’ಶೋಲೆ’ ಸಿನಿಮಾ ನೋಡಿದವರಿಗೆ ರಾಮನಗರದ ಬೆಟ್ಟಗಳಲ್ಲಿ ಅಬ್ಬರಿಸಿದ ಅಮ್ಜದ್ಖಾನ್, ಕುಣಿದ ಹೇಮಾಮಾಲಿನಿಯನ್ನು ಮರೆಯಲು ಸಾಧ್ಯವೇ? ಅಂದಿನಿಂದ ಇಂದಿನವರೆಗೂ ಅವೆಲ್ಲಾ ಕಲ್ಲು ತುಂಬಿದ ಎರಡು ಬೆಟ್ಟಗಳು ಮಾತ್ರ ಎಂದು ತಿಳಿದು ಅಲ್ಲಿಗೆ ಹೋದರೆ ನಿಮಗೊಂದು ಅಚ್ಚರಿ ಕಾಣಿಸುತ್ತದೆ. ಅಲ್ಲೆಲ್ಲಾ ಬಿರುಬಿಸಿಲಿನಲ್ಲಿ ನಿಮಗೋಸ್ಕರವೇ ಎಂಬಂತೆ ತಂಪು-ಸಿಹಿ ನೀಡಲು ಸೀತಾಫಲ ವೃಕ್ಷಗಳು ಹಣ್ಣು ತುಂಬಿ ತಲೆದೂಗಿ ಕರೆಯುತ್ತವೆ.
ಹಿಂದೊಮ್ಮೆ ಮೆಹಬೂಬ ನಗರದ ಬಳಿಯಿರುವ ಪಂಪನ ಶಾಸನಗಳನ್ನು ನೋಡಲು ಬೆಟ್ಟ ಹತ್ತಿ ಚಾರಣ ನಡೆಸಿದ್ದೆವು. ದಾರಿಯುದ್ದಕ್ಕೂ ನೂರಾರು ಗಿಡಗಳು ನಮ್ಮೆಲ್ಲರ ಹಸಿವು, ಬಾಯಾರಿಕೆಯನ್ನು ಇಂಗಿಸಿದ್ದವು.
ಮತ್ತೊಮ್ಮೆ ಜಮಖಂಡಿಯ ಬಳಿ ಕಲ್ಲಳ್ಳಿಯ ಕುರುಚಲು ಕಾಡನ್ನು ಸುತ್ತಿ-ಸುತ್ತಿ ದಣಿದು ತೆರೆದ ಬಾವಿಯೊಂದು ಕಂಡಿತೆಂದು ಹತ್ತಿರ ಹೋದೆವು. ಬಾವಿಯೊಳಗೆ ನೀರಿರಲಿಲ್ಲ. ಆದರೆ ಅದರ ಸುತ್ತ ಬೆಳೆದುನಿಂತ ಸೀತಾಫಲದ ಮರಗಳಲ್ಲಿ ಕಾಯಿಗಳ ಮಹಾಪೂರ. ಅನೇಕ ರೀತಿಯ ಹಕ್ಕಿಗಳಿಗೆ ಸಮೃದ್ಧ ಆಹಾರ. ಆ ಕ್ಷಣದಲ್ಲಿ ನಮಗೂ ಹನುಮ ತಂದ ಸಂಜೀವಿನಿಯಷ್ಟೇ ಜೀವದಾಯಿನಿ ಎನಿಸಿತ್ತು.
ಇವು ಕಾಡುಮರಗಳು. ಉರಿಬಿಸಿಲಿನ ತಾಪ ತಣಿಸುವ ಫಲಗಳು. ಬರದ ಬೆಂಗಾಡು, ಕಲ್ಲು ಕಣಿವೆಗಳು, ಕುರುಚಲು ಕಾಡುಗಳು- ಹೀಗೆ ಗೊಬ್ಬರ, ನೀರು ಸಿಗದ ಜಾಗಗಳಲ್ಲೇ ಇದರ ಆವಾಸ.
ಇದರ ಜಾತಿಯ ರಾಮಫಲ, ಲಕ್ಷ್ಮಣಫಲ, ಹನುಮಂತ ಫಲಗಳೆಲ್ಲಾ ದೊಡ್ಡಮರಗಳಾಗುತ್ತವೆ. ಆದರೆ ಸೀತಾಫಲ ಮಾತ್ರ ಐದಾರು ಅಡಿ ಎತ್ತರಕ್ಕಿಂತ ಹೆಚ್ಚಿಗೆ ಬೆಳೆಯುವುದೇ ಇಲ್ಲ. ಬಿಸಿಲಿನ ಅಬ್ಬರದಲ್ಲೂ ಹಚ್ಚಹಸುರಿನ ದಟ್ಟ ಎಲೆಗಳಿಂದ ಗಿಡ ನಳನಳಿಸುತ್ತದೆ. ಮಧ್ಯೆ ಮಧ್ಯೆ ಹಸಿರು ಕಾಯಿಗಳು.
