್ಯ ಮತ್ತು ಆಯುಷ್ಯ ಮುಖ್ಯ. ಇವೆರಡೂ ಇದ್ದಲ್ಲಿ ಮಾತ್ರ ಉಳಿದೆಲ್ಲ ಸುಖವನ್ನು ಅವನು ಅನುಭವಿಸಬಲ್ಲ. ಇಲ್ಲವಾದರೆ ಬೇರೆಲ್ಲವೂ ವ್ಯರ್ಥ. ಸ್ವರ್ಗವೂ ನರಕವೆ.

ಒಂದು ಕಾಲವಿತ್ತು. ಟೈಫಾಯಿಡ್, ನ್ಯುಮೋನಿಯಾ, ಕ್ಷಯ ಮುಂತಾದ ರೋಗಗಳು ಬಂದರೆ ಜನಗಳು ಹುಳುಗಳಂತೆ ಸಾಯುತ್ತಿದ್ದರು. ಆ ಕಾಯಿಲೆಗಳು ಬಂದರೆ ರೋಗಿಯ ಕಡೆಯವರಷ್ಟೆ ಅಲ್ಲದೆ ವೈದ್ಯರೂ ಕೈಚೆಲ್ಲಿ ಕೂರುತ್ತಿದ್ದರು – ಸಾವಿನ ನಿರೀಕ್ಷೆಯಲ್ಲಿ. ಆದರೆ ಈಗ ಈ ಶತಮಾನದಲ್ಲಿ ಪರಿಸ್ಥಿತಿ ಹಾಗಿಲ್ಲ. ಇಂದು ಲಭ್ಯವಿರುವ ಅನೇಕ ಔಷಧಗಳು ರೋಗಿಗಳನ್ನು ಸಾವಿನ ದವಡೆಯಿಂದ ಹೊರಗೆಳೆದು ಬದುಕಿಸಬಲ್ಲವು. ಹೀಗಾಗಿ ಇಂದು ಜನರ ಆರೋಗ್ಯ ಹೆಚ್ಚಿದೆ. ಮರಣದ ಪ್ರಮಾಣ ಕಡಿಮೆಯಾಗಿದೆ. ಅದೇ ಕಾಲಕ್ಕೆ ಮನುಷ್ಯನ ಜೀವಿತಾವಧಿ ದ್ವಗುಣಗೊಂಡಿದೆ.

ಇಂದು ಮಾರುಕಟ್ಟೆಯಲ್ಲಿ ಸುಮಾರು ೭೫,೦೦೦ ವಿವಿಧ ಔಷಧಿಗಳ ಸಂತೆಯೇ ಇದೆ. ಇವುಗಳಲ್ಲಿ ಅತ್ಯಂತ ಮಹತ್ವದ ಔಷಧಿ ಪೆನಿಸಿಲಿನ್.

ವೈದ್ಯಕೀಯ ಕ್ಷೇತ್ರದಲ್ಲಿ ದೊಡ್ಡ ಕ್ರಾಂತಿಯನ್ನೆ ಉಂಟಿಮಾಡಿದ ಇದರ ಶೋಧವಾದದ್ದು ಒಂದು ‘ಆಕಸ್ಮಿಕ’ದಿಂದ ೧೯೨೬ರಲ್ಲಿ. ಪ್ರಯೋಗ ತಳಿಗೆಯಲ್ಲಿ ಬೆಳೆದಿದ್ದ ಪೆನಿಸಿಲಿಯಂ ಬೂಷ್ಟಿಗೆ ರೋಗಕಾರಕವಾದ ಸೂಕ್ಷ್ಮಜೀವಾಣುಗಳನ್ನು ಕೊಲ್ಲುವ ಶಕ್ತಿ ಇರುವುದನ್ನು ಕಂಡ ಅಲೆಗ್ಸಾಂಡರ್ ಫ್ಲೆಮಿಂಗ್ ಪ್ರತಿಜೈವಿಕ (ಆಂಟಿಬಯೋಟಿಕ್)ಗಳ ಹೊಸ ಶಕೆಯನ್ನೆ ಪ್ರಾರಂಭಿಸಿದ. ಸೂಕ್ಷ್ಮಜೀವಾಣುಗಳಿಂದ ಬರುವ ಹೆಚ್ಚು ಕಮ್ಮಿ ಎಲ್ಲ ಕಾಯಿಲೆಗಳಿಗೂ ಒಂದಲ್ಲ ಒಂದು ಪ್ರತಿಜೈವಿಕ ಔಷಧಿಗಳನ್ನು ಸಂಶೋಧಿಸಲಾಗಿದೆ.

ಇದೇ ಶತಮಾನದಲ್ಲೆ ಇನ್ನೂ ಅನೇಕ ಕಾಯಿಲೆಗಳನ್ನು ಗುಣಪಡಿಸಬಲ್ಲ ಸಲ್ಫಾಮದ್ದುಗಳು (೧೯೩೬), ಸಹಿಮೂತ್ರ ರೋಗಕ್ಕೆ ಇನಸುಲಿನ್ (೧೯೨೧), ಪೋಲಿಯೋ ಲಸಿಕೆ (೧೯೫೪) ಮುಂತಾದವು ಮನುಷ್ಯನ ಬತ್ತಳಿಕೆ ಸೇರಿವೆ.

ಈ ಸಹಸ್ರಮಾನದ ಮಹಾ ಸಂಶೋಧನೆ ಎನ್ನಬಹುದಾದ ವಿದ್ಯುತ್ ಒದಗಿಸುತ್ತಿದ್ದ ಶುದ್ಧ ಮತ್ತು ಪ್ರಖರ ಬೆಳಕು ಹಾಗೂ ಯಂತ್ರ ಶಕ್ತಿಯ ಬೆಂಬಲದೊಡನೆ ಮನುಷ್ಯನ ಸೌಖ್ಯವನ್ನು ಹೆಚ್ಚಿಸುವ ಅನೇಕ ಮಹಾ ಸಂಶೋಧನೆಗಳು ಒಂದೊಂದಾಗಿ ಅನಾವರಣಗೊಂಡಿವೆ. ಇವುಗಳಲ್ಲಿ ಯಾವುದು ದೊಡ್ಡದು ಯಾವುದು ಚಿಕ್ಕದು ಎಂಬುದನ್ನು ತೀರ್ಮಾನಿಸುವುದು ತುಂಬಾ ಕಷ್ಟ. ಬಹುಶಃ ಮನುಷ್ಯ ಮನುಷ್ಯರನ್ನ ಹತ್ತಿರ ತಂದದ್ದು, ಅವನ ಬದುಕಿನ ಶೈಲಿಯನ್ನು ಸ್ಪಷ್ಟವಾಗಿ ಮರು ರೂಪಿಸಿದ್ದು ಸಂಪರ್ಕ ಮತ್ತು ಸಾರಿಗೆ.

ಕುಳಿತಲ್ಲಿ ಮಾಹಿತಿ

ಮಾನು ಮತ್ತು ಲಿಪಿ ಮನುಕುಲದ ಬದುಕಿನಲ್ಲಿ ಕ್ರಾಂತಿಯನ್ನು ಉಂಟುಮಾಡಿದ ಶೋಧಗಳು. ಇವು ಅವನ ಜ್ಞಾನ ವಿಸ್ತರಣೆಯ ಪ್ರಕ್ರಿಯೆಯನ್ನು ತೀವ್ರಗೊಳಿಸಿದವು. ಮಾತು ಮತ್ತು ಲಿಪಿಯನ್ನು ಸುತ್ತೆಲ್ಲ ಹರಡಿ ಕಾಲ ಮತ್ತು ದೂರವನ್ನು ಗೆಲ್ಲಲು ಸಂಪರ್ಕ ಸಾಧನಗಳು ಸಹಕಾರಿಯಾದವು.

ಮೇ ೨೪, ೧೮೪೪. ‘What hath god wrought’ ಎನ್ನುವ ಮೊತ್ತಮೊದಲ ‘ಏಕಮುಖೀ’ ಸಂದೇಶವನ್ನು ಸ್ಯಾಮುಯೆಲ್ ಮೋರ‍್ಸ್ ತಂತಿಯ ಮೂಲಕ ರವಾನಿಸಿ ದೂರಸಂಪರ್ಕ ವ್ಯವಸ್ಥೆಯ ಬೆಳವಣಿಗೆಗೆ ನಾಂದಿ ಹಾಡಿದ. ಅಲ್ಲಿಂದ ಮುಂದೆ ಸುಮಾರು ಮೂವತ್ತು ವರ್ಷಗಳ ನಂತರ ೧೮೭೬ರಲ್ಲಿ ಗ್ರಹಾಂಬೆಲ್ ದೂರವಾಣಿಯನ್ನು ಕಂಡುಹಿಡಿದು ‘ದ್ವಿಮುಖಿ’ ಸಂಭಾಷಣೆಯನ್ನು ಸಾಧ್ಯವಾಗಿಸಿದ.