ಈ ಹಣ್ಣು ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಮೈಸೂರು, ಚಾಮರಾಜಪೇಟೆ, ಚಿತ್ರದುರ್ಗ, ತುಮಕೂರು, ಕೊಪ್ಪಳ, ರಾಯಚೂರು, ಬಳ್ಳಾರಿ, ಬಿಜಾಪುರ, ಗುಲ್ಬರ್ಗಾ ಹೀಗೆ ಬಿಸಿಲುನಾಡಿನ ಕಾಡುಬೆಳೆಯಾಗಿದೆ.
ಆಂಧ್ರದಲ್ಲಿ ’ಸೀತಾಫಲ ಮಂಡ್ರಿ’ ಎನ್ನುವ ಊರೇ ಇದೆ. ಕರ್ನೂಲಿನಲ್ಲಿ ಸೀತಾಪಲ ಮಾರುಕಟ್ಟೆಯಿದೆ. ಅಲ್ಲಿನ ರೈತರು ಕೃಷಿ ಸಹ ಮಾಡುತ್ತಾರೆ.
ಬಡವರ ಪಾಲಿನ ಅಮೃತಫಲವಿದು. ಗುಡ್ಡ, ಬೆಟ್ಟ, ಕಾಡು, ಕಣಿವೆ, ರಸ್ತೆಬದಿ, ಹಕ್ಕಲು ಬೆಂಗಾಡಿನಲ್ಲೂ ತನ್ನ ಪಾಡಿಗೆ ತಾನು ಬೆಳೆದು ನಿರಂತರ ಹಣ್ಣು ನೀಡುತ್ತಲೇ ಇರುತ್ತದೆ. ಇದಕ್ಕೆ ನೀರು, ಗೊಬ್ಬರ ಹಾಕಿ ವಿಶೇಷವಾದ ಆರೈಕೆ ಮಾಡುವ ಅಗತ್ಯವಿಲ್ಲ. ಸ್ಥಳೀಯ ಜೋಪಡಿ, ಗುಡಿಸಲಿನ ಜನಕ್ಕೆ ಬೇಸಿಗೆಯಲ್ಲಿ ಆಹಾರ. ಇವನ್ನೆಲ್ಲಾ ಕೊಯ್ದು ಸನಿಹದ ಸಂತೆಯಲ್ಲಿ ಮಾರಿ, ಹೊಟ್ಟೆ ಬಟ್ಟೆ ಹೊರೆದುಕೊಳ್ಳುತ್ತಾರೆ.
ಈ ಮರಗಳ ಹಕ್ಕು ಹೆಂಗಸರದು. ಈ ಗಿಡಗಳು ಹೆಚ್ಚು ಎತ್ತರವಲ್ಲದ ಪ್ರಯುಕ್ತ ಕಾಯಿಗಳ ಕೊಯ್ಲು ಸುಲಭ. ಬೆಳೆದ ಕಾಯಿಗಳನ್ನು ಅದರ ಸೊಪ್ಪಿನಲ್ಲೇ ಹಣ್ಣು ಮಾಡಲು ಇಡುತ್ತಾರೆ. ನಾಲ್ಕು ದಿನಗಳಲ್ಲಿ ಎಲ್ಲಾ ಕಾಯಿಗಳೂ ಹಣ್ಣಾಗಿ ಬುಟ್ಟಿಯಲ್ಲಿ ಸಂತೆಗೆ ಹೊರಟು ನಿಲ್ಲುತ್ತವೆ. ಬೆಲೆ ಒಂದು ಹಣ್ಣಿಗೆ ಐದು ರೂಪಾಯಿ ಸಿಕ್ಕಿದರೆ ಹಬ್ಬದೂಟ. ಕಡಿಮೆ ಬೆಲೆ ಸಿಕ್ಕಿದರೂ ಲುಕ್ಸಾನಿಲ್ಲ. ಕಾರಣ ಕಾಡಿನಲ್ಲಿ ಸಿಗುವ ಪುಕ್ಕಟೆ ಹಣ್ಣು. ಒಂದು ಬುಟ್ಟಿಯಿಂದ ಸುಮಾರು ೫೦೦ ರೂಪಾಯಿವರೆಗೆ ಗಳಿಕೆ. ವಾರದ ಖರ್ಚುವೆಚ್ಚ ಕಳೆದು ಉಳಿದರೆ ಬಟ್ಟೆಗೆ.