ಮೇಲಿನೆರಡೂ ವ್ಯವಸ್ಥೆಗಳು ಕೆಲಸ ಮಾಡಲು ತಂತಿಗಳು ಅಗತ್ಯ. ಆದರೆ ಎಲ್ಲೆಡೆಯೂ ಕಂಬಗಳನ್ನು ನೆಟ್ಟು ತಂತಿಗಳನ್ನು ಎಳೆಯುವುದು ಸಾಧ್ಯವಿಲ್ಲ. ಅದಕ್ಕೆ ನಿಸ್ತಂತು ಸಂಪರ್ಕವೊಂದೇ ಪರಿಹಾರವಾಗಿತ್ತು. ‘ತಂತಿ ಇಲ್ಲದೆ ಸಂದೇಶ ರವಾನೆ ಸಾಧ್ಯ’ ಎಂದ ಗುಗ್ಲಿಯೊ ಮಾರ್ಕೊನಿಯನ್ನು ಜನ ಹುಚ್ಚನೆಂದು ಜರೆದರು! ವಿಜ್ಞಾನದಲ್ಲಿ ಇಂಥ ಎಷ್ಟೋ ಹುಚ್ಚುಗಳೇ ಮಹಾ ಸಂಶೋಧನೆಗಳನ್ನು ಸಾಕಾರಗೊಳಿಸಿವೆ.

೧೮೯೫ರಲ್ಲಿ ಮಾರ್ಕೊನಿ ಮೊದಲ ಬಾರಿಗೆ ನಿಸ್ತಂತು ಸಂಪರ್ಕ ಸಾಧಿಸಿಯೇ ಬಿಟ್ಟ. ಒಂದು ಮೈಲಿಗಿಂತ ಹೆಚ್ಚು ದೂರಕ್ಕೆ ರೆಡಿಯೋ ಸಂಜ್ಞೆಗಳನ್ನು ರವಾನಿಸಿ ರೇಡಿಯೋ ಯುಗವನ್ನು ಪ್ರಾರಂಭಿಸಿದ. ಬುನಾದಿ ಬಿದ್ದದ್ದೆ ತಡ, ೧೯೨೦ರ ಹೊತ್ತಿಗೆ ಪೂರ್ಣಪ್ರಮಾಣದ ರೇಡಿಯೋ ಕಾರ್ಯಾಚರಣೆ ಅಮೆರಿಕದಲ್ಲಿ ಪ್ರಾರಂಭವಾಗಿ ಅಲ್ಪಕಾಲದಲ್ಲೆ ಪ್ರಪಂಚಾದ್ಯಂತ ಆವರಿಸಿಕೊಂಡು ಬಿಟ್ಟಿತು. ರೇಡಿಯೋ ಜಗತ್ತಿಗೇ ಕಿವಿ ನೀಡಿತು.

ಕಿವಿಯ ಬಯಕೆ ತೀರಿದ ಮೇಲೆ ಕಣ್ಣಿನ ಆಸೆ ತಣಿಯಬೇಡವೆ? ಕಿವಿ ಮತ್ತು ಕಣ್ಣುಗಳೆರಡರ ಮೂಲಕವೂ ಜನರನ್ನು ತಲುಪಬಲ್ಲ ದೂರದರ್ಶನ ಜಾನ್ ಲೋಗಿ ಬೇರ‍್ಡ್‌ನಿಂದ ೧೯೨೬ರಲ್ಲಿ ಕಂಡುಹಿಡಿಯಲ್ಪಟ್ಟಿತು. ಕಲವೊಂದು ವಸ್ತುಗಳ ಮೇಲೆ ಬೆಳಕನ್ನು ಹಾಯಿಸಿದಾಗ ಅವು ಇಲೆಕ್ಟ್ರಾನುಗಳನ್ನು ಉತ್ಸರ್ಜಿಸುತ್ತವೆ. ಅಲ್ಲದೆ ಬೆಳಕಿನ ತೀಕ್ಷ್ಣತೆ ಬದಲಾದಂತೆ ಸೆಲೆನಿಯಂನಂಥ ವಸ್ತುಗಳ ವಿದ್ಯುತ್ ರೋಧ ಬದಲಾಗುತ್ತದೆ. ಹೀಗಾಗಿ ಬೆಳಕಿನ ಏರಿಳಿತವನ್ನು ವಿದ್ಯುತ್ ಏರಿಳಿತಗಳಾಗಿ ಪರಿವರ್ತಿಸುವುದ ಸಾಧ್ಯ. ಅವುಗಳನ್ನು ದೂರದೂರಕ್ಕೆ ರವಾನಿಸಿ ದೂರದರ್ಶನ ಸೆಟ್‌ಗಳಲ್ಲಿ ಅವುಗಳನ್ನು ಪುನಃ ಬೆಳಕಿನ ಏರಿಳಿತಗಳಾಗಿ ಮರು ಪರಿವರ್ತಿಸಿ ನೆರಳು-ಬೆಳಕಿನ ಚಿತ್ರಗಳನ್ನ ಮೂಡಿಸುವ ತಂತ್ರವನ್ನಿಲ್ಲಿ ಬಳಸಲಾಗಿದೆ.

ಈವತ್ತು ಎಲ್ಲಾ e-All

ಭಾಷೆಯಿಲ್ಲದ ಜಗತ್ತನ್ನು ಹೇಗೆ ನಾವು ಕಲ್ಪಿಸಿಕೊಳ್ಳಲಾರೆವೊ ಹಾಗೆಯೇ ಅಂಕೆ-ಸಂಖ್ಯೆಗಳಿಲ್ಲದ ಜಗತ್ತನ್ನೂ ಕಲ್ಪಸಿಕೊಳ್ಳಲಾರೆವು. ಗಣನೆ ಮನುಷ್ಯ ಬದುಕಿನ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ಇದಕ್ಕೆ ನೆರುವು ಒದಗಿಸಿದ ಮೊದಲ ಸಾಧನ ಅಬಾಕಸ್ – ತಂತಿಗಳ ಮೂಲಕ ಓಡಾಡುವ ಮಣಿಗಳ ಒಂದು ವ್ಯವಸ್ಥೆ.

೧೬೪೨ರಲ್ಲಿ ಫ್ರೆಂಚ್ ಗಣಿತಜ್ಞ ಬ್ಲೈಸ್ ಪ್ಯಾಸ್ಕಲ್ ಸಂಖ್ಯೆಗಳನ್ನು ಕೂಡುವ ಯಂತ್ರವೊಂದನ್ನು ಕಂಡುಹಿಡಿದ. ಇದರಲ್ಲಿ ಅವನು ಹತ್ತು ಹಲ್ಲುಗಳಿರುವ ಚಕ್ರಗಳ ವ್ಯವಸ್ಥೆಯೊಂದನ್ನು ಬಳಸಿದ್ದ. ಅದರಂತೆಯೆ ೧೮೦೦ರಿಂದೀಚೆ ಅನೇಕ ಅಸಮರ್ಪಕ ಯಂತ್ರಗಳು ಉಪಜ್ಞೆಗೊಂಡು ಜನರಿಂದ ತಿರಸ್ಕೃತವಾದವು.

೧೮೩೨ರಲ್ಲಿ ಇಂಗ್ಲೆಂಡಿನ ಚಾರ್ಲ್ಸ್ಸ್ ಬ್ಯಾಬೇಜ್ ಒಂದು ‘ಅನಲಿಟಿಕಲ್ ಎಂಜಿನ್’ಅನ್ನು ಕಂಡುಹಿಡಿದ. ಇದೇ ಮೊದಲ ಸ್ವಯಂಚಾಲಿತ ಸಾಮಾನ್ಯ ಉದ್ದೇಶದ ಕಂಪ್ಯೂಟರ್. ಈವತ್ತಿನ ಮಾಹಿತ ತಂತ್ರಜ್ಞಾನದ ಕ್ರ್ರಾಂತಿಗೆ ಬೀಜ ನಟ್ಟ ಉಪಜ್ಞೆ.

ಮುಂದಿನ ಯಶಸ್ವಿ ಸ್ವಯಂಚಾಲಿತ ಕಂಪ್ಯೂಟರ್ ನಿರ್ಮಾಣವಾಗಲು ಒಂದು ಶತಮಾನದ ಕಾಲವೇ ಬೇಕಾಯಿತು. ಹಾರ್ವರ್ಡ್ ವಿಶ್ವವಿದ್ಯಾಲಯದ ಹೋವಾರ್ಡ್ ಐಕನ್ ೧೯೪೪ರಲ್ಲಿ ಅದರ ನಿರ್ಮಾಣವನ್ನು ಪೂರ್ಣಗೊಳಿಸಿದ. ಐಕನ್‌ರ ಕ್ಯಾಲ್ಕುಲೇಟರ್‌ನಲ್ಲಿ ಚಕ್ರಗಳು, ಅವುಗಳನ್ನು ತಿರುಗಿಸಲು ವಿದ್ಯುತ್ ಮೋಟಾರುಗಳು, ವಿದ್ಯುತ್ ಕಾಂತಗಳು ಮತ್ತಿನೇನೋ ಭಾಗಗಳಿದ್ದವು. ಒಟ್ಟು ೭,೫೦,೦೦೦!

ನಂತರ ಇಲೆಕ್ಟ್ರಾನಿಕ್ ಡಿಜಿಟಲ್ ಕಂಪ್ಯೂಟರ್ ಬಂತು. ಇಲೆಕ್ಟ್ರಿಕಲ್ ಇಂಜಿನಿಯರ್ ಜೇ. ಪೆಸ್‌ಪರ್ ಎಕರ್ಟ್ ಮತ್ತು ಭೌತವಿಜ್ಞಾನಿ ಜಾನ್ ಮಾಚ್ಲಿ ೧೯೪೬ರಲ್ಲಿ ಪೂರ್ಣಗೊಳಿಸಿದ ಈ ಯಂತ್ರದಲ್ಲಿ ಸುಮಾರು ೧೮,೦೦೦ ವಾಲ್ವ್‌ಗಳು, ೧೫೦೦ ಸ್ವಿಚ್‌ಗಳು, ಸಹಸ್ರಾರು ಇತರೆ ಘಟಕಗಳಿದ್ದವು. ಇದನ್ನು ನಡೆಸಲು ೧೫೦,೦೦೦ ವಾಟ್ ವಿದ್ಯುತ್ ಬೇಕಾಗುತ್ತಿತ್ತು! ಕಾರ್ಡ್‌ಗಳ ಮೇಲೆ ಪಂಚ್ ಮಾಡಿದ ಸಂಕೇತ ರಂಧ್ರಗಳು ವಿದ್ಯುತ್ ಸ್ಪಂದನವನ್ನು ಉಂಟುಮಾಡುತ್ತಿದ್ದವು. ತದನಂತರ ಇವುಗಳನ್ನು ಇಲೆಕ್ಟ್ರಾನಿಕ್ ಮಂಡಲಗಳಿಗೆ ಉಣಿಸಿದಾಗ ಲೆಕ್ಕಾಚಾರ ನೆಡೆಯುತ್ತಿತ್ತು.

ಆಧುನಿಕ ಕಂಪ್ಯೂಟರ್‌ಗಳು ಕೋಳಿ ಮೊಟ್ಟೆ ಗಾತ್ರದ ಗಾಜಿನ ವಾಲ್ವ್‌ಗಳ ಬದಲಿಗೆ ಹೆಸರುಕಾಳು ಗಾತ್ರದ, ಹೆಚ್ಚು ವಿಶ್ವಾಸಾರ್ಹವಾದ, ದಕ್ಷವಾದ, ಅಗ್ಗವಾದ ಮತ್ತು ಕಡಿಮೆ ವಿದ್ಯುತ್ತನ್ನು ಬೇಡುವ ಘನಸ್ಥಿತಿ ಸಾಧನಗಳನ್ನು ಬಳಸುತ್ತಿವೆ. ಇದರಿಂದ ಕಂಪ್ಯೂಟರ್‌ಗಳ ಬೆಲೆ-ಬಾಳಿಕೆ-ಗಾತ್ರ-ವಿದ್ಯುತ್ ಖರ್ಚ್ಚು – ಈ ನಾಲ್ಕರಲ್ಲೂ ಮಹತ್ತರ ಸುಧಾರಣೆಯಾಗಿ ಸಾಮಾನ್ಯರೂ ಬಳಸಲು ಸಾಧ್ಯವಾಗಿದೆ.

ಮಹಾ ಸಂಶೋಧನೆಗಳ ಇನ್ನೊಂದು ಮುಖ

ಮಹಾ ಸಂಶೋಧನೆಗಳ ‘ಅದ್ಭುತ’ ಕೊಡುಗೆಗಳಾಗಿ ಬಂದಿರುವ ಅನೇಕಾನೇಕ ಕೃತಕ ವಸ್ತುಗಳಿಂದ ಇಂದು ಮನುಷ್ಯ ಪ್ರಕೃತಿಗೆ ವಿಮುಖನಾಗುತ್ತಿದ್ದಾನೆ. ಈವತ್ತು ಪ್ರಕೃತಿ ದತ್ತವಾದ ವಸ್ತುಗಳ ಬಳಕೆ ಹೆಚ್ಚು ಕಮ್ಮಿ ಇಲ್ಲವಾಗಿದೆ. ಎಲ್ಲೆಡೆಯೂ ರಾಸಾಯನಿಕಗಳಿಂದ ತಯಾರಿಸಲಾದ ಕೃತಕ ವಸ್ತುಗಳೇ ತುಂಬಿವೆ.

ಈ ಎಲ್ಲ ಕೃತಕ ವಸ್ತುಗಳ ಬಳಕೆ ಮೇಲ್ನೋಟಕ್ಕೆ ಚಂದವಾಗಿ ಕಾಣುತ್ತಿದ್ದರೂ ನಮ್ಮೊಳಗಿನ ನೆಣವನ್ನೆ ಅವು ಮೌನವಾಗಿ ತಿನ್ನುತ್ತಿವೆ – ನಮ್ಮ ಆರೋಗ್ಯ ಮತ್ತು ನಮ್ಮ ಪರಿಸರವನ್ನು ಕೆಡಿಸುವುದರ ಮೂಲಕ. ಈ ಎಲ್ಲ ಮಹಾ ಸಂಶೋಧನೆಗಳ ನೆರವಿನಿಂದ ನಾವಿಂದು ನಮ್ಮ ಇತಿಹಾಸದಲ್ಲಿ ಹಿಂದೆಂದೂ ಇಲ್ಲದಷ್ಟು ರೀತಿಯಲ್ಲಿ ವ್ರಣಗಳು, ಗಾಯಗಳು, ಅವ್ಯವಸ್ಥೆ ಮತ್ತು ಸಾವಿನಿಂದ ಕೂಡಿದ ಪರಿಸರವನ್ನು ಸೃಷ್ಟಿಸುತ್ತಿದ್ದೇವೆ.

ಮಹಾ ಸಂಶೋಧನೆಗೋಳಿಂದ ಇಷ್ಟೆಲ್ಲಾ ಜನೋಪಯೋಗಿ ಮತ್ತು ಜನಕಲ್ಯಾಣಕಾರಕ ಸಾಧನಗಳು ಮನುಕುಲಕ್ಕೆ ದಕ್ಕಿದ್ದರೂ ಇಂದು ಪ್ರಪಂಚಾದ್ಯಂತ ವಿಲಿಯಾಂತರ ಮಕ್ಕಳಿಗೆ ಅಕ್ಷರ ಜ್ಞಾನವಿಲ್ಲ, ಕೋಟ್ಯಂತರ ಜನರಿಗೆ ತಿನ್ನಲು ಆಹಾರ, ಕುಡಿಯಲು ಶುದ್ಧ ನೀರು, ವಾಸಿಸಲು ಮನೆ, ತೊಡಲು ಬಟ್ಟೆ ಇಲ್ಲ. ಈ ಮಧ್ಯೆ ಯುದ್ಧ ಹಾಗೂ ಪ್ರಕೃತಿ ವಿಕೋಪಗಳಿಂದ ಉಂಟಾಗುತ್ತಿರುವ ಸಾವು ನೋವುಗಳಿಗೆ ಲೆಕ್ಕವಿಲ್ಲ. ಈವತ್ತಿಗೂ ಡಾ. ಎಸ್. ರಾಧಾಕೃಷ್ಣನ್ ಅವರ ಮಾತು ಸುಳ್ಳಾಗದಿರುವುದು ಈ ಶತಮಾನದ ಮಹಾ ದುರಂತ. ಮನುಷ್ಯ ಗಾಳಿಯಲ್ಲಿ ಪಕ್ಷಿಯಂತೆ ಹಾರಾಡುವುದನ್ನು ಕಲಿತಿದ್ದಾನೆ. ನೀರಿನಲ್ಲಿ ಮೀನಿನಂತೆ ಈಜುವುದನ್ನು ಕಲಿತಿದ್ದಾನೆ. ಆದರೆ ನೆಲದ ಮೇಲೆ ಮನುಷ್ಯನಂತೆ ಬದುಕುವುದನ್ನು ಕಲಿಯಲಿಲ್ಲ.