ಆಂಧ್ರದಲ್ಲಿ ದೀಪಾವಳಿಯ ಸಮಯಕ್ಕೆ ಫಸಲು ಸಿಗುತ್ತದೆ. ನಮ್ಮಲ್ಲಿ ಶಿವರಾತ್ರಿಯವರೆಗೂ ಇರುತ್ತದೆ. ಎಲ್ಲೆಲ್ಲೂ ಸಿಗುವುದು ದೇಸೀಯ ತಳಿ ಮಾತ್ರ. ’ಪೆರಿಮೋಯ’ ಎನ್ನುವ ಬರ ನಿರೋಧಕ ತಳಿಯಿದು.
ಗುಡ್ಡಗಳ ಇಳಿಜಾರು, ಕಲ್ಲುಮಿಶ್ರಿತ ಮಣ್ಣಿನ, ಕಣಿವೆ ಪ್ರದೇಶಗಳಲ್ಲಿ ಸಾವಿರ, ಸಾವಿರ ಸಂಖ್ಯೆ ಗಿಡಗಳು ಏಕಪ್ರಕಾರದ ಕಾಡನ್ನೇ ಸೃಷ್ಟಿಸಿರುತ್ತವೆ.
ಉದುರಿದ ಹಣ್ಣುಗಳಿಂದ ಬೀಜಪ್ರಸಾರ. ಗಟ್ಟಿ ಕವಚದ ಬೀಜಗಳು ಒಡೆದದ್ದು ಹೇಗೆ, ಬೀಜೋಪಚಾರವಾದದ್ದು ಹೇಗೆ ಎನ್ನುವ ಗುಟ್ಟು ರಟ್ಟಾಗಿಲ್ಲ.
ಗುಲ್ಬರ್ಗಾ, ರಾಯಚೂರು, ಬಳ್ಳಾರಿಯ ಅತಿ ಬಡವರಿಗಿದು ಬದುಕು ನೀಡುತ್ತದೆ. ಮಾನ್ವಿಯಲ್ಲಿ ಹಣ್ಣು ಮಾರುವ ಯಾದವ್ವ, ಮಾರವ್ವ, ರಾಮವ್ವ, ವೆಂಕು, ಜೀನಾಬೀ, ಹುಸೇನ್ಬೀ ಇವರುಗಳೆಲ್ಲಾ ಹೊಲ-ಗದ್ದೆಗಳಿಲ್ಲದವರು. ಕೂಲಿ ಮಾಡುವವರೂ ಅಲ್ಲ. ಹೊತ್ತಿಗೊಂದು ಊಟ ಸಿಗುವುದು ಕಷ್ಟ. ಅವರಿಗೆಲ್ಲಾ ಈ ಕಲ್ಲು ಕಣಿವೆಯ ಮರಗಳೇ ಆಶ್ರಯ. ದಿನಾಲೂ ಒಂದೊಂದು ಬುಟ್ಟಿ ಕಾಯಿಗಳನ್ನು ಕೊಯ್ದು ತಂದು ಹಣ್ಣು ಮಾಡಲು ಹಾಕುತ್ತಾರೆ. ಹಣ್ಣಾಗಿದ್ದನ್ನು ಓಣಿ-ಓಣಿ ತಿರುಗಿ, ಸಂತೆಗೊಯ್ದು ಮಾರಾಟ ಮಾಡುತ್ತಾರೆ.
’ನೇಕು ಮೂರು ಮಾಸಮುಂಟೆ ಜೀವನಮು ಬಾಬು” ಎಂದು ಹೇಳುತ್ತಾರೆ ಯಾದಮ್ಮ. ಹಣ್ಣು ಮುಗಿದ ಮೇಲೆ ಮತ್ತೆ ಹಳೆಯ ಬದುಕಿಗೆ ಹಿನ್ನಡೆ.
ಹೈದರಾಬಾದ್, ಬೆಂಗಳೂರು, ಚೆನ್ನೈ, ಮುಂಬೈ, ದೆಹಲಿಯಲ್ಲಿ ಸೀತಾಫಲಕ್ಕೆ ಉತ್ತಮ ಬೆಲೆಯಿದೆ. ಆಂಧ್ರದ ಅರಣ್ಯ ಇಲಾಖೆ, ತೋಟಗಾರಿಕಾ ಇಲಾಖೆಗಳು ಸೀತಾಫಲದ ಬೇಸಾಯ, ಮಾರಾಟ, ಸಾಗಾಣಿಕೆಯ ವ್ಯವಸ್ಥೆ ಮಾಡುತ್ತಿವೆ. ಆದರೆ ಕರ್ನಾಟಕವೇಕೋ ಹಿಂದೆ ಬಿದ್ದಿದೆ.
Leave A Comment