ಕೇವಲ ಕೂಡಿ ಕಳೆಯಲು ನೆರವಾಗುವ ತಯಂತ್ರವೊಂದನ್ನು ಬೆನ್ನು ಹತ್ತ್ತಿದ ವಿಜ್ಞಾನಿಗಳು ಕೊನೆಗೆ ತಲುಪಿದ್ದು ಕಂಪ್ಯೂಟರ್ ಮಾಯಾಲೋಕವನ್ನು. ಕಂಪ್ಯೂಟರ್ ಈವತ್ತು ಏನೇನು ಮಾಡಬಲ್ಲದು ಎಂಬ ಪ್ರಶ್ನೆಗೆ ಉತ್ತರಿಸುವುದಕ್ಕಿಂತ ಏನೇನು ಮಾಡಲಾರದು ಎಂಬ ಪ್ರಶ್ನೆಗೆ ಉತ್ತರಿಸುವುದು ಸುಲಭ. ಅದು ಸ್ವಂತ ಯೋಚಿಸುವುದೊಂದನ್ನು ಬಿಟ್ಟು ಬೇರೆಲ್ಲವನ್ನೂ ಮಾಡುತ್ತದೆ!

ಇಂದು ಸಾಮಾನ್ಯ ಜನ ಕೂಡ ಅರಿವಿದ್ದೋ ಇಲ್ಲದೆಯೋ, ಪ್ರಿಯವೋ ಅಪ್ರಿಯವೋ, ಕಂಪ್ಯೂಟರ್ ಜಾಲದೊಳಗೆ ಬಂದುಬಿಟ್ಟಿದ್ದಾರೆ. ಹೋಟೆಲ್‌ನಲ್ಲಿ ಪಡೆಯುವ ಸಾಮಾನ್ಯ ಬಿಲ್‌ನಿಂದ ಹಿಡಿದು ಅಂತರಿಕ್ಷ ನೌಕೆಯನ್ನು ನಿಯತಂಯತ್ರಿಸುವವರೆಗೆ ಕಂಪ್ಯೂಟರ್ ಬೆಳೆದು ನಿಂತಿದೆ. ಇಂಟರ್‌ನೆಟ್‌ನಿಂದಾಗಿ ಅದು ದೇಶಾಂತರಗಳ ನಡುವಿನ ವ್ಯವಹಾರವನ್ನು ಬೆರಳತುದಿಗೆ ತಂದಿದೆ. ಒಂದೇ ಮಾತಲ್ಲಿ ಜಗತ್ತು ಈವತ್ತು e-All ಕಡೆಗೆ ಧಾವಿಸುವಂತಾಗಿದೆ.

ಮಿನಿಮಿನಿಕ್ರಾಂತಿ

ಈ ಮಧ್ಯೆ ಮೌನ ಕ್ರಾಂತಿಯೊಂದು ನಡೆಯಿತು. ಬಹುಶಃ ಇದರ ಗೈರ ಹಾಜರಿಯಲ್ಲಿ ಜಗತ್ತಿನ ಮುಖ ಬೇರೆಯೇ ಥರ ಇರುತ್ತಿತ್ತು. ಅದು ಇಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತಂದ ಪಾರ್ಶ್ವವಾಹಕ ವಸ್ತುಗಳ ಶೋಧ.

೧೯೪೭ರಲ್ಲಾದ ಪಾರ್ಶ್ವವಾಹಕಗಳ ಶೋಧ ಮತ್ತು ೧೯೪೮ರಲ್ಲಿ ಜಾನ್ ಬಾರ್ಡೀನ್, ವಾಲ್ಟರ್ ಬ್ರೈಟನ್ ಹಾಗು ವಿಲಿಯಂ ಶಾಕ್ಲಿಯವರಿಂದ ಆದ ಟ್ರಾನ್ಸಿಸ್ಟರ್‌ನ ಶೊಧ ಘನಸ್ಥಿತಿ ಇಲೆಕ್ಟ್ರಾನಿಕ್ಸ್ ಎಂಬ ಹೊಸ ಶಾಖೆಯನ್ನು ಪ್ರಾರಂಭಿಸಿತು. ಇದು ಈವತ್ತು ಇಲೆಕ್ಟ್ರಾನಿಕ್, ದ್ಯುತಿ ಮತ್ತು ಶಕ್ತಿ ವ್ಯವಸ್ಥೆಗಳಲ್ಲಾಗುತ್ತಿರುವ ಕ್ರಾಂತಿಗೆ ಬುನಾದಿ ಹಾಕಿದೆ. ಚಿಕ್ಕದಾಗಿದ್ದರೂ ಘನಸ್ಥಿತಿ ಪಾರ್ಶ್ವವಾಹಕಗಳು ಎಲ್ಲಾ ಇಲೆಕ್ಟ್ರಾನಿಕ್ ಸಾಧನಗಳಲ್ಲಿ ಅನಿವಾರ್ಯ ಘಟಕಗಳಾಗಿವೆ. ಹೃದಯದ ಪೇಸರ್‌ನಿಂದ ಹಿಡಿದು ದೈತ್ಯ ಡಿಜಿಟಲ್ ಕಂಪ್ಯೂಟರ್‌ವರೆಗೆ ವಿವಿಧ ರೂಪದ ಟ್ರಾನ್ಸಿಸ್ಟರ್‌ಗಳು ಇಂದು ಬಳಕೆಯಾಗುತ್ತಿವೆ. ಹೀಗಾಗಿ ಎಲ್ಲ ಇಲೆಕ್ಟ್ರಾನಿಕ್ ಸಾಧನಗಳ ಗಾತ್ರ ಕುಗ್ಗಿದೆ; ಬೆಲೆಗಳು ಇಳಿದಿವೆ.

ಇದು ಮಿನಿಮಿನಿ ಯುಗ. ‘ಕಿರಿದಾದಷ್ಟು ಸೌಂದರ್ಯ ಹಿರಿದು. ಉಪಯುಕ್ತತೆ ಹೆಚ್ಚು’ ಎಂದು ಸ್ವೀಕರಿಸುವ ಪ್ರಜ್ಞೆ ಈ ಶತಮಾನದಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿವೆ ಪಾರ್ಶ್ವವಾಹಕಗಳು. ಅಂಗೈ ಅಗಲದ ರೇಡಿಯೋಗಳು, ಕಿಸೆಯಲ್ಲಿ ಇಟ್ಟುಕೊಳ್ಳಬಹುದಾದ ಕ್ಯಾಲ್ಕುಲೇಟರ್‌ಗಳು, ಲ್ಯಾಪ್ ಟಾಪ್ ಕಂಪ್ಯೂಟರ್‌ಗಳು, ಯಾರಿಗೂ ಕಾಣಿಸದಷ್ಟು ಚಿಕ್ಕದಾದ, ಭಾರದ ಅನುಭವವಾಗದಷ್ಟು ಹಗುರವಾದ, ಕರ್ಣ ರಂಧ್ರದಲ್ಲಿ ಗಪ್ಪೆಂದು ಕೂರುವ ಶ್ರವಣ ಸಾಧನಗಳು… ಇವೆಲ್ಲ ಪಾರ್ಶ್ವವಾಕಗಳ ಕೊಡುಗೆ. ಪಾರ್ಶ್ವವಾಕಗಳ ಗೈರುಹಾಜರಿಯಲ್ಲಿ ಕಿವುಡರು ಹಾರ್ಮೋನಿಯಂ ಗಾತ್ರದ ಶ್ರವಣ ಸಾಧನಗಳನ್ನು ಬೆನ್ನ ಮೇಲೆ ಹೊತ್ತು ತಿರುಗಬೇಕಾಗುತ್ತಿತ್ತು!

ಕಾಲಿಗೆ ಚಕ್ರ ಪಕ್ಕೆಗೆ ರೆಕ್ಕೆ

ಇಂದು ಮನುಷ್ಯ ಎಲ್ಲಿಗೂ ಪ್ರಯಾಣಿಸದೆ ಸಮೂಹ ಮಾದ್ಯಮಗಳ ನೆರವಿನಿಂದ ಮನೆಯಲ್ಲೆ ಕುಳಿತು ದೇಶವಿದೇಶಗಳ ವಿವಿಧ ಸ್ಥಳಗಳನ್ನು ಸಂದಶಿರ್ಸಿಸಬಹುದು. ಅಲ್ಲಿ ನಡೆಯುವ ವಿದ್ಯಮಾನಗನ್ನು ನೋಡಬಹುದು. ಮನರಂಜನೆ, ಶಿಕ್ಷಣ, ಪಡೆಯಬಹುದು. ಸಮೂಹ ಮಾಧ್ಯಮಗಳು ಇಡೀ ಭೂಮಂಡಲವನ್ನು ಹಿಡಿಯೊಳಕ್ಕೆ ತಂದಿವೆ.

ಆದರೂ ನಾವು ಕೆಲವೊಮ್ಮೆ ಪ್ರಯಾಣಿಸಬೇಕಾಗುತ್ತದೆ. ಕೆಲಸಕ್ಕೆ, ವ್ಯಾಪಾರಕ್ಕೆ, ಪ್ರೀತಿ ಪಾತ್ರರ ಸಂಗಕ್ಕೆ ಇತ್ಯಾದಿ. ಅದಕ್ಕೆ ಸಾರಿಗೆ ವ್ಯವಸ್ಥೆ ಅತ್ಯಗತ್ಯ.

ಹಿಂದೊಂದು ಕಾಲದಲ್ಲಿ ತೀರ್ಥಯಾತ್ರೆಗೆ ಹೋಗುವವರು ಮನೆಯಲ್ಲಿ ಹೇಳಿ ಹೋಗುತ್ತಿದ್ದರು. ಹಿಂದಿರುಗುವ ಖಾತ್ರಿ ಇರುತ್ತಿರಲಿಲ್ಲ. ಅವರ ಪ್ರಯಾಣ ಅಷ್ಟೊಂದು ದೀರ್ಘವಾಗಿರುತ್ತಿತ್ತು; ಅಪಾಯಕಾರಿಯಾಗಿರುತ್ತಿತ್ತು; ತ್ರಾಸದಾಯಕವಾಗಿರುತ್ತಿತ್ತು. ಆದರೆ ಇಂದು ದಿನವೊಂದಕ್ಕೆ ಸಾವಿರಾರು ಕಿಲೋಮೀಟರ್ ಆರಾಮವಾಗಿ ಸುತ್ತುವುದು, ಟನ್ನುಗಟ್ಟಲೆ ಅಗತ್ಯ ವಸ್ತುಗಳನ್ನು ಶ್ರಮವಿಲ್ಲದೆ ಸಾಗಿಸುವುದು ಸಾಧ್ಯವಾಗಿದೆ.

ಸಾರಿಗೆಗೆ ಸಂಬಂಧಿಸಿದಂತೆ ಎಲ್ಲ ಕಾಲಕ್ಕೂ ಅತ್ಯಂತ ಮೂಲಭೂತ ಎನ್ನಬಹುದಾದ ಉಪಜ್ಞೆ ಚಕ್ರ. ಮನುಷ್ಯ ದೂರವನ್ನು ಜಯಿಸಲು ಒದಗಿಬಂದ ಚಕ್ರ ಅನಾಮಧೇಯನೊಬ್ಬನಿಂದ ಉಪಜ್ಞೆಗೊಂಡಿತು – ಸುಮಾರು ೫೦೦೦ ವರ್ಷಗಳ ಹಿಂದೆ. ಚಕ್ರ ಸಾರಿಗೆಯಲ್ಲಷ್ಟೆ ಅಲ್ಲ, ಈವತ್ತಿನ ಅನೇಕ ಯಂತ್ರಗಳ ಚಾಲನೆಗೂ ಮೂಲ ಪ್ರೇರಕ ಸಾಧನವಾಗಿದೆ.

ಅನೇಕ ಪರಿಷ್ಕಾರಗಳನ್ನು ಕಂಡ ಚಕ್ರಕ್ಕೆ ಜಾನ್ ಬಾಯ್ಡ್ ಡನ್‌ಲಪ್ ೧೮೮೮ರಲ್ಲಿ ಗಾಳಿ ತುಂಬಿದ ಟೈರನ್ನು ತೊಡೆಸಿದ ಮೇಲೆ ಅದಕ್ಕೆ ನಿಜವಾದ ವೇಗ ಮತ್ತು ಸೌಖ್ಯ ಲೌಭಿಸಿತು.

ಈ ಮಧ್ಯೆ ೧೮ನೇ ಶಮಾನದಲ್ಲಿ ಜೇಮ್ಸ್ ವಾಟ್ ಉಗಿಯಂತ್ರವನ್ನು ಕಂಡುಹಿಡಿದ ಮೇಲೆ ಸಾರಿಗೆ ಕ್ಷೇತ್ರದಲ್ಲಿ ಅಭೂತಪೂರ್ವ ಬೆಳವಣಿಗೆಗಳಾದವು. ಉಗಿ ಶಕ್ತಿಯಿಂದ ಚಲಿಸುವ ರೈಲು ಮತ್ತು ಜಹಜುಗಳು ಹಾಗು ಡೀಸೆಲನ್ನು ಇಂಧನವಾಗಿ ಬಳಸುವ ಅಂತರ್ದಹನ ಇಂಜಿನ್ನುಗಳನ್ನು ಅಳವಡಿಸಿದ ಮೋಟಾರು ವಾಹನಗಳು ಬಂದವು.

ಈ ಶತಮಾನದಲ್ಲಿ ನೆಲ-ಜಲದ ಮೇಲಿನ ಸಾರಿಗೆ ವ್ಯವಸ್ಥೆಯಲ್ಲಿ ಮಹಾ ಎನ್ನಬಹುದಾದ ಸಂಶೋಧನೆಗಳಾವುವೂ ನಡೆದಿಲ್ಲ. ಆಗಿರುವುದೆಲ್ಲ ಜೇಕ್ಸ್ ವಾಟ್‌ನ ಮೂಲ ಸಂಧಶೋಧನೆಯ ವಿಸ್ತರಣೆಯಷ್ಟೆ. ಹಾ! ಒಂದು ಅದ್ಭುತ ನಡೆದಿದೆ. ಗಾಳಿಯಲ್ಲಿ ಮನುಷ್ಯನ ಹಾರಾಟ! ವಿಮಾನಗಳ ಶೋಧ. ನೆಲ-ಜಲದ ಮೇಲಿನ ವಾಹನಗಳು ವಿಧಿಸಿದ್ದ ವೇಗದ ಮಿತಿಯನ್ನು ಧ್ವಂಸ ಮಾಡಿತು. ಇಂದು ಭೂ ತಾಣಗಳ ನಡುವಿನ ಪ್ರಯಾಣಕ್ಕಿರುವ ಅತ್ಯಂತ ವೇಗದ ವಾಹನ ವಿಮಾನವಾಗಿದೆ.

‘ಗಾಳಿಗಿಂತ ಭಾರವಾದ’ ಪಕ್ಷಿಗಳು ಮತ್ತು ಪಟಗಳು ಗಾಳಿಯಲ್ಲಿ ಮೇಲೆ ಮೇಲೆ ತೇಲಾಡುವುದನ್ನು ನೋಡಿದ ಮನುಷ್ಯ ತಾನೂ ಅವುಗಳಂತೆ ಹಾರಾಡುವ ಕನಸು ಕಂಡದ್ದು ಈ ಶತಮಾನದ ಅದ್ಭುತಗಳಲ್ಲೊಂದು. ಹಲವರನ್ನು ಬಲಿತೆಗೆದುಕೊಂಡ ಈ ಹಾರಾಟದ ಕನಸು, ಹಲವು ಹಂತಗಳನ್ನು ದಾಟಿ, ೧೯೦೩ರಲ್ಲಿ ನನಸಾಯಿತು. ಆ ವರ್ಷದ ಡಿಸೆಂಬರ್ ತಿಂಗಳ ಹದಿನೇಳರಂದು ಅಮೆರಿಕದ ವಿಲ್ಬರ್ ಹಾಗೂ ಆರ್ವಿಲ್ ರೈಟ್ ಸೋದರರು ಮೊದಲ ಹಾರಾಟವನ್ನು ಪ್ರದರ್ಶಿಸಿ ವಿಮಾನಯಾನದ ಹೊಸ ಯುಗವನ್ನು ಪ್ರಾರಂಭಿಸಿದರು.

ರಭಸದಿಂದ ಹಿನ್ನುಗ್ಗುವ ಅನಿಲಗಳ ನೂಕು ಬಲದಿಂದ ವಿಮಾನ ಗಾಳಿಯಲ್ಲಿ ಮುಂಚಲಿಸುತ್ತದೆ. ಈ ಮೂಲ ತತ್ವವನ್ನು ಆಧರಿಸಿ ನಿರ್ಮಿಸಲಾಗಿರುವ ಕೆಲವು ವಿಮಾನಗಳು ಇಂದು ಶಬ್ದದ ವೇಗವನ್ನು ಹಿಂದಕ್ಕೆ ಹಾಕಿವೆ.

ಸರ್ವಂ ಪ್ಲಾಸ್ಟಿಕ್ ಮಯಂ!

ಪ್ಲಾಸ್ಟಿಕ್ ವಸ್ತುಗಳು ಇಂದು ಎಷ್ಟು ಸಾಮಾನ್ಯವಾಗಿವೆ ಎಂದರೆ ನಾವು ಅವುಗಳ ರಾಶಿಯ ಮಧ್ಯೆ ಬದುಕುತ್ತಿದ್ದರೂ ಅವುಗಳನ್ನು ಗಮನಕ್ಕೆ ತೆಗೆದುಕೊಳ್ಳುತ್ತಿಲ್ಲ. ಅದರ ಪ್ರಭಾವ ಈವತ್ತು ಎಷ್ಟಾಗಿದೆ ಎಂದರೆ ನೀವು ಪ್ಲಾಸ್ಟಿಕ್ ವಸ್ತುಗಳನ್ನು ಸಂಪೂರ್ಣವಾಗಿ ವರ್ಜಿಸಿ ಬದುಕುತ್ತೇನೆಂದು ಪಣತೊಟ್ಟರೆ ಸೋಲುವುದು ಖಂಡಿತ. ಈವತ್ತು ಪ್ಲಾಸ್ಟಿಕ್ಕನ್ನು ಒಂದಲ್ಲ ಒಂದು ರೂಪದಲ್ಲಿ ಉಪಯೋಗಿಸದಿರುವ ಕೈಗಾರಿಕೆಗಳೇ ಇಲ್ಲ.

ಮೊದಲು ಬಿಲಿಯರ್ಡ್ ಚೆಂಡುಗಳನ್ನು ಆನೆಯ ದಂತದಿಂದ ತಯಾರಿಸುತ್ತಿದ್ದರು. ಅದು ತುಂಬಾ ದುಬಾರಿಯಾಗಿರುತ್ತಿತ್ತು. ಅದಕ್ಕೆ ಬದಲಿಯಾಗಿ ಉಪಯೋಗಿಸಬಹುದಾದ ಯಾವುದಾದರೊಂದು ಸೂಕ್ತ ವಸ್ತುವನ್ನು ಕಂಡುಹಿಡಿದವರಿಗೆ ೧೦,೦೦೦ ಡಾಲರ್ ಬಹುಮಾನ ಕೊಡುವುದಾಗಿ ಅಮೆರಿಕ ದೇಶದ ಒಂದು ದೊಡ್ಡ ಕಂಪನಿ ೧೮೬೩ರಲ್ಲಿ ಪ್ರಕಟಿಸಿತ್ತು.

ಮುದ್ರಣಾಲಯವೊಂದರಲ್ಲಿ ಕೆಲಸ ಮಾಡುತ್ತಿದ್ದ ಜಾನ್ ವೆಸ್ಲಿ ಹ್ಯಾಟ್ ಅಚ್ಚುಮೊಳೆಗಳನ್ನು ಜೋಡಿಸುತ್ತಿದ್ದಾಗ ಆಕಸ್ಮಾತ್ ಕೈಕೊಯ್ದುಕೊಂಡ. ತತ್‌ಕ್ಷಣ ಹ್ಯಾಟ್ ಕಲೋಡಿಯನ್ ದ್ರಾವಣವನ್ನು ಗಾಯದ ಸುತ್ತ ಸವರಿದ. ಸ್ವಲ್ಪ ಹೊತ್ತಿನ ನಂತರ ಗಾಯದ ಸುತ್ತ ತೆಳುವಾದ ಪೊರೆಯೊಂದು ನಿರ್ಮಾಣವಾಯಿತು. ಇದೇ ಮೊತ್ತ ಮೊದಲ ಪ್ಲಾಸ್ಟಿಕ್.

ಕಲೋಡಿಯನ್ ಎಂಬುದು ನೈಟ್ರೋಸೆಲ್ಯುಲೋಸ್ ಪುಡಿಯನ್ನು ಮದ್ಯಸಾರ ಮತ್ತು ಈಥರ್ ದ್ರಾವಣಗಳಲ್ಲಿ ಕರಗಿಸಿದ ಪಾಕ. ಇದನ್ನು ಗಾಳಿಗೆ ತೆರೆದಿಟ್ಟರೆ ಅದರಲ್ಲಿರುವ ಈಥರ್ ಮತ್ತು ಮದ್ಯಸಾರ ಆವಿಯಾಗಿ ನೈಟ್ರೋಸೆಲ್ಯುಲೋಸ್ ಹಗುರವಾದ ಪೊರೆಯಾಗಿ ಉಳಿಯುತ್ತದೆ. ಈ ಎಳೆಯನ್ನು ಹಿಡಿದು ಮುಂದುವರಿದ ವಿಜ್ಞಾನಿಗಳು ಈ ಶತಮಾನದ ಆದಿಯಿಂದಲೇ ಮನುಷ್ಯನ ವಿವಿಧ ಅಗತ್ಯಗಳನ್ನು ಪೂರೈಸುವ ಹತ್ತಾರು ಪ್ಲಾಸ್ಟಿಕ್‌ಗಳನ್ನು ಕಂಡುಹಿಡಿದು ಸರ್ವ ಪ್ಲಾಸ್ಟಿಕ್ ಮಯಂ ಮಾಡಿಬಿಟ್ಟಿದ್ದಾರೆ.

ಕೆಲವು ಸಾವಯವ ಸಂಯುಕ್ತಗಳ ಸಣ್ಣ ಅಣುಗಳು ಪರಸ್ಪರ ಸೇರಿ ಭಾರವಾದ ಅಣುಗಳಾಗುತ್ತವೆ ಮತ್ತು ವಿಶೇಷ ಲಕ್ಷಣಗಳನ್ನು ಹೊಂದಿರುತ್ತವೆ. ಇವುಗಳಿಂದಾದ ವಸ್ತುಗಳು ಪಾಲಿಮರ‍್ಸ್. ಪ್ಲಾಸ್ಟಿಕ್ ಅಂಥ ಒಂದು ಪಾಲಿಮರ್.

ಇದೇ ತತ್ವವನ್ನು ಆಧರಿಸಿ ವಿಜ್ಞಾನಿಗಳು ಕೃತಕ ರಬ್ಬರ್ ಮತ್ತು ನೂಲನ್ನು ಕಂಡುಹಿಡಿದರು. ಇಂದು ಕೃತಕ ನೂಲು, ರಬ್ಬರ್ ಮತ್ತು ಪ್ಲಾಸ್ಟಿಕ್‌ನ ಬಳಕೆಯಿಂದಾಗಿ ಮನುಕುಲದ ಜೀವನ ಶೈಲಿ ಗಣನೀಯವಾಗಿ ಬದಲಾಗಿದೆ.

ಶತಮಾನದ ಸಿದ್ಧಾಂತ

ಡಾರ್ವಿನ್‌ರ ‘ಜೀವ ಜಾತಿಗಳ ಉಗಮ’ದ ಬಗ್ಗೆ ಥಾಮಸ್ ಹಕ್ಸ್ಲಿ ಹೀಗೆ ಹೇಳಿದ್ದಾರೆ: “(ನ್ಯೂಟನ್ನನ) ‘ಪ್ರಿನ್ಸಿಪಿಯಾ’ ಒಂದನ್ನು ಬಿಟ್ಟರೆ ಬೇರಾವ ಗ್ರಂಥವೂ ವಿಜ್ಞಾನದಲ್ಲಿ ಇಷ್ಟು ಪ್ರಬಲವಾದ ಮತ್ತು ಶೀಘ್ರವಾದ ಕ್ರಾಂತಿಯನ್ನುಂಟು ಮಾಡಿರಲಾರದು. ಅಲ್ಲದೆ ಜನಸಾಮಾನ್ಯರ ಮನೋಭಾವದ ಮೇಲೆ ಇಷ್ಟು ಪರಿಣಾಮಕಾರಿಯಾದ ಪ್ರಭಾವವನ್ನು ಬೀರಿರಲಾರದು”.

ಇದೇ ಮಾತನ್ನು ನಾವಿಂದು ಐನ್‌ಸ್ಟೈನ್‌ರ ಸಾಪೇಕ್ಷ ಸಿದ್ಧಾಂತದ ಬಗ್ಗೆ ಹೇಳಬಹುದು.

೧೯೦೫ರಲ್ಲಿ ಪ್ರಕಟವಾದ ವಿಶೇಷ ಸಾಕೇಕ್ಷ ಸಿದ್ಧಾಂತ ಮತ್ತು ೧೯೧೫ರಲ್ಲಿ ಪ್ರಕಟವಾದ ಸಾಮಾನ್ಯ ಸಾಪೇಕ್ಷ ಸಿದ್ಧಾಂತಗಳೆರಡೂ ನಾವು ಇಂದು ವಿಶವನ್ನು ನೋಡುವ ದೃಷ್ಟಿಗೊಂದು ಹೊಸ ಆಯಾಮವನ್ನೆ ನೀಡಿವೆ. ಸೃಷ್ಟಿಯಲ್ಲ್ಲಿ ಯಾವ ಅಳತೆಯೂ ನಿರಪೇಕ್ಷವಲ್ಲ. ಎಲ್ಲವೂ ಸಾಪೇಕ್ಷ ಎಂದು ಹೇಳುವ ಈ ಸಿದ್ಧಾಂತಗಳು ಹಿಂದೆ ಒಪ್ಪಿತವಾಗಿದ್ದ ಅನೇಕ ‘ಸತ್ಯ’ಗಳನ್ನು ಮರುಟಂಕಿಸಿವೆ. ಕಾಲ ಮತ್ತು ದೇಶ, ಶಕ್ತಿ ಮತ್ತು ದ್ರವ್ಯರಾಶಿ ಇವುಗಳ ಬಗ್ಗೆ ಆವರೆಗಿದ್ದ ಭಿನ್ನತೆಯ ತೆರೆಯನ್ನು ಸರಿಸಿ ಅವುಗಳು ಪರಸ್ಪರಾವಲಂಭಿಗಳು ಎಂದು ತೋರಿಸಿವೆ.  ಅಲ್ಲದೆ ಶಕ್ತಿ ಮತ್ತು ದ್ರವ್ಯರಾಶಿಯ ನಡುವಿನ ಸಂಬಂಧವನ್ನು ಈ ಶತಮಾನದ ಅತ್ಯಂತ ಸರಳ ಸುಂದರ ಹಾಗೂ ‘ಮಾರಕ’ವಾದ ಸಮೀಕರಣ E = mc2  ನಲ್ಲಿ ಬಂಧಿಸಿವೆ. ಈ ಸಮೀಕರಣ ಮುಂದೆ ಪರಮಾಣು ಶಕ್ತಿಯನ್ನು ವಿವಿಧ ಉದ್ದೇಶಗಳಿಗೆ ಬಳಸಿಕೊಳ್ಳಲು ದಾರಿತೋರಿತು.

ಪರಮಾಣುವಿನ ಪರಮ ಜ್ಞಾನ

ಪರಮಾಣುವೇ ವಸ್ತುವಿನ ಅತ್ಯಂತ ಚಿಕ್ಕ ಘಟಕ ಎಂಬ ನಂಬಿಕೆಯನ್ನು ಛಿದ್ರಗೊಳಿಸಿ, ಅದು ನಿಜಕ್ಕೂ ಇಲೆಕ್ಟ್ರಾನ್, ಪ್ರೋಟಾನ್ ಮತ್ತು ನ್ಯೂಟ್ರಾನ್ ಎಂಬ ಮೂರು ಮೂಲಕಣಗಳಿಂದಾಗಿದೆ ಎಂಬುದನ್ನು ತೋರಿಸಿದ ಹೆಗ್ಗಳಿಕೆ ಈ ಶತಮಾನದ್ದು.

ಪರಮಾಣು ರಚನೆಯ ಜ್ಞಾನ ತುಂಬಾ ಮೂಲಭೂತವಾದುದು. ಧಾತುಗಳ ರಾಸಾಯನಿಕ ಮತ್ತು ಭೌತಿಕ ಗುಣಸ್ವಭಾವಗಳನ್ನು ಅರ್ಥಮಾಡಿಕೊಳ್ಳಲು ಅವುಗಳನ್ನು ರಾಶಾಯನಿಕ ಕ್ರಿಯೆಗಳಲ್ಲಿ ತೊಡಗಿಸಿ ಬೇರೆ ಬೇರೆ ವಸ್ತುಗಳನ್ನು ಸಂಶ್ಲೇಷಿಸಲು ಮತ್ತು ಅವುಗಳನ್ನು ವಿವಿಧ ಉಪಯೋಗಗಳಿಗೆ ಒದಗುವಂತೆ ಮಾಡುವಲ್ಲಿ ಅದು ಮಹತ್ತರ ಪಾತ್ರವನ್ನು ವಹಿಸಿದೆ. ಹೊಸ ಧಾತುಗಳ ಸೃಷ್ಟಿ ಇಂದು ಸಾಧ್ಯವಾಗಿದೆ. ಸೂಕ್ಷ್ಮ ಪ್ರಪಂಚಕ್ಕೆ ತೆರೆದ ಈ ಬೆಳಕಿನ ಕಿಂಡಿ ಬೃಹತ್ ಬ್ರಹ್ಮಾಂಡದ ಅನೇಕ ಸಮಸ್ಯೆಗಳನ್ನು ಬಗೆಹರಿಸಿದೆ. ಸೂರ್ಯ ಮತ್ತು ಇತರೆ ನಕ್ಷತ್ರಗಳ ಸೃಷ್ಟಿ ಸ್ಥಿತಿ ಲಯವನ್ನು ಅರ್ಥಮಾಡಿಕೊಳ್ಳಲು ಅದು ನೆರವಾಗಿದೆ.

ಪರಮಾಣು ವಿಜ್ಞಾನದ ಕ್ಷೇತ್ರದಲ್ಲಾಗಿರುವ ಸಂಶೋಧನೆಗಳು ಅನೇಕ. ಅವುಗಳ ಪಟ್ಟಿ ತುಂಬಾ ದೊಡ್ಡದು. ಇದರಲ್ಲಿ ದುಡಿದಿರುವ ವಿಜ್ಞಾನಿಗಳ ಸಮೂಹ ಕೂಡ ತುಂಬಾ ದೊಡ್ಡದು. ಈ ಎಲ್ಲ ಸಂಶೋಧನೆಗಳನ್ನು ಆಧರಿಸಿ ಬೆಳೆದ ಆಧುನಿಕ ಭೌತವಿಜ್ಞಾನ ನಮ್ಮ ಬದುಕನ್ನು ಬದಲಿಸಿರುವ ಅನೇಕ ಸಾಧನಗಳ ಅಭಿವೃದ್ಧಿಗೆ ಕಾರಣವಾಗಿದೆ.

ಅದ್ಭುತಗಳು

ಈ ಶತಮಾನದ ಎರಡು ಅದ್ಭುತಗಳೆಂದರೆ ಅಂತರಿಕ್ಷ ಯಾನ ಮತ್ತು ಜೀನಿಯ ಶೋಧ.

ಅದ್ಭುತ ೧: ಗಾಳಿಯಲ್ಲಿ ಮೇಲೇರುವ ವಿಮಾನದ ಕನಸು ನನಸಾದ ಮೇಲೆ ವಿಜ್ಞಾನಿಗಳ ದೃಷ್ಟಿ ಗಾಳಿಯ ವಾತಾವರಣವನ್ನು ತೂರಿ ಮುಂದೆ ಹೋಯಿತು. ನೆಲದ ಹಂಗು ತೊರೆದು ಮುಗಿಲಿನಾಚೆ ನೆಗೆವ ಹಂಬಲ ತೀವ್ರವಾಯಿತು. ಗುರುತ್ವ ಶಕ್ತಿಯನ್ನು ಮೀರಿಕೊಂಡು ಅಂತರಿಕ್ಷಕ್ಕೆ ಲಗ್ಗೆಯಿಟ್ಟು ಗ್ರಹ-ಉಪಗ್ರಹಗಳಲ್ಲಿ ಸಂಚರಿಸುವ ಅತ್ಯದ್ಭುತ ಕನಸಿನ ಶಿಕಾರಿಯಾದ ವಿಜ್ಞಾನಿಗಳು ವಿಮಾನಯಾನದ ತತ್ವಗಳನ್ನಾಧರಿಸಿ ರಾಕೆಟ್ಟುಗಳನ್ನು ಕಂಡುಹಿಡಿದರು. ೧೯೩೬ರಲ್ಲಿ ಅಮೆರಿಕದ ರಾಬರ್ಟ್ ಗೊಡಾರ್ಡ್ ಮೊದಲ ರಾಕೆಟ್ಟನ್ನು ಯಶಸ್ವಿಯಾಗಿ ಅಂತರಿಕ್ಷದೆಡೆಗೆ ಉಡಾಯಿಸಿದರು. ಇದು ಮುಂದೆ ಮನುಷ್ಯ ಚಂದ್ರನನ್ನು ಮುಟ್ಟಲು ಏಣಿ ಹಾಕಿತು. ಜುಲೈ ೨೧, ೧೯೬೯ರಂದು ಅಪೊಲೊ ೧೧ರ ಗಗನಯಾನಿ ನೀಲ್ ಆರ್ಮ್‌ಸ್ಟ್ರಾಂಗ್ ಮನುಕುಲದ ಪ್ರಾತಿನಿಧಿಕ ಹೆಜ್ಜೆ ಗುರುತನ್ನು ಚಂದ್ರನ ಮೇಲ್ಮೈಯಲ್ಲಿ ಮುದ್ರಸಿ ಬಂದರು.

ಈ ಮಧ್ಯೆ ಚಂದ್ರನಿಗೆ ಮಸುಕು ಸ್ಪರ್ಧಿಯಂತೆ ಭೂಮಿಯ ಸುತ್ತಲೂ ಸುತ್ತುವ ಕೃತಕ ಉಪಗ್ರಹಗಳನ್ನು ಹಾರಿಸಲಾಯಿತು. ಇವು ಅಂತರ್‌ದೇಶೀಯ ಸಂಪರ್ಕ, ಭೂವಾತಾವರಣದ ವಿವರ ಸಂಗ್ರಹಿಸುವುದು, ಚಂಡಮಾರುತಗಳ ಪಥದ ಬಗ್ಗೆ ಮಾಹಿತಿ ನೀಡುವುದು ಇತ್ಯಾದಿ ಸೇವೆಯನ್ನು ಒದಗಿಸುತ್ತಿವೆ.

ಅದ್ಭುತ ೨: ಸಂತತಿಯಿಂದ ಸಂತತಿಗೆ ತಂದೆತಾಯಿಯರ ಗುಣಲಕ್ಷಣಗಳು ಹೇಗೆ ಸಾಗುತ್ತವೆ? ಎಂಬ ಪ್ರಶ್ನೆ ಕಳೆದ ಶತಮಾನದಲ್ಲಿ ವಿಜ್ಞಾನಿಗಳ ಕುತೂಹಲವನ್ನು ಕೆರಳಿಸಿತ್ತು. ಇದಕ್ಕೆ ಉತ್ತರಿಸ ಹೊರಟ ಆಸ್ಟ್ರಿಯದ ಕ್ರೈಸ್ತ ಸನ್ಯಾಸಿ ಗ್ರೆಗೊರ್ ಜೊಹಾನ್ ಮೆಂಡಲ್ ತಳಿ ವಿಜ್ಞಾನಕ್ಕೆ ಬುನಾದಿ ಹಾಕಿದ. ಪ್ರತಿಯೊಂದು ಜೀವಕೋಶದೊಳಗೆ ನಿಶ್ಚಿತ ಸಂಖ್ಯೆಯ ವರ್ಣತಂತುಗಳಿರುತ್ತವೆ. ಪ್ರತಿ ವರ್ಣತಂತುವೂ ಜೀನ್‌ಗಳ ಪೋಣಿಕೆಯಿಂದಾದ ಎಳೆ. ಈ ಜೀನ್‌ಗಳೆ ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಗುಣವೈಶಿಷ್ಟ್ಯಗಳನ್ನು ಸಾಗಿಸುವ ಮೂಲ ಘಟಕ. ಆನುವಂಶಿಕ ಗುಣಸಾಗಣೆಯ ಈ ಪರಿಯನ್ನು ಬೇರೆಯೆ ಮಾತುಗಳಲ್ಲಿ ಮೆಂಡಲ್ ೧೮೬೬ರಷ್ಟು ಹಿಂದೆಯೇ ಒಂದು ಲೇಖನದಲ್ಲಿ ಪ್ರಕಟಿಸಿದ್ದರು. ಆದರೆ ಆಗ ಯಾರೂ ಅದನ್ನು ಅರ್ಥಮಾಡಿಕೊಳ್ಳುವ ವ್ಯವಧಾನವನ್ನು ತೋರಲಿಲ್ಲ. ಹೀಗಾಗಿ ಅವರ ವಿಚಾರಗಳು ಪುಸ್ತಕಗಳ ಮಾಸಲು ಹಾಳೆಗಳಲ್ಲಿ ಹುದುಗಿ ಹೋಗಿದ್ದವು.

ಮತ್ತೆ ಅವು ಬೆಳಕಿಗೆ ಬಂದದ್ದು ಈ ಶತಮಾನದ ಅದೃಷ್ಟ. ೧೯೦೦ರಲ್ಲಿ ಹಾಲೆಂಡಿನ ಡಿವ್ರೈಸ್, ಜರ್ಮನಿಯ ಕಾರೆನ್ಸ್ ಮತ್ತು ಆಸ್ಟ್ರಿಯಾದ ಷರ‍್ಮಾಕರು ತಾವು ಸ್ವತಂತ್ರವಾಗಿ ಕೈಗೊಂಡ ಸಂಶೋಧನೆಗಳ ಆಧಾರದ ಮೇಲೆ ಮೆಂಡೆಲ್ಲರ ವಾದವನ್ನು ಆ ವರ್ಷ ಎತ್ತಿ ಹಿಡಿದರು. ಅಲ್ಲಿಂದ ಮುಂದೆ ತಳಿಶಾಸ್ತ್ರ ಎಲ್ಲರನ್ನು ಬೆರಗುಗೊಳಿಸುವ ರಭಸದಲ್ಲಿ ಬೆಳೆದಿದೆ.

ವರ್ಣತಂತುಗಳಲ್ಲಿ ಪ್ರೋಟೀನು ಮತ್ತು ಡಿಎನ್‌ಎಗಳೇ ಪ್ರಧಾನ. ೧೯೪೪ರಲ್ಲಿ ಅವೆರಿ ಮತ್ತು ಆತನ ಸಂಗಡಿಗರು ನಡೆಸಿದ ಪ್ರಯೋಗಗಳಿಂದ ವಂಶ ವೈಶಿಷ್ಟ್ಯವನ್ನು ರೂಪಿಸುವುದರಲ್ಲಿ ಡಿಎನ್‌ಎ ಮಹತ್ವದ  ಪಾತ್ರ ವಹಿಸುತ್ತದೆ ಎಂಬುದು ಬೆಳಕಿಗೆ ಬಂತು.

೧೮೫೩ರಲ್ಲಿ ಈ ಕ್ಷೇತ್ರದಲ್ಲಿ ಅತ್ಯಂತ ಪ್ರಮುಖವಾದ ಘಟನೆ ನಡೆಯಿತು. ವಾಟ್ಸನ್ ಮತ್ತು ಕ್ರಿಕ್ ಡಿಎನ್‌ಎಯ ಅಣು ರಚನೆಯನ್ನು ಕಂಡುಹಿಡಿದರು. ಇದರ ಪ್ರಕಾರ ಡಿಎನ್‌ಎನಲ್ಲಿ ಒಂದೇ ಅಕ್ಷದ ಮೇಲೆ ಸುತ್ತು ಬರುವ ಎರಡು ಹೆಲಿಕ್ಸ್ ಆಕೃತಿಯ ಸರಣಿಗಳಿರುತ್ತವೆ. ಒಂದರ ಪಕ್ಕ ಒಂದರಂತೆ ಇಳಿಬಿಟ್ಟ ಎರಡು ಜಡೆಪಟ್ಟಿಗಳನ್ನು ತಿರುಚಿದಂತ ಮೂರು ಆಯಾಮಗಳ ರಚನೆಯನ್ನು ಇದು ಹೋಲುತ್ತದೆ. ಈ ರಚನೆಯ ಒಂದು ವಿಶಿಷ್ಟ ಭಾಗವೇ ಜೀನ್.

ಜೀನುಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದರಿಂದ ಅನೇಕ ರೋಗಗಳಿಗೆ, ಅದರಲ್ಲೂ ಆನುವಂಶಿಕ ರೊಗಗಳಿಗೆ, ಔಷಧಗಳನ್ನು ಮತ್ತು ಚಿಕಿತ್ಸೆಯನ್ನು ಕಂಡುಹಿಡಿಯುವುದು ಸಾಧ್ಯವಾಗುತ್ತದೆ. ಏಕೆಂದರೆ ಒಂದು ವರದಿಯ ಪ್ರಕಾರ ಶೇಕಡ ಆರರಷ್ಟು ಮಕ್ಕಳು ಜೀನ್ ದೋಷದಿಂದ ಬಂದ ಕಾಯಿಲೆಗಳಿಗೆ ತುತ್ತಾಗಿರುತ್ತಾರೆ. ಈ ದೋಷಯುತ ಜೀನ್‌ಗಳನ್ನು ಸರಿಪಡಿಸುವುದರ ಮೂಲಕ ಕಾಯಿಲೆಗಳನ್ನು ಗುಣಪಡಿಸಬಹುದು.

ಜೀನುಗಳ ನಿಯಂತ್ರಣದಿಂದ ಬೇಕಾದ ಗುಣಲಕ್ಷಣವುಳ್ಳ ಸಸ್ಯ ಮತ್ತು ಪ್ರಾಣಿ ತಳಿಗಳನ್ನು ಅಭಿವೃದ್ಧಿಪಡಿಸಬಹುದು. ಈಗಾಗಲೆ ನೊಣದ ಜೀನ್‌ಗಳನ್ನು ಬದಲಿಸಿ ತಲೆಯಲ್ಲಿ ಕುಡಿ ಮೀಸೆಗೆ ಬದಲಾಗಿ ಕಾಲು ಅಂಕುರಿಸುವಂತೆ ಮಾಡಲಾಗಿದೆ. ಈಚೆಗೆ ೧೯೯೬ರಲ್ಲಿ ಡಾಲಿ ಎಂಬ ಕುರಿಯ ತದ್ರೂಪನ್ನು ಸೃಷ್ಟಿಸಿ ವಿಜ್ಞಾನಿಗಳು ಜಗತ್ತನ್ನು ಬೆರಗುಗೊಳಿಸಿದ್ದಾರೆ.

ಉದಯವಾಣಿ
೫-೧-೨೦೦೦